ಬೆಂಗಳೂರು:ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರದ ಅವಧಿ ಈಗಾಗಲೇ ಪೂರ್ಣಗೊಂಡಿರುವುದರಿಂದ ದಸರಾ ಆಸುಪಾಸಿನಲ್ಲಿ ರಾಜ್ಯ ಬಿಜೆಪಿಗೆ ಹೊಸ ಸಾರಥಿ ನೇಮಕವಾಗುವ ನಿರೀಕ್ಷೆಯಿದೆ.ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಹೆಸರು ಮತ್ತೆ ಮುನ್ನಲೆಗೆ ಬಂದಿದೆ.
ಶೀಘ್ರವೇ ರಾಜ್ಯ ಬಿಜೆಪಿಗೆ ಹೊಸ ಅಧ್ಯಕ್ಷರ ಆಯ್ಕೆಯಾಗಲಿರುವ ವಿಚಾರವನ್ನು ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡ ದೃಢಪಡಿಸಿರುವುದರಿಂದ ರಾಜ್ಯ ಘಟಕದಲ್ಲಿ ನಿರೀಕ್ಷೆ ಹೆಚ್ಚಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಲ್ಲದೆ, ಈ ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದ ಮಾಜಿ ಸಚಿವ ಸಿ.ಟಿ ರವಿ ಮತ್ತು ಯಡಿಯೂರಪ್ಪ ಅವರ ಮಗ, ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ಶಾಸಕ ಬಿ.ವೈ ವಿಜಯೇಂದ್ರ ಅವರ ಹೆಸರುಗಳೂ ಕೇಳಿ ಬರುತ್ತಿದೆ.ಲೋಕಸಭೆ ಚುನಾವಣೆಗೆ ಕೇವಲ ಆರು ತಿಂಗಳು ಮಾತ್ರ ಬಾಕಿ ಇರುವುದರಿಂದ ಹೊಸ ಅಧ್ಯಕ್ಷರ ನೇತೃತ್ವದಲ್ಲಿಯೇ ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಶೀಘ್ರ ನೂತನ ರಾಜ್ಯಾಧ್ಯಕ್ಷರ ನೇಮಕವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.ಹಾಲಿ ರಾಜ್ಯಾಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳ ಆಡಳಿತದ ಅವಧಿ ಮುಕ್ತಾಯಗೊಂಡು 14 ತಿಂಗಳುಗಳೇ ಕಳೆದಿದ್ದರೂ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಸ್ಥಾನಗಳ ಪರಿಷ್ಕರಣೆಯಾಗಿಲ್ಲ.ಲೋಕಸಭೆ ಚುನಾವಣೆಗೆ ಮೊದಲು ಹೊಸ ಪದಾಧಿಕಾರಿಗಳ ಆಯ್ಕೆ ಬಹುತೇಕ ಖಚಿತವಾಗಿದೆ.
ನಳಿನ್ ಕುಮಾರ್ ಕಟೀಲ್ ಅವರ ಅವಧಿ ಮುಗಿದ ಬಳಿಕ ಸಿ.ಟಿ.ರವಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿಸಲು ಒಂದು ಗುಂಪು ಕಸರತ್ತು ನಡೆಸುತ್ತಿತ್ತು.ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿ.ಟಿ.ರವಿಯವರು ಸೋಲು ಕಂಡಿರುವ ಹಿನ್ನೆಲೆಯಲ್ಲಿ ಇದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ.ಸಿ.ಟಿ.ರವಿ ಅವರ ವಿರೋಧಿ ಗುಂಪು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಥವಾ ಬಿ.ವೈ.ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿಗೆ ಅಧ್ಯಕ್ಷರಾಗಿ ನೇಮಿಸುವಂತೆ ಒತ್ತಡ ಹೇರುತ್ತಿದ್ದು, ಕೇಂದ್ರ ನಾಯಕರು ಈ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಶೋಭಾ ಕರಂದ್ಲಾಜೆ ಪರ ಹೈಕಮಾಂಡ್ ಒಲವು?: ಶೋಭಾ ಕರಂದ್ಲಾಜೆ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲು ಪಕ್ಷದ ಹೈಕಮಾಂಡ್ ಕೂಡಾ ಒಲವು ತೋರಿದೆ ಎನ್ನಲಾಗುತ್ತಿದ್ದು ಈ ಕುರಿತು ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಪ್ರಮುಖರ ಅಭಿಪ್ರಾಯ ಕೇಳಲಾಗಿದೆ.
ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿರುವ ತನ್ನ ಮಗ ಬಿ.ವೈ.ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತರುವುದು ಯಡಿಯೂರಪ್ಪನವರ ಅಪೇಕ್ಷೆ.ಆದರೆ ಪಕ್ಷದ ಕೆಲವು ಪ್ರಮುಖರು ಇದಕ್ಕೆ ಅಡ್ಡಗಾಲು ಹಾಕುತ್ತಿರುವುದರಿಂದ, ನಾನಾ ಆಯಾಮಗಳಿಂದ ಪರಾಮರ್ಶೆ ನಡೆಸಿದ ಹೈಕಮಾಂಡ್ ಶೋಭಾ ಕರಂದ್ಲಾಜೆ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಮ್ಮತದ ಆಯ್ಕೆಯಾಗಬಹುದು ಎಂಬ ಲೆಕ್ಕಾಚಾರಕ್ಕೆ ಬಂದಿದೆ.ಯಡಿಯೂರಪ್ಪ ಅವರೂ ಇದನ್ನು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವನ್ನೂ ಹೈಕಮಾಂಡ್ ಹೊಂದಿದೆ.ಶೋಭಾ ಕರಂದ್ಲಾಜೆ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡುವ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರನ್ನು ಸಂಪರ್ಕಿಸಿ ಅಭಿಪ್ರಾಯ ಪಡೆದಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.ನಾವು ಶೀಘ್ರದಲ್ಲೇ ಹೊಸ ಪದಾಧಿಕಾರಿಗಳ ತಂಡವನ್ನು ರಚಿಸುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರು ತಿಳಿಸಿದ್ದಾರೆ.
ಡಿ.ವಿ.,ನಳಿನ್, ಶೋಭಾ..
ಕೇಂದ್ರ ರೈತ ಕಲ್ಯಾಣ ಖಾತೆಯ ಸಹಾಯಕ ಸಚಿವರಾಗಿರುವ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಒಂದು ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದರೆ ಪುತ್ತೂರು ಮೂಲದ ಮೂವರು ರಾಜ್ಯಾಧ್ಯಕ್ಷ ಹುದ್ದೆಗೇರಿದಂತಾಗುತ್ತದೆ.
ಈ ಹಿಂದೆ ಡಿ.ವಿ.ಸದಾನಂದ ಗೌಡ ಅವರು ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು.ಅದಾದ ಬಳಿಕ ಪ್ರಸ್ತುತ ಅಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಕಾರ್ಯನಿರ್ವಹಿಸುತ್ತಿದ್ದಾರೆ.ಡಿ.ವಿ.ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಹಾಗೂ ಶೋಭಾ ಕರಂದ್ಲಾಜೆ ಇವರು ಮೂವರೂ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯವರು ಎನ್ನುವುದು ವಿಶೇಷ.