ಯಾವುದೇ ಇಲಾಖೆ ಕಾಮಗಾರಿಯಾದರೂ ಗ್ರಾ.ಪಂ.ಗೆ ತಪಾಸಣೆಗೆ ಅವಕಾಶವಿದೆ

0

ಆರ್ಯಾಪು ಜಮಾಬಂಧಿ ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್

2 ವರ್ಷಗಳಿಗೊಮ್ಮೆ ತೆರಿಗೆ ಪರಿಷ್ಕರಣೆ ಮಾಡಬೇಕು
ಪಂಚಾಯತ್ ವಿಂಗಡಣೆಯಿಲ್ಲ
ಕುಡಿಯುವ ನೀರಿಗೆ ಉಚಿತ ವಿದ್ಯುತ್ ನೀಡಿ ಅಥವಾ ಬಾಕಿ ಬಿಲ್ ಮನ್ನಾ ಮಾಡಿ
ಪೂರ್ಣಕಾಲಿಕ ಪಿಡಿಓ ನೇಮಿಸಿ
ಪಂಪು ಸೆಟ್‌ಗಳಿಗೆ ಸೋಲಾರ್ ಅಳವಡಿಕೆಗೆ ಸಿಇಒ ಮೆಚ್ಚುಗೆ

ಪುತ್ತೂರು:ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಯಾವುದೇ ಇಲಾಖೆಯ ಕಾಮಗಾರಿಯಾದರೂ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳಿಗೆ ತಪಾಸಣೆ ನಡೆಸಲು ಅವಕಾಶವಿದೆ.ಕಾಮಗಾರಿಯಲ್ಲಿ ಲೋಪ, ಕಳಪೆಯಿದ್ದರೆ ನಮ್ಮ ಗಮನಕ್ಕೆ ತಂದು ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳಬಹುದು ಎಂದು ಜಿ.ಪಂ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಡಾ. ಆನಂದ್ ಹೇಳಿದರು.


ಆರ್ಯಾಪು ಗ್ರಾ.ಪಂನಲ್ಲಿ ಅ.11ರಂದು ನಡೆದ 2022-23ನೇ ಸಾಲಿನ ಜಮಾಬಂಧಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪಂಚಾಯತ್‌ನ ವಾರ್ಡ್‌ಗಳಲ್ಲಿ ಯಾವುದೇ ಕಾಮಗಾರಿ ನಡೆಯುವಾಗ ಗುಣಮಟ್ಟ ಹೊಂದಿದೆಯಾ ಎನ್ನುವುದನ್ನು ಗಮನಿಸುತ್ತಿರಬೇಕು.ಕಾಮಗಾರಿಯಲ್ಲಿ ಯಾವುದೇ ಲೋಪಗಳಿದ್ದರೂ ಅಭಿವೃದ್ಧಿ ಅಧಿಕಾರಿ, ತಾ.ಪಂ ಕಾರ್ಯನಿರ್ವಾಹಕಾಧಿಕಾರಿಗಳ ಗಮನಕ್ಕೆ ತರಬೇಕು.ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ತಿಳಿಸಬೇಕು.ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳನ್ನು ಸದಸ್ಯರು ನಿರಂತರವಾಗಿ ಭೇಟಿ ನೀಡಿ ಗಮನಿಸುತ್ತಿರಬೇಕು. ಸಮಸ್ಯೆಗಳಿದ್ದರೆ ಕೂಡಲೇ ಗಮನಕ್ಕೆ ತರಬೇಕು ಎಂದು ಸಿಇಒ ಡಾ. ಆನಂದ್ ಹೇಳಿದರು.


ಕಳಪೆ, ಲೋಪವಿದ್ದರೆ ಕೆಡವಿ ಹೊಸದಾಗಿ ನಿರ್ಮಿಸಬೇಕು:
ಆರ್ಯಾಪು ಗ್ರಾಮದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಯ ಟ್ಯಾಂಕ್, ಪೈಪ್‌ಲೈನ್ ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ.ಗುತ್ತಿಗೆದಾರರಿಂದ ಸ್ಪಂದನೆಯಿಲ್ಲ ಎಂದು ಸದಸ್ಯ ವಸಂತ ತಿಳಿಸಿದರು.ಕುರಿಯದಲ್ಲಿ ನಿರ್ಮಾಣಗೊಂಡಿರುವ ಟ್ಯಾಂಕ್‌ಗೆ ಕ್ಯೂರಿಂಗ್ ಆಗಿದ್ದರೂ ನೀರು ಸೋರುತ್ತಿರುವುದಾಗಿ ಸದಸ್ಯ ನೇಮಾಕ್ಷ ಸುವರ್ಣ ತಿಳಿಸಿದರು.ಗ್ರಾಮಸ್ಥ ರಾಮ್‌ಪ್ರಸಾದ್ ಮಾತನಾಡಿ, ನೀರಿನ ಟ್ಯಾಂಕ್ ನಿರ್ಮಾಣದ ಸಂದರ್ಭದಲ್ಲಿ ಕ್ಯೂರಿಂಗ್ ಆಗಿಲ್ಲ.ಸುಡು ಬೇಸಿಗೆಯಲ್ಲಿ ಕಾಮಗಾರಿ ನಡೆದರೂ ನೀರು ಹಾಕದೇ ಗುಣಮಟ್ಟ ನಿರ್ವಹಿಸಿಲ್ಲ.ಗುತ್ತಿಗೆದಾರರು ಪಂಚಾಯತ್ ಸದಸ್ಯರು, ಅಧಿಕಾರಿಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.ಇದರಿಂದಾಗಿ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ ಎಂದರು.ರಸ್ತೆ ಕಾಮಗಾರಿಯನ್ನು ಕ್ಯೂರಿಂಗ್ ಮಾಡದೇ ಸಮರ್ಪಕವಾಗಿ ನಿರ್ವಹಣೆ ಮಾಡುವುದಿಲ್ಲ.ಕಾಂಕ್ರೀಟ್ ಮಿಕ್ಸಿಂಗ್ ಮಾಡುವ ಸಂದರ್ಭದಲ್ಲಿ ಇಂಜಿನಿಯರ್ ಸ್ಥಳದಲ್ಲಿರುವುದಿಲ್ಲ ಎಂದು ಸದಸ್ಯ ಪುರಷೋತ್ತಮ ರೈ ಹೇಳಿದರು.ನೀರಿನ ಟ್ಯಾಂಕ್ ಹಸ್ತಾಂತರ ಮಾಡುವಾಗ ಸೋರಿಕೆಯ ಬಗ್ಗೆ ಪರಿಶೀಲನೆ ನಡೆಸಿಯೇ ಹಸ್ತಾಂತರ ಮಾಡಲಾಗುತ್ತಿದೆ.ಸೋರಿಕೆಯಿದ್ದರೆ ಅಂತಹ ಟ್ಯಾಂಕ್‌ಗಳನ್ನು ಪಂಚಾಯತ್‌ಗೆ ಹಸ್ತಾಂತರ ಮಾಡುವುದಿಲ್ಲ ಎಂದು ಜಿ.ಪಂ ಇಂಜಿನಿಯರಿಂಗ್ ಇಲಾಖೆ ಸಹಾಯಕ ಇಂಜಿನಿಯರ್ ಸಂದೀಪ್ ತಿಳಿಸಿದರು.ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್ ಮಾತನಾಡಿ, ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಯಾವುದೇ ಇಲಾಖೆಯ ಕಾಮಗಾರಿಗಳನ್ನು ಪರಿಶೀಲಿಸಲು ಪಂಚಾಯತ್‌ಗೆ ಅವಕಾಶವಿದೆ. ಎಲ್ಲಾ ಇಲಾಖಾಧಿಕಾರಿಗಳನ್ನು ಸೇರಿಸಿಕೊಂಡು ಕೆಡಿಪಿ ಸಭೆ ನಡೆಸುವುದು ಇದೇ ಉದ್ದೇಶಕ್ಕೆ.ಗುಣಮಟ್ಟ ಪರಿಶೀಲನೆಗೆ ಅವಕಾಶವಿದೆ.ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಅಭಿವೃದ್ಧಿಗಳು ಅಂತಿಮವಾಗಿ ಪಂಚಾಯತ್ ಆಸ್ತಿ. ಹೀಗಾಗಿ ಸದಸ್ಯರ ಮೂಲಕ ರಿಯಾಲಿಟಿ ಚೆಕ್ ಮಾಡಬೇಕು. ಸರಿಯಾಗಿದ್ದರೆ ಮಾತ್ರ ಹಸ್ತಾಂತರ ಪಡೆದುಕೊಳ್ಳಬೇಕು.ಇಲ್ಲವಾಗಿದ್ದಲ್ಲಿ ಅದನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸಲು ಸೂಚನೆ ನೀಡಬೇಕು ಎಂದು ತಿಳಿಸಿದರು.ಪಂಚಾಯತ್‌ನಲ್ಲಿ ಪ್ರತಿಯೊಬ್ಬರೂ ಪರ್ಸಂಟೇಜ್ ಇಲ್ಲದೆ ಕೆಲಸ ಮಾಡಿದ್ದಾರೆ.ಹೀಗಾಗಿ ಪಂಚಾಯತ್‌ನ ಯಾವುದೇ ಕಾಮಗಾರಿಗಳಲ್ಲಿ ಕಳಪೆಯಾಗಿಲ್ಲ. ಇತರ ಕಾಮಗಾರಿಗಳಲ್ಲಿ ಕಳಪೆಯಾಗಿದೆ ಎಂದು ಸದಸ್ಯ ಪುರುಷೋತ್ತಮ ರೈ ತಿಳಿಸಿದರು.


ತೆರಿಗೆ ಪರಿಷ್ಕರಣೆ ಮಾಡಬೇಕು; ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ ಮತ್ತು ಭೂಮಿ ತೆರಿಗೆಯನ್ನು ಸರಕಾರದ ನಿಯಮದಂತೆ ಪ್ರತಿ ಎರಡು ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡಬೇಕು.ಉಪ ನೋಂದಾವಣೆ ಇಲಾಖೆಯ ದರದ ಮಾರ್ಗಸೂಚಿಯಲ್ಲಿ ಕಟ್ಟಡಗಳ ಮೌಲ್ಯವನ್ನು ಆಧರಿಸಿ ತೆರಿಗೆ ವಿಽಸಲಾಗುತ್ತಿದೆ.ಇದರಿಂದಾಗಿ ಎಲ್ಲರಿಗೂ ಒಂದೇ ರೀತಿ ತೆರಿಗೆ ವಿಽಸಲಾಗುತ್ತಿಲ್ಲ.ಪರಿಷ್ಕರಣೆಯಿಂದಾಗಿ ಕೆಲವು ಕಟ್ಟಡಗಳಿಗೆ ತೆರಿಗೆ ಕಡಿಮೆಯಾಗಬಹುದು. ಖಾಲಿ ನಿವೇಶನಗಳಿಗೆ ತೆರಿಗೆ ಕಡಿಮೆಯಾಗಬಹುದು.ಕಟ್ಟಡಗಳನ್ನು ಅಳತೆ ಮಾಡಿ ನಿಗದಿಪಡಿಸಲಾಗುತ್ತಿದ್ದು ತೆರಿಗೆ ಪರಿಷ್ಕರಣೆ ಮಾಡಬೇಕು ಎಂದು ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ತಿಳಿಸಿದರು.


ಪಂಚಾಯತ್ ವಿಂಗಡಣೆಯಿಲ್ಲ:
ಆರ್ಯಾಪು ಮತ್ತು ಕುರಿಯ ಗ್ರಾಮಗಳನ್ನು ಒಳಗೊಂಡಿರುವ ಏಳು ವಾರ್ಡ್‌ಗಳಲ್ಲಿ 24 ಮಂದಿ ಸದಸ್ಯರನ್ನು ಹೊಂದಿರುವ ಬಹುದೊಡ್ಡ ಪಂಚಾಯತ್ ಆಗಿರುತ್ತದೆ.ಇಲ್ಲಿ ಕುರಿಯಕ್ಕೆ ಪ್ರತ್ಯೇಕ ಪಂಚಾಯತ್ ಆಗಬೇಕು ಎಂದು ಈಗಾಗಲೇ ನಿರ್ಣಯ ಮಾಡಲಾಗಿದೆ.ಪಂಚಾಯತ್ ವಿಂಗಡಣೆಗೊಂಡಾಗ ಅಭಿವೃದ್ಧಿಗೆ ಅನುಕೂಲ.ಹೀಗಾಗಿ ಶೀಘ್ರವಾಗಿ ಕುರಿಯಕ್ಕೆ ಪ್ರತ್ಯೇಕ ಪಂಚಾಯತ್ ಮಾಡುವಂತೆ ಸದಸ್ಯ ವಸಂತ ವಿನಂತಿಸಿದರು.ಪ್ರತಿಕ್ರಿಯಿಸಿದ ಸಿಇಒ ಡಾ.ಆನಂದ್, ಜನಸಂಖ್ಯೆಗೆ ಅನುಗುಣವಾಗಿ ಈಗಿರುವ ಪಂಚಾಯತ್‌ನ್ನು ಮೇಲ್ದರ್ಜೆಗೆ ಏರಿಸುವುದು, ಪಟ್ಟಣ ಪಂಚಾಯತ್ ಮಾಡುವುದು ಹಾಗೂ ಇತರ ಪಂಚಾಯತ್‌ಗಳೊಂದಿಗೆ ವಿಲೀನ ಮಾಡುವುದು ಹಾಗೂ ನಗರ ಸಭೆಗೆ ಸೇರ್ಪಡೆಗೆ ಪ್ರಸ್ತಾವನೆ ಕಳುಹಿಸಲು ಅವಕಾಶವಿದೆ.ಆದರೆ ಪಂಚಾಯತ್ ವಿಂಗಡಣೆಗೆ ಪ್ರಸ್ತಾವನೆಗೆ ಅವಕಾಶವಿಲ್ಲ ಎಂದು ತಿಳಿಸಿದರು.


ಕುಡಿಯುವ ನೀರಿಗೆ ಉಚಿತ ವಿದ್ಯುತ್ ನೀಡಿ ಅಥವಾ ಮನ್ನಾ ಮಾಡಿ: ಗ್ರಾಮಸ್ಥರಿಗೆ ಪಂಚಾಯತ್ ಮೂಲಕ ಸರಬರಾಜು ಮಾಡುವ ನೀರಿನ ಘಟಕಗಳಿಗೆ, ಕೃಷಿಗೆ ಉಚಿತ ವಿದ್ಯುತ್ ನೀಡುವ ಮಾದರಿಯಲ್ಲಿ ಉಚಿತವಾಗಿ ವಿದ್ಯುತ್ ನೀಡಬೇಕು ಅಥವಾ ಬಾಕಿಯಿರುವ ಬಿಲ್‌ನ ಮೊತ್ತವನ್ನು ಮನ್ನಾ ಮಾಡುವಂತೆ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ಹೇಳಿದರು. 2015ರ ತನಕದ ಬಿಲ್‌ಗಳನ್ನು ಮನ್ನಾ ಮಾಡಲಾಗಿದೆ.ಆ ನಂತರದ ಬಿಲ್ ಪಾವತಿಸಲು ಬಾಕಿಯಿದೆ. ಮನ್ನಾ ಮಾಡಲು ಶಾಸಕರ ಮೂಲಕ ಮನವಿ ಮಾಡಲಾಗುವುದು. ಇಲಾಖೆಯಿಂದಲೂ ಪ್ರಸ್ತಾವನೆ ಸಲ್ಲಿಸುವಂತೆ ಪುರುಷೋತ್ತಮ ರೈ ಹೇಳಿದರು.


ಪೂರ್ಣಕಾಲಿಕ ಪಿಡಿಓ ನೇಮಿಸಿ: ಸದಸ್ಯ ಹರೀಶ್ ನಾಯಕ್ ಮಾತನಾಡಿ, ಎರಡು ಗ್ರಾಮಗಳನ್ನು ಹೊಂದಿರುವ ಆರ್ಯಾಪು ದೊಡ್ಡ ಪಂಚಾಯತ್ ಆಗಿದೆ. ಇಲ್ಲಿ ಪ್ರಸ್ತುತ ಪಿಡಿಓರವರು ವಾರದಲ್ಲಿ ಮೂರು ದಿನಗಳು ಮಾತ್ರ ಇರುತ್ತಾರೆ.ಇತರ ಮೂರು ದಿನ ಬೇರೆ ಪಂಚಾಯತ್‌ನಲ್ಲಿ ನಿಯೋಜನೆಯಲ್ಲಿ ಕೆಲಸ ಮಾಡುತ್ತಾರೆ.ಆರ್ಯಾಪು ದೊಡ್ಡ ಪಂಚಾಯತ್ ಆಗಿದ್ದು ಈಗಿರುವ ಪಿಡಿಓರವರನ್ನು ಪೂರ್ಣಕಾಲಿಕವಾಗಿ ಆರ್ಯಾಪು ಗ್ರಾ.ಪಂಗೆ ನೇಮಿಸುವಂತೆ ಅವರು ಮನವಿ ಮಾಡಿದರು. 33 ಪಿಡಿಓ ಹುದ್ದೆ ಖಾಲಿಯಿದೆ.ಹೀಗಾಗಿ ನಿಯೋಜನೆ ಮಾಡಲಾಗಿದ್ದು ಸಮಸ್ಯೆ ಉಂಟಾಗಿದೆ. ನಿಯೋಜನೆಯಲ್ಲಿರುವ ಪಂಚಾಯತ್ ಬಹಳಷ್ಟು ದೂರದಲ್ಲಿರುವುದರಿಂದ ಆ ಪಂಚಾಯತ್‌ಗೆ ಬೇರೆಯವರನ್ನು ನಿಯೋಜನೆ ಮಾಡಲಾಗುವುದು ಎಂದು ಮುಖ್ಯ ಕಾರ್ಯನಿರ್ವಾಹಕಾಽಕಾರಿ ತಿಳಿಸಿದರು.


ಪಂಪು ಸೆಟ್‌ಗಳಿಗೆ ಸೋಲಾರ್ ಅಳವಡಿಕೆಗೆ ಸಿಇಒ ಮೆಚ್ಚುಗೆ: ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪಂಪುಗಳಿಗೆ ಈಗಾಗಲೇ 3 ಕಡೆಗಳಲ್ಲಿ ಸೋಲಾರ್ ಅಳವಡಿಸಲಾಗಿದೆ. 4 ಸೋಲಾರ್ ಸ್ಥಾವರ ಕಾಮಗಾರಿ ನಡೆಯುತ್ತಿದೆ.ಸೋಲಾರ್ ಅಳವಡಿಸಿದ ಬಳಿಕ ವಿದ್ಯುತ್ ಬಿಲ್‌ನ ಹೊರೆ ಕಡಿಮೆಯಾಗಿದೆ.ಅಲ್ಲದೆ ತಾಲೂಕಿನಲ್ಲಿಯೇ ಪ್ರಥಮವಾಗಿ ಜಲ ಜೀವನ್ ಮಿಷನ್ ಮೂಲಕ 5 ಸ್ಥಾವರಗಳಿಗೆ ಸೋಲಾರ್ ಅಳವಡಿಸಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಪಿಡಿಓ ನಾಗೇಶ್ ತಿಳಿಸಿದಾಗ ಜಿ.ಪಂ.ಸಿಇಒ ಡಾ.ಆನಂದ್‌ರವರು ಪಂಚಾಯತ್‌ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಆರ್ಯಾಪು ಗ್ರಾ.ಪಂನಲ್ಲಿ ಸ್ವಚ್ಚ ಮನಸ್ಸಿನ ಸದಸ್ಯರಿದ್ದಾರೆ. ಸದಸ್ಯರು ಹಾಗೂ ಅಽಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.ಇಲ್ಲಿ ಸದಸ್ಯರು ಹಾಗೂ ಅಽಕಾರಿಗಳು ಪರ್ಸಂಟೇಜ್ ಪಡೆಯುವುದಿಲ್ಲ ಎಂದು ಗ್ರಾಮಸ್ಥ ರಾಮ್‌ಪ್ರಸಾದ್ ಅವರು ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ತಾ.ಪಂ.ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿ, ಜಿ.ಪಂ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಇಂಜಿನಿಯರ್ ಸಂದೀಪ್, ಗ್ರಾ.ಪಂ ಅಧ್ಯಕ್ಷೆ ಗೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸದಸ್ಯರಾದ ಕಸ್ತೂರಿ, ಸರಸ್ವತಿ, ಪೂರ್ಣಿಮಾ ರೈ, ಪವಿತ್ರ ರೈ, ಸುಬ್ರಹ್ಮಣ್ಯ ಬಲ್ಯಾಯ, ನಾಗೇಶ್, ನೇಮಾಕ್ಷ ಸುವರ್ಣ, ಚೇತನ್, ಯತೀಶ್ ದೇವ, ಶ್ರೀನಿವಾಸ ರೈ, ಹರೀಶ್ ನಾಯಕ್, ಯಾಕೂಬ್ ಸುಲೈಮಾನ್, ರಕ್ಷಿತಾ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.ಪಿಡಿಓ ನಾಗೇಶ್ ಸ್ವಾಗತಿಸಿ, ಆಯ-ವ್ಯಯಗಳನ್ನು ಮಂಡಿಸಿದರು. ಕಾರ್ಯದರ್ಶಿ ಮೋನಪ್ಪ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.
ಸಭೆಯ ಬಳಿಕ ಪಂಚಾಯತ್‌ನಿಂದ ನೂತನವಾಗಿ ನಿರ್ಮಾಣಗೊಂಡಿರುವ ಬೀಕನ್ ಗ್ರಂಥಾಲಯ, ಬಳಕ್ಕದ ಅಮೃತ ಉದ್ಯಾನವನ ಹಾಗೂ ಕಲ್ಲರ್ಪೆಯಲ್ಲಿರುವ ಸೋಲಾರ್ ಪಂಪು ಸ್ಥಾವರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿ.ಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಆನಂದ್ ಪಂಚಾಯತ್‌ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here