ಪುತ್ತೂರು: ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿ ಸಭೆ ಹಾಗೂ ಸನ್ಮಾನ ಸಮಾರಂಭ ಅ. 10 ರಂದು ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.ಸಂಘದ ವತಿಯಿಂದ ಆಗೋಸ್ಟ್ ತಿಂಗಳಲ್ಲಿ ನಡೆದ ಆಟಿದ ಕೂಟ ಕಾರ್ಯಕ್ರಮದ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಲಾಯಿತು.
ಸನ್ಮಾನ
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆಯಾಗಿ ಆಯ್ಕೆಯಾದ ಮಲ್ಲಿಕಾ ಪ್ರಶಾಂತ್ ಪಕ್ಕಳ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಸದಸ್ಯೆಯಾಗಿ ಆಯ್ಕೆಯಾದ ರೂಪರೇಖಾ ಆಳ್ವರವನ್ನು ತಾಲೂಕು ಬಂಟರ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ದಶಂಬರ್ ತಿಂಗಳಲ್ಲಿ ಮಹಾಸಭೆ- ಶಶಿಕುಮಾರ್ ರೈ
ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಅಕ್ಟೋಬರ್ ತಿಂಗಳ 28,29 ರಂದು ನಡೆಯಲಿರುವ ವಿಶ್ವ ಬಂಟರ ಸಮ್ಮೇಳನದಲ್ಲಿ ಪುತ್ತೂರು ತಾಲೂಕಿನ ಬಂಟ ಭಾಂದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು, ತಾಲೂಕು ಬಂಟರ ಸಂಘದ ಮಹಾಸಭೆಯನ್ನು ದಶಂಬರ್ ತಿಂಗಳ ಪ್ರಥಮ ವಾರದಲ್ಲಿ ನಡೆಸುವಲ್ಲಿ ಎಲ್ಲರ ಸಹಕಾರವನ್ನು ಕೋರಿದರು. ತಾಲೂಕು ಬಂಟರ ಸಂಘದ ವತಿಯಿಂದ ಜಾಗ ಖರೀದಿ ಪ್ರಕ್ರಿಯೆಯು ಅತೀ ಶ್ರೀಘ್ರದಲ್ಲಿ ನಡೆಯಲಿದೆ ಎಂದು ಹೇಳಿದರು. ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಮತ್ತು ಅಕ್ರಮ-ಸಕ್ರಮ ಸಮಿತಿ ಸದಸ್ಯೆ ರೂಪರೇಖಾ ಆಳ್ವರವರು ಉನ್ನತವಾದ ಸ್ಥಾನವನ್ನು ಪಡೆದಿರುವುದು ಬಂಟ ಸಮಾಜಕ್ಕೆ ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.
ಉತ್ತಮ ಹೆಸರು ಪಡೆಯಿರಿ- ಸೀತಾರಾಮ ರೈ
ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈಯವರು ಮಾತನಾಡಿ ಮಲ್ಲಿಕಾ ಪ್ರಶಾಂತ್ ಪಕ್ಕಳ ಮತ್ತು ರೂಪರೇಖಾ ಆಳ್ವರವರುಗಳು ತಮಗೆ ದೊರೆತಿರುವ ಅವಕಾಶದ ಮೂಲಕ ಉತ್ತಮ ಹೆಸರನ್ನು ಪಡೆಯಿರಿ ಎಂದು ಹಾರೈಸಿದರು.
ಐಕ್ಯತೆಯ ಸಂಕೇತ- ಹೇಮನಾಥ ಶೆಟ್ಟಿ
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ವಿಶ್ವ ಬಂಟರ ಸಮ್ಮೇಳನವು ಬಂಟ ಸಮಾಜದ ಐಕ್ಯತೆಯ ಸಂಕೇತವಾಗಿದ್ದು, ಇದರಲ್ಲಿ ಎಲ್ಲರೂ ಭಾಗವಹಿಸುವಂತೆ ವಿನಂತಿಸಿದರು.
ಬಂಟರ ಸಂಘ ಉತ್ತಮ ಹೆಸರು ಪಡೆದಿದೆ- ಚಿಕ್ಕಪ್ಪ ನಾಕ್
ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾಕ್ರವರು ಮಾತನಾಡಿ ಶಶಿಕುಮಾರ್ ರೈ ಬಾಲ್ಯೊಟ್ಟುರವರ ನೇತ್ರತ್ವದಲ್ಲಿ ತಾಲೂಕು ಬಂಟರ ಸಂಘವು ಉತ್ತಮ ಹೆಸರನ್ನು ಪಡೆದಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ತಾಲೂಕು ಬಂಟರ ಸಂಘದ ನಿಕಟಪೂರ್ವಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಮಾಜಿ ಅಧ್ಯಕ್ಷ ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಮುಂಡಾಳಗುತ್ತು, ತಾಲೂಕು ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತಡ್ಡರವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ ಸ್ವಾಗತಿಸಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ ವಂದಿಸಿದರು.
ಗೌರವರ್ಪಣೆ- ಮಲ್ಲಿಕಾ ಪ್ರಶಾಂತ್ ಪಕ್ಕಳ ಮತ್ತು ರೂಪರೇಖಾ ಆಳ್ವರವರನ್ನು ಜಿ.ಪಂ. ಮಾಜಿ ಸದಸ್ಯೆ ಕಾವು ಅನಿತಾ ಹೇಮನಾಥ ಶೆಟ್ಟಿರವರು ಹೂಗುಚ್ಚ ನೀಡಿ, ಗೌರವರ್ಪಣೆಗೈದರು.
ಸಮಾರಂಭದಲ್ಲಿ ತಾಲೂಕು ಬಂಟರ ಸಂಘದ ಉಪಾಧ್ಯಕ್ಷರುಗಳು, ನಿರ್ದೇಶಕರುಗಳು, ಕಾರ್ಯಕಾರಿ ಸಮಿತಿ ಸದಸ್ಯರುಗಳು, ಮಾತೃ ಸಂಘದ ಪದಾಧಿಕಾರಿಗಳು, ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.
ವಿಶ್ವ ಬಂಟರ ಸಮ್ಮಿಲನಕ್ಕೆ ಉಚಿತ ಬಸ್ ವ್ಯವಸ್ಥೆ
ಅಕ್ಟೋಬರ್ 28, 29 ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ಜರಗಲಿರುವ ವಿಶ್ವ ಬಂಟರ ಸಮ್ಮಿಲನ, ವಿಶ್ವ ಬಂಟರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ವೈಭವ-2023 ಕಾರ್ಯಕ್ರಮ ಜಗತ್ತಿನ ಬಂಟರ ಹೆಮ್ಮೆಯ ಕಾರ್ಯಕ್ರಮವಾಗಿದ್ದು, ಅತ್ಯಂತ ಅದ್ದೂರಿ ಹಾಗೂ ಅಚ್ಚುಕಟ್ಟಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಂಟ ಸಮಾಜ ಭಾಂದವರಿಗೆ ಪುತ್ತೂರಿನಿಂದ ಉಚಿತವಾಗಿ ಬಸ್ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಭಾಗವಹಿಸುವವರು ತಾಲೂಕು ಬಂಟರ ಸಂಘದ ಕಚೇರಿಯಲ್ಲಿ ಹೆಸರು ನೊಂದಾಯಿಸಬೇಕಾಗಿ ವಿನಂತಿ.