ಕಡಬ: ಮಹಾನಗರದಲ್ಲಿ ಆರಂಭವಾಗಿ ರಾಜ್ಯಾದ್ಯಂತ ವಿಸ್ತರಣೆ ಆಗಿರುವ ಇಂದಿರಾ ಕ್ಯಾಂಟೀನ್ ಕಾಯಕಲ್ಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ರಾಜ್ಯದಲ್ಲಿ ಮತ್ತೆ 188 ಹೊಸ ಇಂದಿರಾ ಕ್ಯಾಂಟೀನ್‌ಗಳು ತೆರೆದುಕೊಳ್ಳಲಿದೆ. ಮಹಾನಗರಪಾಲಿಕೆ, ನಗರಸಭೆ ಪುರಸಭೆ ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಶೀಘ್ರ ಇಂದಿರಾ ಕ್ಯಾಂಟೀನ್ ಕಾರ್ಯಾರಂಭ ಮಾಡಲಿದ್ದು, ಹೊಸ ತಾಲೂಕು ಕಡಬದಲ್ಲಿಯೂ ಇಂದಿರಾ ಕ್ಯಾಂಟೀನ್ ಆರಂಭಗೊಂಡು ಜನರ ಹೊಟ್ಟೆ ತಣಿಸಲಿದೆ.
ಎಪಿಎಂಸಿ ಪ್ರಾಂಗಣದ ಬಳಿ ಸ್ಥಳ ನಿಗದಿ: ಕಡಬದಲ್ಲಿ ತಾಲೂಕು ಆಡಳಿತ ಸೌಧ ಮುಂಭಾಗದಲ್ಲಿರುವ ಎಪಿಎಂಸಿ ಪ್ರಾಂಗಣದ ಬಳಿ ಇಂದಿರಾ ಕ್ಯಾಂಟೀನ್‌ಗಾಗಿ ಈಗಾಗಲೇ ಕಂದಾಯ ಇಲಾಖೆ 5.5 ಸೆಂಟ್ಸ್ ಜಾಗವನ್ನು ಗುರುತಿಸಿಕೊಟ್ಟಿದೆ. ಕ್ಯಾಂಟೀನ್ ಆರಂಭಿಸಲು ಉದ್ದೇಶಿಸಿರುವ ಜಾಗದ ಆಸುಪಾಸಿನಲ್ಲಿಯೇ ತಾಲೂಕು ಕಚೇರಿ ಹಾಗೂ ಎಪಿಎಂಸಿ ಪ್ರಾಂಗಣ ಇದೆ. ಮುಂದೆ ನ್ಯಾಯಾಲಯ, ಉಪ ನೋಂದಣಾಧಿಕಾರಿಗಳ ಕಚೇರಿಗಳೂ ಕೂಡ ಅದೇ ಪರಿಸರದಲ್ಲಿ ಆರಂಭಗೊಳ್ಳಲಿದೆ. ಆದುದರಿಂದ ಅಲ್ಲಿನ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ಇಂದಿರಾ ಕ್ಯಾಂಟೀನ್ ವರದಾನವಾಗಲಿದೆ.
ಹಲವು ಬದಲಾವಣೆ: ಇಂದಿರಾ ಕ್ಯಾಂಟೀನ್‌ಗೆ ಮತ್ತೆ ಹಳೆಯ ವೈಭವ ಕಲ್ಪಿಸುವ ಹಾಗೂ ಇನ್ನಷ್ಟು ಉನ್ನತೀಕರಿಸುವ ವಿಚಾರವಾಗಿ ಸರಕಾರ ರೂಪುರೇಷೆ ಸಿದ್ಧಪಡಿಸಿದ್ದು, ಸದ್ಯ ಕ್ಯಾಂಟೀನ್‌ನಲ್ಲಿ ಬೆಳಗ್ಗೆ 7.30 ರಿಂದ 10.30ರ ವರೆಗೆ ತಿಂಡಿ ವಿತರಣೆ, ಮಧ್ಯಾಹ್ನ 12.30ರಿಂದ 2.30ರವರೆಗೆ ಮಧ್ಯಾಹ್ನದ ಊಟ, ರಾತ್ರಿ 7.30 ರಿಂದ 8.30ರವರೆಗೆ ಊಟ ಲಭ್ಯವಿರುತ್ತದೆ. ಆಯಾ ಕ್ಯಾಂಟೀನ್‌ಗಳಲ್ಲಿ ಎಷ್ಟು ಊಟ ಲಭ್ಯವಿದೆ ಎನ್ನುವ ಮಾಹಿತಿ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಪ್ರಕಟಿಸಲಾಗುತ್ತದೆ. ಪ್ರತಿ ಕ್ಯಾಂಟೀನ್‌ನಲ್ಲೂ ಆಹಾರದ ಸುರಕ್ಷತೆಗಾಗಿ ಆರೋಗ್ಯಾಧಿಕಾರಿಗಳನ್ನು ನೇಮಿಸುವುದರ ಜೊತೆಗೆ ಕ್ಯಾಂಟೀನ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಸರಕಾರ ಹೇಳಿದೆ. ಕ್ಯಾಂಟೀನ್‌ನಲ್ಲಿ ಹೊಸ ಐಟಂಗಳನ್ನು ಸೇರ್ಪಡೆಗೊಳಿಸಲು ತೀರ್ಮಾನಿಸಲಾಗಿದ್ದು, ಬೆಳಗ್ಗಿನ ತಿಂಡಿ ಮೆನುವಿನಲ್ಲಿ ಇಡ್ಲಿ, ಪುಳಿಯೋಗರೆ, ಖಾರಾಬಾತ್, ಪೊಂಗಲ್ ರವಾ ಕಿಚಡಿ, ಚಿತ್ರಾನ್ನ, ವಾಂಗಿಬಾತ್, ಕೇಸರಿ ಬಾತ್ ನೀಡಲಾಗುತ್ತಿತ್ತು. ಅದರೊಂದಿಗೆ ಹೊಸದಾಗಿ ಬ್ರೆಡ್ ಜಾಂ ಹಾಗೂ ಮಂಗಳೂರು ಬನ್ಸ್ ನೀಡಲು ನಿರ್ಧರಿಸಲಾಗಿದೆ. ಮಧ್ಯಾಹ್ನದ ಊಟದಲ್ಲಿ ಅನ್ನ, ತರಕಾರಿ ಸಾಂಬಾರ್ ಮತ್ತು ಮೊಸರನ್ನ ಮಾತ್ರ ನೀಡಲಾಗುತ್ತಿತ್ತು. ಈಗ ಅದರ ಜೊತೆಗೆ ದಿನ ಬಿಟ್ಟು ದಿನ ಮುದ್ದೆ, ಸೊಪ್ಪುಸಾರು ಊಟ ಹಾಗೂ ಮುದ್ದೆ ಇಲ್ಲದ ದಿನ ಚಪಾತಿ ಸಾಗು ನೀಡಲು ಮೆನು ಸಿದ್ಧಪಡಿಸಲಾಗಿದೆ. ಬೆಳಗ್ಗಿನ ತಿಂಡಿಗೆ ಕೇವಲ 5 ರೂ. ದರ ಪಡೆಯಲಾಗುತ್ತಿದ್ದು, ಊಟಕ್ಕೆ 10 ರೂ. ಪಡೆಯಲಾಗುತ್ತಿದೆ. ಬೆಳಗ್ಗಿನ ತಿಂಡಿಯ ದರವನ್ನು ಹೆಚ್ಚಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ.