ಪುತ್ತೂರು: ಭಾರತದ ಹನ್ನೊಂದನೇ ರಾಷ್ಟ್ರಪತಿ ಡಾ| ಎ ಪಿ ಜೆ ಅಬ್ದುಲ್ ಕಲಾಂರವರ ಜನ್ಮದಿನವನ್ನು ದೇಶದಾದ್ಯಂತ ಇನ್ನೋವೇಶನ್ ಡೇ ಎಂಬ ಹೆಸರಿನಲ್ಲಿ ಗೌರವ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಸಂತ ಫಿಲೋಮಿನಾ ಕಾಲೇಜಿನ ಸ್ಪಂದನ ಸಭಾಭವನದಲ್ಲಿ ಕಾಲೇಜಿನ ಮಾನವಿಕ ಸಂಘ ಇನ್ಸ್ಟಿಟ್ಯೂಷನ್ಸ್ ಇನ್ನೊವೇಶನ್ ಕೌನ್ಸಿಲ್ (ಐಐಸಿ) ಗಳ ಸಂಯುಕ್ತ ಆಶ್ರಯದಲ್ಲಿ ಇನ್ಸ್ಟಿಟ್ಯೂಷನ್ಸ್ ಇನ್ನೊವೇಶನ್ ದಿನವನ್ನು ಆಚರಿಸುವುದರೊಂದಿಗೆ 2023-24ನೇ ಸಾಲಿನ ಐಐಸಿಯ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಲಾಯಿತು. ಪ್ರಾರಂಭದಲ್ಲಿ ಅತಿಥಿಗಳು ಕಲಾಂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲವಂ|ಡಾ| ಆಂಟೊನಿ ಪ್ರಕಾಶ್ ಮೊಂತೆರೋರವರು “ಡಾ| ಎ ಪಿ ಜೆ ಅಬ್ದಲ್ ಕಲಾಂರವರು “ಪೀಪಲ್ಸ್ ಪ್ರೆಸಿಡೆಂಟ್” ಎಂದು ಹೆಸರುವಾಸಿಯಾಗಿದ್ದರು. ಅವರು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದರು. ಅವರು ದೊಡ್ಡ ಕನಸು ಕಾಣಲು ಧೈರ್ಯ ಮತ್ತು ಇತರರನ್ನು ಅದೇ ರೀತಿ ಮಾಡಲು ಪ್ರೇರೇಪಿಸುವ ದಾರ್ಶನಿಕರಾಗಿದ್ದರು. ಡಾ. ಕಲಾಂ ಅವರ ವಿನಮ್ರತೆ ಹಾಗೂ ಸರಳತೆಯು ಪ್ರತಿಯೋರ್ವ ಭಾರತೀಯನಿಗೂ ಮಾದರಿಯಾಗಿದೆ. ವಿಂಗ್ಸ್ ಆಫ್ ಫಯರ್ ಎನ್ನುವ ಅವರ ಆತ್ಮಚರಿತ್ರೆಯನ್ನು ಓದಿ ವಿದ್ಯಾರ್ಥಿಗಳು ಅವರಿಂದ ಪ್ರೇರೇಪಣೆ ಪಡೆಯಬಹುದಾಗಿದೆ. ವಿಶೇಷವಾಗಿ ಕ್ಷಿಪಣಿ ಅಭಿವೃದ್ಧಿ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಮುನ್ನಡೆಸುವಲ್ಲಿ ಅವರ ಸಮರ್ಪಣೆಯು ಅವರನ್ನು ಇನ್ನಷ್ಟು ಎತ್ತರಕ್ಕೆ ಏರುವಂತೆ ಮಾಡಿತು. ಭಾರತದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಯನ್ನಲಂಕರಿಸಿದ್ದರೂ ಕಲಾಂರವರು ಸರಳತೆಗೆ ಇನ್ನೊಂದು ಹೆಸರಾಗಿ ಬಾಳಿದವರು” ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಾಲೇಜಿನ ಉಪಪ್ರಾಂಶುಪಾಲ ಡಾ| ಎ ಪಿ ರಾಧಾಕೃಷ್ಣ ಕಲಾಂರವರು ನಡೆದು ಬಂದ ಹಾದಿಯ ಬಗ್ಗೆ ಮಾತನಾಡುತ್ತಾ “ಕಲಾಂ ರ ಜೀವನವು ತಲೆಮಾರುಗಳಿಗೆ ಮಾದರಿಯಾಗಿದೆ. ಡಾ. ಕಲಾಂರವರು ಯುವಜನರನ್ನು ಅತೀವ ಪ್ರೀತ್ಯಾದರಗಳಿಂದ ಕಾಣುತ್ತಿದ್ದರು. ಅವರು ಭಾರತದ ಬಾಹ್ಯಾಕಾಶ ವಿಜ್ಞಾನದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿರುತ್ತಾರೆ. ಅವರ ಜೀವನ ಮತ್ತು ಬೋಧನೆಗಳು ಭರವಸೆಯ ದಾರಿದೀಪವಾಗಿ ಉಳಿದಿವೆ. ಒಬ್ಬ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದರೂ ಅಸಾಮಾನ್ಯ ಸಾಧನೆಯನ್ನು ಮಾಡಿತೋರಿಸಬಹುದು ಎಂದು ಕಲಾಂರವರು ಜಗತ್ತಿಗೇ ತೋರಿಸಿರುತ್ತಾರೆ. ಅವರು ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ ಪ್ರತಿಯೋರ್ವ ಭಾರತೀಯನಿಗೂ ಮಾದರಿಯಾಗಿರುತ್ತಾರೆ” ಎಂದು ಹೇಳಿದರು.
ಐಐಸಿಯ ಸಂಯೋಜಕ ಅಭಿಷೇಕ್ ಸುವರ್ಣರವರು ಮಾತನಾಡಿ “ಎಂ ಒ ಇ ಎಂದು ಸಂಕ್ಷಿಪ್ತ ರೂಪದಲ್ಲಿ ಕರೆಯಲ್ಪಡುವ ಶಿಕ್ಷಣ ಸಚಿವಾಲಯವು ದೇಶದ ಶಿಕ್ಷಣ ನೀತಿಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿದೆ. ಪ್ರಾಥಮಿಕ ಶಿಕ್ಷಣದಿಂದ ಪ್ರಾರಂಭಿಸಿ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಶಿಕ್ಷಣಗಳ ಗುಣಮಟ್ಟವನ್ನು ವೃದ್ಧಿಸುವಲ್ಲಿ ಅನೇಕ ಮಾನದಂಡಗಳನ್ನು ರೂಪಿಸುವ ಜವಾಬ್ದಾರಿಯನ್ನು ಎಂ ಒ ಇ ಹೊಂದಿದೆ. ಐಐಸಿಯು ಎಂಒಇ ಯ ಭಾಗವಾಗಿದೆ. ಕಾಲೇಜುಗಳಲ್ಲಿ ಐಸಿಯನ್ನು ಸ್ಥಾಪಸಿ ಅದರ ಮುಖಾಂತರ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹಾಗೂ ಉದ್ಯಮಶೀಲತೆಯನ್ನು ಬೆಳೆಸಿ ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.
ಅರ್ಚನಾ ಮತ್ತು ಬಳಗ ಪ್ರಾರ್ಥಿಸಿದರು. ಕಲಾ ವಿಭಾಗದ ಡೀನ್ ಡಾ| ನೋರ್ಬರ್ಟ್ ಮಸ್ಕರೇಞಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂತಿಮ ಬಿಎ ವಿದ್ಯಾರ್ಥಿನಿ ಸ್ವಪ್ನಾ ವಂದಿಸಿದರು. ಅಂತಿಮ ಬಿಎ ವಿದ್ಯಾರ್ಥಿನಿ ಪ್ರಿಯಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಐಐಸಿ ಯ ಅಧ್ಯಕ್ಷೆ ಗೀತಾ ಪೂರ್ಣಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಐಐಸಿಯ ಸಂಯೋಜಕ ಅಭಿಷೇಕ್ ಸುವರ್ಣ, ಸದಸ್ಯರಾದ ಕ್ಯಾಪ್ಟನ್ ಜೋನ್ಸನ್ ಡೇವಿಡ್ ಸಿಕ್ವೆರಾ ಹಾಗೂ ಕಲಾವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.