ಬೆಟ್ಟಂಪಾಡಿ: 11ನೇ ವರ್ಷದ ದುರ್ಗಾಪೂಜೆ

0

ಅನುಭಾವಿ ಗುಣವಿರುವ ಸ್ತ್ರೀ ಪೂಜನೀಯಳು – ಪ್ರಕಾಶ್‌ ಮಲ್ಪೆ

ಬೆಟ್ಟಂಪಾಡಿ: ಮಗುವಿನ ಮನಸ್ಸಿನಲ್ಲಿ ತುಂಬಿಕೊಳ್ಳುವ ಕಶ್ಮಲಗಳನ್ನು ನಿವಾರಿಸುವವಳು ತಾಯಿ. ಅನುಭಾವಿ ಗುಣ ಹೊಂದಿರುವ ಸ್ತ್ರೀಯು ಭಗವಂತನ ಹತ್ತಿರ ಇರುತ್ತಾಳೆ. ಪ್ರತೀ ತಾಯಿಯಲ್ಲೂ ದೇವಿಯ ಶಕ್ತಿ ಅಂತರ್ಗತವಾಗಿದೆ. ಹಾಗಾಗಿ ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸುವ ನಮ್ಮ ತಾಯಂದಿರು ಸಾಕ್ಷಾತ್ ದುರ್ಗಾಸ್ವರೂಪಿಯಾಗಿರುವುದರಿಂದ ಪ್ರತಿಯೊಬ್ಬ ಸ್ತ್ರೀಯು ಪೂಜನೀಯ ಸ್ಥಾನ ಹೊಂದಿದ್ದಾರೆ ಎಂದು ಲೇಖಕ, ಅಂಕಣಕಾರ, ಪರಿಸರ ಸಂರಕ್ಷಣಾ ಆಂದೋಲನಗಳ ರುವಾರಿ ಪ್ರಕಾಶ್‌ ಮಲ್ಪೆಯವರು ಹೇಳಿದರು.


ವಿಶ್ವಹಿಂದು ಪರಿಷದ್‌, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಸಾಮೂಹಿಕ ದುರ್ಗಾಪೂಜಾ ಸಮಿತಿ ವತಿಯಿಂದ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅ. 20 ರಂದು ನಡೆದ ಸಾಮೂಹಿಕ ದುರ್ಗಾಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಅವರು ಮಾತನಾಡಿದರು.


ಭಗವಂತನ ಆರಾಧನೆಯಿಂದ ಅಹಂ ನಿರ್ಮೂಲನೆಯಾಗುತ್ತದೆ. ಭಕ್ತಿ ಶ್ರದ್ಧೆಯಿಲ್ಲದ ಭಗವಂತನ ಆರಾಧನೆಯಿಂದ ದೇವರ ಅನುಗ್ರಹ ಪ್ರಾಪ್ತವಾಗುವುದಿಲ್ಲ. ಜಗತ್ತಿನ ಅತ್ಯಂತ ಶಾಂತಿಯ ರಾಷ್ಟ್ರ ಭಾರತವಾಗಿದೆ. ಜಗತ್ತಿಗೆ ಜ್ಞಾನಧಾರೆಯನ್ನು ಹರಿಸಿದ್ದು ಭಾರತ. ಭಾರತ ಮಾತೆಯ ಮಕ್ಕಳು ನಾವು ಎಂಬ ಭಾವ ನಮ್ಮೆಲ್ಲರಲ್ಲಿರಬೇಕುʼ ಎಂದು ಅವರು ಹೇಳಿದರು.


ಸಭಾಧ್ಯಕ್ಷತೆ ವಹಿಸಿದ್ದ ಸಾಮೂಹಿಕ ದುರ್ಗಾಪೂಜಾ ಸಮಿತಿ ಅಧ್ಯಕ್ಷ ಆರ್‌.ಬಿ. ಸುವರ್ಣರವರು ಮಾತನಾಡಿ ವ್ಯವಸ್ಥಿತವಾಗಿ ಪೂಜಾ ಕಾರ್ಯಕ್ರಮ ನಡೆಯುವರೇ ಸಹಕರಿಸಿದ ಪ್ರತಿಯೋರ್ವರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.


ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರಿನ ವಕೀಲರಾದ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕರವರು ಮಾತನಾಡಿ, ‘ಯುವಜನತೆ ದುಶ್ಚಟಗಳಿಂದ ದೂರವಾಗಿ ಸಮಾಜಮುಖಿ ಮತ್ತು ಧಾರ್ಮಿಕ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸಿದಾಗ ಹಿಂದು ಸಮಾಜ ಉನ್ನತಿಯತ್ತ ಸಾಗಬಲ್ಲುದು’ ಎಂದರು.


ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ ರವರು ಮಾತನಾಡಿ ‘ಪ್ರತಿಯೊಂದು ಧರ್ಮ ಕಾರ್ಯದ ಪರಿಣಾಮವು ಆ ಕಾರ್ಯಕ್ರಮದಿಂದ ನಮ್ಮ ಜೀವನದಲ್ಲಿ ಎಷ್ಟು ಅಳವಡಿಸಿಕೊಂಡಿದ್ದೇವೆ ಎಂಬುದರಿಂದ ನಿರ್ಧರಿತವಾಗಿರುತ್ತದೆ’ ಎಂದರು.

ಮುಂಬಯಿ ಉದ್ಯಮಿ ಚೇತನ್‌ ರೈ ತಲೆಪ್ಪಾಡಿ ರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಮಂಗಳೂರಿನ ಶ್ರೀ ಕಟೀಲ್ ಲಾಜಿಸ್ಟಿಕ್ ನ ಉದ್ಯಮಿ ಜನಾರ್ಧನ ಪೂಜಾರಿ ಪದಡ್ಕ ಹಾಗೂ ನಿಡ್ಪಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಗೀತಾ ಡಿ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

ವೇದಿಕೆಯಲ್ಲಿ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್‌ ಕುಮಾರ್‌ ಬಲ್ಲಾಳ್‌, ಮೊಕ್ತೇಸರ ವಿನೋದ್‌ ಕುಮಾರ್‌ ರೈ ಗುತ್ತು, ದುರ್ಗಾಪೂಜಾ ಸಮಿತಿಯ ಸಂಚಾಲಕ ಕರುಣಾಕರ ಶೆಟ್ಟಿ ಕೊಮ್ಮಂಡ, ಕಾರ್ಯದರ್ಶಿ ಮಹೇಶ್‌ ಕೋರ್ಮಂಡ, ಕೋಶಾಧಿಕಾರಿ ಸನತ್‌ ಕುಮಾರ್‌ ರೈ ಉಪಸ್ಥಿತರಿದ್ದರು.


ನಿವೃತ್ತ ಸೈನಿಕರಿಗೆ ಸನ್ಮಾನ:
ಇದೇ ವೇಳೆ ನಿವೃತ್ತ ಹೆಡ್‌ಕಾನ್‌ಸ್ಟೇಬಲ್ ಹವಾಲ್ದಾರ್ ಬಾಲಕೃಷ್ಣ ಎನ್‌. ರವರಿಗೆ ಸನ್ಮಾನ ನಡೆಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ಸೈನಿಕನಾಗಿ ದೇಶಸೇವೆ ಮಾಡುವ ಅಪೂರ್ವ ಅವಕಾಶ ನನಗೆ ದೊರೆತಿದೆ. ನಮ್ಮ ಕುಟುಂಬವೇ ಮಿಲಿಟರಿ ಕುಟುಂಬವಾಗಿದೆ. ಯುವಕರು ಅಗ್ನಿವೀರ್ ಅಗ್ನಿಪಥ್ ಗೆ ಸೇರ್ಪಡೆಯಾಗಿ ದೇಶಸೇವೆ ಮಾಡುವಲ್ಲಿಯೂ ಮನಸ್ಸು ತೋರಬೇಕು’ ಎಂದು ಆಶಿಸಿದರು.ಸನತ್‌ ಕುಮಾರ್‌ ರೈ ಸನ್ಮಾನ ಪತ್ರ ವಾಚಿಸಿದರು.


ಪುರೋಹಿತರಾದ ಕಶೆಕೋಡಿ ಸೂರ್ಯನಾರಾಯಣ ಭಟ್‌ರವರ ನೇತೃತ್ವದಲ್ಲಿ ಸಾಮೂಹಿಕ ದುರ್ಗಾಪೂಜೆ ನೆರವೇರಿತು. ರಾತ್ರಿ ಅನ್ನಸಂತರ್ಪಣೆ ನಡೆಯಿತು.
ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರಾದ ಹರ್ಷಾ, ಕೃತಿ ಹಾಗೂ ವೃಷ್ಟಿ ಪ್ರಾರ್ಥಿಸಿದರು. ಉಮೇಶ್‌ ಮಿತ್ತಡ್ಕ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಮುಖ್ಯಗುರು ರಾಜೇಶ್‌ ಎನ್‌. ವಂದಿಸಿದರು. ಪ್ರಿಯದರ್ಶಿನಿ ಸಹಶಿಕ್ಷಕಿ ಶ್ರೀಮತಿ ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here