ಪುತ್ತೂರು: ಮಾಡಾವು ಸಮೀಪದ ಗೌರಿ ಹೊಳೆಯಲ್ಲಿ ಅ.15ರಂದು ಸಂಜೆ ಈಜಲು ತೆರಳಿದ್ದ ಕಟ್ಟತ್ತಾರು ನಿವಾಸಿ ತಸ್ಲೀಂ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು ತಡ ರಾತ್ರಿ ವರೆಗೆ ಅಗ್ನಿ ಶಾಮಕ ದಳ, ಮುಳುಗು ತಜ್ಞರು ಹೀಗೇ ಯಾರೇ ಹುಡುಕಾಡಿದರೂ ಮೃತದೇಹ ಪತ್ತೆಯಾಗಿರಲಿಲ್ಲ.
ಅ.16ರಂದು ಬೆಳಿಗ್ಗೆ ತಸ್ಲೀಂ ಮುಳುಗಿರುವ ಅಂದಾಜು 400 ಮೀ. ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಮುಂಜಾನೆ ಆರು ಗಂಟೆಯ ವೇಳೆಗೆ ಮೃತದೇಹ ಪತ್ತೆಗಾಗಿ ಹಲವರು ನೀರಿನಲ್ಲಿ ಹುಡುಕಾಟ ಆರಂಭಿಸಿದ್ದು ಈ ವೇಳೆ ಸ್ಥಳೀಯ ನಿವಾಸಿ ಬಾಬು ಎರಕ್ಕಲ ಎಂಬವರು ಕೂಡಾ ಹುಡುಕಾಟ ಆರಂಭಿಸಿದ್ದರು. ಈ ವೇಳೆ ತಮ್ಮ ಮನೆಯ ಎದುರಿನ ತೋಟದ ಬದಿಯಲ್ಲಿ ಹಾದು ಹೋಗಿರುವ ಹೊಳೆಯ ಮಧ್ಯಭಾಗದಲ್ಲಿ ಮೃತದೇಹ ಇರುವುದನ್ನು ನೋಡಿದ ಬಾಬು ಎರಕ್ಕಲ ಅವರು ಅಲ್ಲೇ ಅಲ್ಪ ದೂರದಲ್ಲಿ ಹುಡುಕಾಟದಲ್ಲಿ ತೊಡಗಿದ್ದ ಇತರರಿಗೆ ಮಾಹಿತಿ ನೀಡಿದ್ದಾರೆ. ಆ ವೇಳೆ ಅಲ್ಲಿಗೆ ಬಂದ ಆಪತ್ಬಾಂಧವ ಈಶ್ವರ್ ಮಲ್ಪೆ ಹಾಗೂ ಇನ್ನಿತರ ಸ್ಥಳೀಯರು ಹಾಗೂ ಬಾಬು ಎರಕ್ಕಲ ಮೊದಲಾದವರು ಸೇರಿಕೊಂಡು ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ.
ಈ ಕುರಿತು ‘ಸುದ್ದಿ’ ಜೊತೆ ಮಾತನಾಡಿದ ಬಾಬು ಎರಕ್ಕಲ ಅವರು ನಾನು ಬೆಳಿಗ್ಗೆ ಅಂದಾಜು ಆರು ಗಂಟೆಯ ವೇಳೆಗೆ ಮನೆ ಸಮೀಪದ ಹೊಳೆಯಲ್ಲಿ ಮೃತದೇಹ ನೋಡಿದ್ದು ಕೂಡಲೇ ಇತರರಿಗೆ ವಿಷಯ ತಿಳಿಸಿದ್ದೇನೆ, ಬಳಿಕ ಇತರರ ಸಹಕಾರದೊಂದಿಗೆ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಲಾಯಿತು ಎಂದು ತಿಳಿಸಿದ್ದಾರೆ.ಸ್ಥಳೀಯ ನಿವಾಸಿ ನಾಗರಾಜ್ ಭಟ್ ಎಂಬವರು ಅ.15ರಂದು ಸಂಜೆಯಿಂದ ಮಧ್ಯರಾತ್ರಿ ವರೆಗೂ ಹೊಳೆ ನೀರಿನಲ್ಲಿದ್ದು ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.