ಕಾಂಗ್ರೆಸ್‌ನ ಭರವಸೆಗಳು ರೈತರ ಪಾಲಿಗೆ ಹುಸಿಯಾಗಿದೆ – ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಆರೋಪ

0

ಪುತ್ತೂರು: ಚುನಾವಣೆ ಬಂದಾಗ ಬಹಳಷ್ಟು ಗ್ಯಾರೆಂಟಿಗಳನ್ನು ಘೋಷಣೆ ಮಾಡುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆ ಸಂದರ್ಭ ಕಾಂಗ್ರೆಸ್ ಬಹಳಷ್ಟು ಭರವಸೆಯನ್ನು ನೀಡಿತ್ತು. ಆ ಭರವಸೆಗಳು ರೈತರ ಪಾಲಿಗೆ ಹುಸಿಯಾಗಿದೆ ಎಂದು ರಾಜ್ಯ ಸಹಕಾರ ಪ್ರಕೋಷ್ಠದ ಸಂಚಾಲಕರಾಗಿರುವ ಮಾಜಿ ಶಾಸಕ ಸಂಜೀವ ಮಠಂದೂರು ಆರೋಪ ಮಾಡಿದ್ದಾರೆ.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿ ಒಂದು ಕಡೆ ಬರ, ಇನ್ನೊಂದು ಕಡೆ ಹಣದುಬ್ಬರ, ಬೆಲೆ ಏರಿಕೆಯಿಂದ ರೈತ ತತ್ತರಿಸಿ ಹೋಗಿದ್ದಾನೆ. ಚುನಾವಣೆ ಸಂದರ್ಭ ಬೆಲೆ ಏರಿಕೆ, ಹಣದುಬ್ಬರದಿಂದ ಜನ ತತ್ತರಿಸಿ ಹೋಗಿದ್ದಾರೆ ಎಂದು ಕಾಂಗ್ರೆಸ್ ಐದು ಗ್ಯಾರೆಂಟಿ ಘೋಷಣೆ ಮಾಡಿತ್ತು. ಅದರ ಜೊತೆಯಲ್ಲಿ ರೈತರಿಗೆ ಒಂದಷ್ಟು ಭರವಸೆ ನೀಡಿತ್ತು. ಆದರೆ ರೈತರಿಗೆ ನೀಡಿದ ಭರವಸೆ ಇವತ್ತು ಯಾವುದು ಸಿಕ್ಕಿಲ್ಲ. ರೈತ ಇವತ್ತು ಯಾವುದನ್ನು ಬಿಟ್ಟಿಭಾಗ್ಯವನ್ನು ಕೇಳುತ್ತಿಲ್ಲ. ರೈತ ಕೃಷಿ ಮಾಡಲು ಸಾಲ ಕೇಳುತ್ತಿದ್ದಾನೆ. ಈಗಾಗಲೇ ಸರಕಾರ ರೂ. 3 ಲಕ್ಷವನ್ನು ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ಮತ್ತು ರೂ. 10 ಲಕ್ಷವನ್ನು ಶೇ.3 ಬಡ್ಡಿ ದರದಲ್ಲಿ ಮಧ್ಯಮವಾದಿ ಸಾಲವನ್ನು ನೀಡುತ್ತಿತ್ತು. ಕಾಂಗ್ರೆಸ್ ಸರಕಾರ ಶೂನ್ಯ ಬಡ್ಡಿ ದರದ ರೂ. 3ಲಕ್ಷವನ್ನು 5ಲಕ್ಷಕ್ಕೆ ಮತ್ತು ಶೇ.3 ಬಡ್ಡಿ ದರದ 10 ಲಕ್ಷವನ್ನು ರೂ. 15 ಲಕ್ಷ ಮತ್ತು ಪಶು ಖರೀದಿಗೆ ಶೂನ್ಯ ಬಡ್ಡಿ ದರದಲ್ಲಿ ರೂ. 3ಲಕ್ಷ, ಮೀನುಗಾರ ಮಹಿಳೆರಿಗೆ ಶೂನ್ಯ ಬಡ್ಡಿ ದರದಲ್ಲಿ ರೂ. 3ಲಕ್ಷ ಕೊಡುವುದಾಗಿ ಅಧಿಕಾರಕ್ಕೆ ಬಂದ ತಕ್ಷಣ ನೀಡುವುದಾಗಿ ಭರವಸೆ ನೀಡಿತ್ತು. ಈ ಕುರಿತು ಸರಕಾರ ಮೂರು ತಿಂಗಳ ಹಿಂದೆ ರಿಜಿಸ್ಟ್ರಾರ್ ಆಫ್ ಕೋ ಆಪರೇಟಿವ್ ಸೊಸೈಟಿ ಮೂಲಕ ಸಾಲ ಯೋಜನೆಗೆ ಆದೇಶ ನೀಡಿತ್ತು. ಆದರೆ ಇಲ್ಲಿನ ತನಕ ರೈತರಿಗೆ ಸಾಲ ದೊರೆಯುತ್ತಿಲ್ಲ. ಯಾಕೆಂದರೆ ಹಣಕಾಸು ವ್ಯವಸ್ಥೆ ಒದಗಿಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಆ ಮೂಲಕ ರೈತರ ಪಾಲಿಗೆ ಕಾಂಗ್ರೆಸ್ ಭರವಸೆ ಹುಸಿಯಾಗಿದೆ. ಅದಷ್ಟು ಬೇಗ ರೈತರಿಗೆ ಸಾಲ ವ್ಯವಸ್ಥೆ ಮಾಡಬೇಕೆಂದು ಅವರು ಆಗ್ರಹಿಸಿದರು.

ರೈತ ವಿದ್ಯಾನಿಧಿ, ಕಿಸಾನ್ ಸಮ್ಮಾನ್ ನಿಧಿ ನಿಲ್ಲಿಸಿದ ಕಾಂಗ್ರೆಸ್ ಸರಕಾರ

ಬಿಜೆಪಿ ಸರಕಾರ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ದ.ಕ.ಜಿಲ್ಲೆಯಲ್ಲಿ ಸುಮಾರು 24 ಸಾವಿರ ವಿದ್ಯಾರ್ಥಿಗಳಿಗೆ ನೀಡುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 4 ಸಾವಿರದಿಂದ 11 ಸಾವಿರ ತನಕ ಈ ಶೈಕ್ಷಣಿಕ ವರ್ಷದಲ್ಲಿ ಯಾವೊಬ್ಬ ರೈತರ ಮಕ್ಕಳಿಗೂ ವಿದ್ಯಾನಿಧಿ ಪಾವತಿಯಾಗಿಲ್ಲ. ಕಾರಣ ಕಾಂಗ್ರೆಸ್ ಸರಕಾರ ಬಂದ ತಕ್ಷಣ ರೈತ ಮಕ್ಕಳಿಗೆ ನೀಡುವ ವಿದ್ಯಾನಿಧಿಯನ್ನು ನಿಲ್ಲಿಸಿದೆ. ಇದರ ಜತೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 1.50 ಲಕ್ಷ ರೈತರಿಗೆ ಕಿಸಾನ್ ಮಸ್ಮಾನ ಯೋಜನೆಯನ್ನು ಕಳೆದ 8 ವರ್ಷದಿಂದ ಕೇಂದ್ರ ಸರಕಾರ ರೂ. 6ಸಾವಿರವನ್ನು ಮತ್ತು ಯಡಿಯೂರಪ್ಪ ಸರಕಾರ ಅದಕ್ಕೆ ರೂ. 4ಸಾವಿರ ಸೇರಿಸಿ ಒಟ್ಟು ರೂ. 10ಸಾವಿರ ನೀಡುತ್ತಿತ್ತು. ಇವತ್ತು ರಾಜ್ಯ ಕಾಂಗ್ರೆಸ್ ಸರಕಾರ ತನ್ನ ರೂ. 4ಸಾವಿರ ನಿಧಿಯನ್ನು ನಿಲ್ಲಿಸಿದೆ. ಆದರೆ ಕೇಂದ್ರಸ ಸರಕಾರದ ಹಣ ಇವತ್ತು ಕೂಡಾ ನಿಂತರವಾಗಿ ಬರುತ್ತಿದೆ. ಹವಾಮಾನ ಆಧಾರಿತ ವಿಮೆ ಸೆಪ್ಟೆಂಬರ್ ತಿಂಗಳಲ್ಲಿ ಬರುತ್ತಿತ್ತು. ದ.ಕ.ಜಿಲ್ಲೆಯಲ್ಲಿ 92,857 ರೈತರಿಗೆ ರೂ. 374 ಕೋಟಿ ಹಣ ಬರುತ್ತಿತ್ತು. ಅದು ಕಾಂಗ್ರೆಸ್ ಸರಕಾರ ಬಂದ ಬಳಿಕ ಬಂದಿಲ್ಲ. ಹೀಗೆ ಪ್ರತಿಯೊಂದಲ್ಲೂ ರೈತನನ್ನು ಕಾಂಗ್ರೆಸ್ ಕಡೆಗಣಿಸಿದೆ. ಹಾಗಾಗಿ ರೈತ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ ಎಂದು ಸಂಜೀವ ಮಠಂದೂರು ಹೇಳಿದರು.

ಹಾಲು ಉತ್ಪಾದಕರಿಗೆ ಪಂಗನಾಮ:
ಹಾಲು ಉತ್ಪಾದಕರಿಗೆ ಸರಕಾರ ಲೀಟರ್‌ಗೆ ರೂ. 5 ಸಹಾಯಧನ ಹಿಂದೆ ನೀಡುತ್ತಿತ್ತು. ಕಾಂಗ್ರೆಸ್ ಚುನಾವಣೆಯ ಸಂದರ್ಭದಲ್ಲಿ ರೂ. 7 ಸಹಾಯಧನವನ್ನು ಕೊಡುತ್ತೇವೆ ಎಂದು ಭರವಸೆ ನೀಡಿದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 5 ರೂಪಾಯಿಯೂ ಇಲ್ಲ. 7 ರೂಪಾಯಿಯೂ ಇಲ್ಲ ಎಂದಾಗಿದೆ. ಸುಮಾರು 5 ತಿಂಗಳಿAದ ರೈತರಿಗೆ ಈ ಸಹಾಯಧನ ಬಂದಿಲ್ಲ. ಹಾಲು ಉತ್ಪಾದಕರಿಗೂ ಪಂಗನಾಮ ಹಾಕುವ ಕೆಲಸ ಈ ಕಾಂಗ್ರೆಸ್ ಸರಕಾರ ಮಾಡಿದೆ. ಬಿಜೆಪಿ ಸರಕಾರ ಇರುವಾಗ ರೈತರಿಗೆ ದಿನದ 24 ಗಂಟೆಯೂ ವಿದ್ಯುತ್ ನೀಡಲಾಗುತ್ತಿತ್ತು. ಈ ಕಾಂಗ್ರೆಸ್ ಸರಕಾರ ಬಂದ ಬಳಿಕ ನಿರಂತರ 7 ಗಂಟೆ ವಿದ್ಯುತ್ ಕೊಡುತ್ತೇವೆ ಎಂದು ಹೇಳಿ ಕೊನೆಗೆ ಈ ಮಳೆ ಗಾಲದಲ್ಲೂ 2 ಗಂಟೆ ವಿದ್ಯುತ್ ನೀಡಲಾಗುತ್ತಿಲ್ಲ. ಒಟ್ಟಿನಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣ ಕುಮಾರ್ ರೈತ ಸಹಕಾರ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಕೆ.ವಿ.ಪ್ರಸಾದ್, ಟಿಎಪಿಸಿಎಂಎಸ್‌ನ ನಿರ್ದೇಶಕ ಪೊಡಿಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here