ಪುತ್ತೂರು ರೆಡ್‌ಕ್ರಾಸ್ ಘಟಕದಿಂದ ಸರಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ

0

ಪುತ್ತೂರು: ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯಾಚರಿಸುತ್ತಿರುವ ಡಯಾಲಿಸಿಸ್ ಘಟಕಕ್ಕೆ ಹೊಸ ಸೇರ್ಪಡೆಯಾಗಿ ಡಯಾಲಿಸಿಸ್ ಯಂತ್ರವೊಂದನ್ನು ಪುತ್ತೂರು ರೆಡ್‌ಕ್ರಾಸ್ ವತಿಯಿಂದ ರೂ.7.5 ಲಕ್ಷ ವೆಚ್ಚದಲ್ಲಿ ಅ.16ರಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಗುವುದು ಎಂದು ಪುತ್ತೂರು ರೆಡ್‌ಕ್ರಾಸ್ ಸಭಾಪತಿ ಎಸ್. ಸಂತೋಷ್ ಶೆಟ್ಟಿ ತಿಳಿಸಿದ್ದಾರೆ.

2016ರಲ್ಲಿ 2 ಯೂನಿಟ್‌ಗಳೊಂದಿಗೆ ಪ್ರಾರಂಭವಾದ ಡಯಾಲಿಸಿಸ್ ಘಟಕದಲ್ಲಿ ಸದ್ಯ 9 ಯಂತ್ರಗಳು ಕಾರ್ಯಾಚರಿಸುತ್ತಿದ್ದು ಈವರೆಗೆ 300ಕ್ಕೂ ಮಿಕ್ಕಿ ಕಿಡ್ನಿ ವೈಫಲ್ಯದ ರೋಗಿಗಳು ಡಯಾಲಿಸಿಸ್ ಸೌಲಭ್ಯ ಪಡೆದುಕೊಂಡಿರುತ್ತಾರೆ. 98 ರೋಗಿಗಳು ಸತತ ಡಯಾಲಿಸಿಸ್‌ಗೆ ಒಳಪಡುತ್ತಿದ್ದು ಇನ್ನೂ 40 ರೋಗಿಗಳು
ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ಭಾನುವಾರ ಹೊರತುಪಡಿಸಿ ವಾರದ 6 ದಿನಗಳಲ್ಲಿ 24 ಗಂಟೆಗಳ ಕಾಲ 5 ಪಾಳಿಗಳಲ್ಲಿ ಡಯಾಲಿಸಿಸ್ ಕೇಂದ್ರ ಕಾರ್ಯಾಚರಿಸುತ್ತಿದ್ದು 12 ಮಂದಿ ತಂತ್ರಜ್ಞರು ಸೇರಿದಂತೆ 15 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಡಯಾಲಿಸಿಸ್ ಕೇಂದ್ರಕ್ಕೆ ಇನ್ನೂ 4 ಯಂತ್ರಗಳ ಅಗತ್ಯವಿದೆ. ಪುತ್ತೂರು ರೆಡ್‌ಕ್ರಾಸ್ ಘಟಕವು ಭಾರತೀಯ ರೆಡ್‌ಕ್ರಾಸ್‌ನ ಅಧಿಕೃತ ಮಾಹಿತಿ ಕಾರ್ಯಕ್ರಮಗಳನ್ನು ವಿವಿಧ ಕಾಲೇಜುಗಳಲ್ಲಿ ನಡೆಸುತ್ತಾ ಬರುತ್ತಿದ್ದು ಯುವ ರೆಡ್‌ಕ್ರಾಸ್ ಕಾರ್ಯಕರ್ತರಿಗೆ ತರಬೇತಿಗಳನ್ನೂ ನೀಡಲಾಗುತ್ತಿದೆ. ವಿವಿಧ ದಿನಾಚರಣೆಗಳ ಜತೆ ರಕ್ತದಾನ ಶಿಬಿರಗಳ ಮೂಲಕ ಸಾವಿರಕ್ಕೂ ಮಿಕ್ಕಿ ಯುನಿಟ್ ರಕ್ತ ಸಂಗ್ರಹಿಸಲಾಗಿದೆ ಎಂದು ಸಂತೋಷ್‌ ಶೆಟ್ಟಿ ತಿಳಿಸಿದ್ದಾರೆ.
ಪುತ್ತೂರು ರೆಡ್‌ಕ್ರಾಸ್ ಘಟಕದಿಂದ ಇತ್ತೀಚೆಗೆ ಪುತ್ತೂರು ಸರಕಾರಿ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ರೂ. 1 ಲಕ್ಷ ವೆಚ್ಚದ ಮಲ್ಟಿ ಪ್ಯಾರಾ ಮಾನಿಟರ್ ಕೊಡುಗೆ ಮತ್ತು ಆಸ್ಪತ್ರೆಯ ಹೊರ ಪ್ರಾಂಗಣದ ನಿರೀಕ್ಷಣಾ ಕೊಠಡಿಗೆ ರೂ.50 ಸಾವಿರ ವೆಚ್ಚದಲ್ಲಿ ಟಿವಿಯನ್ನು ನೀಡಲಾಗಿರುವುದನ್ನು ಸ್ಮರಿಸಬಹುದಾಗಿದೆ.

ರೆಡ್‌ಕ್ರಾಸ್ ಕಾರ್ಯದರ್ಶಿ ಆಸ್ಕರ್ ಆನಂದ್, ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಯುನಿಕ್, ರೆಡ್‌ಕ್ರಾಸ್ ಕಾರ್ಯಕ್ರಮ ಸಂಯೋಜನಾ ಉಪಸಮಿತಿಯ ಮುಖ್ಯಸ್ಥ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್, ನಿರ್ದೇಶಕ ನವೀನ್‌ಚಂದ್ರ ನಾೖಕ್‌ ಮತ್ತು ಬಿ. ಟಿ. ಮಹೇಶ್ಚಂದ್ರ ಸಾಲಿಯಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here