ಪುತ್ತೂರು: ಶಾರದೋತ್ಸವ ಸಮಿತಿ ಹಾಗೂ ಸುಂದರ ಯಕ್ಷಕಲಾ ವೇದಿಕೆ ಇದರ ಆಶ್ರಯದಲ್ಲಿ ಅ.22ರಂದು 2ನೇ ವರ್ಷದ ಕೊಳ್ತಿಗೆ ಗ್ರಾಮೀಣ ದಸರಾ ನಡೆಯಲಿದೆ ಎಂದು ಕೊಳ್ತಿಗೆ ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಕೆ.ವಸಂತಕುಮಾರ್ ರೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು ಮುಖ್ಯ ಅತಿಥಿಯಾಗಿ ಮಹೇಶ್ ಶೆಟ್ಟಿ ತಿಮರೋಡಿ, ಮಾಜಿ ಶಾಸಕ ಸಂಜೀವ ಮಠಂದೂರು, ಸಮಾಜ ಕಲ್ಯಾಣ ಇಲಾಖೆ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳುವ ಉದ್ದೇಶದಿಂದ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕ್ರೀಡಾ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭೆಗಳನ್ನು ಗೌರವಿಸುವುದಲ್ಲದೆ ವಿಶೇಷ ಸಾಧನೆ ಮಾಡಿದ ಸಾಧಕರಾದ ಹೈಕೋರ್ಟ್ ನ್ಯಾಯವಾದಿ ಮೋಹಿತ್ ಕುದ್ಕುಳಿ, ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಹರ್ಷ ಪ್ರಸಾದ್ ಅವರ ಸನ್ಮಾನ ನಡೆಯಲಿದೆ. ಬೆಳಿಗ್ಗೆ 7.30ಕ್ಕೆ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು 8.30ರಿಂದ ವಿವಿಧ ಭಜನಾ ತಂಡಗಳಿಂದ ಭಜನೆ, ಮಕ್ಕಳು, ಮಹಿಳೆಯರು ಮತ್ತು ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ ನಡೆಯಲಿದೆ. ಇದರೊಂದಿಗೆ ಮಕ್ಕಳ ಕಬಡ್ಡಿ ಮತ್ತು ಗ್ರಾಮದ ತಂಡಗಳಿಗೆ ಕಬಡ್ಡಿ ಪಂದ್ಯಾಟ ನಡೆಯಲಿರುವುದಾಗಿ ವಸಂತ್ ಕುಮಾರ್ ರೈ ಹೇಳಿದರು.
ಇದೇ ವೇಳೆ ಮಾತನಾಡಿದ ಸುಂದರ ಯಕ್ಷಕಲಾ ವೇದಿಕೆಯ ಅಧ್ಯಕ್ಷ ಪ್ರಮೋದ್ ಕೆ ಎಸ್ ಬೆಳಿಗ್ಗೆ 11ರಿಂದ ಅಕ್ಷರಾಭ್ಯಾಸ, ವಾಹನ ಪೂಜೆ, 12.30ಕ್ಕೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ 1 ರಿಂದ ಅಮರ ಶಿಲ್ಪಿ ವೀರ ಶಂಭು ಕಲ್ಕುಡ ತುಳು ಯಕ್ಷಗಾನ ನಡೆಯಲಿದೆ. ಸಂಜೆ 6.30ಕ್ಕೆ ಶ್ರೀದೇವಿಯ ಶೋಭಾಯಾತ್ರೆ ನಡೆದು ಬಳಿಕ ಮೂರ್ತಿ ವಿಸರ್ಜನೆ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾರದೋತ್ಸವ ಸಮಿತಿ ಅಧ್ಯಕ್ಷ ಪವನ್ ಡಿ ಜಿ ದೊಡ್ಡಮನೆ, ಸುಂದರ ಯಕ್ಷಕಲಾ ವೇದಿಕೆ ಕಾರ್ಯದರ್ಶಿ ವೆಂಕಟ್ರಮಣ ಆಚಾರ್ ಉಪಸ್ಥಿತರಿದ್ದರು.