13 ಆಯ್ದ ಕಡೆಗಳಲ್ಲಿ ಸ್ತಬ್ದ ಚಿತ್ರಗಳ, ಕಲಾವಿದರ ಪ್ರದರ್ಶನ – ಸೀತಾರಾಮ ರೈ ಕೆದಂಬಾಡಿ ಗುತ್ತು
ಬೊಳುವಾರಿನಿಂದ ದರ್ಬೆಯ ತನಕ ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಜಗಮಗಿಸಿದ ಪೇಟೆ
ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಾಂಗಣ ಸುತ್ತಿನಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಅಂಗವಾಗಿ 89 ನೇ ವರ್ಷದ ಶಾರದೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದೆ. ಈ ವಿಜೃಂಭಣೆಗೆ ಅ.24ರಂದು ನಡೆಯುವ ಶೋಭಾಯಾತ್ರೆ ಮತ್ತಷ್ಟು ರಂಗು ತರಲಿದೆ ಎಂದು ಶಾರದೋತ್ಸವ ಶೋಭಯಾತ್ರೆಯ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ತಿಳಿಸಿದ್ದಾರೆ.
ಸಂಜೆ ಶೋಭಯಾತ್ರೆಯು ಬೊಳುವಾರಿನಿಂದ ಆರಂಭಗೊಳ್ಳಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಧ್ವಜ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಶೋಭಾಯಾತ್ರೆ ಪುತ್ತೂರಿನ ಪೇಟೆಯಲ್ಲಿ ಸಾಗಲಿದೆ. ನಾಡಿನ ವಿವಿಧ ಭಾಗಗಳಿಂದ ಸಾಂಸ್ಕೃತಿಕ ಕಲಾ ತಂಡಗಳು ಶೋಭಯಾತ್ರೆಯಲ್ಲಿ ಭಾಗವಹಿಸಲಿವೆ. ಅದರಲ್ಲಿ ಪ್ರಮುಖವಾಗಿ ಕೇರಳ ಚೆಂಡೆ, ಗೊಂಬೆ ಬಳಗ, ಕೀಳು ಕುದುರೆ, ಪೂಜಾ ಕುಣಿತ ಮಂಡ್ಯ, ಡೊಳ್ಳು ಕುಣಿತ ರಾಮನಗರ, ವೀರಭದ್ರ ಕುಣಿತ ಮಳವಳ್ಳಿ, ಪಟದ ಕುಣಿತ ಮೇಲುಕೋಟೆ, ಸೋಮನಕುಣಿತ ಮಾಗಡಿ, ಕಂಸಾಳೆ, ಕೊಳ್ಳೇಗಾಲ ಮಹಿಳಾ ಕೋಲಾಟ, ಮದ್ದೂರು ಹಾಗು ಹಲವಾರು ಸ್ಥಬ್ಧ ಚಿತ್ರಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿ ತಮ್ಮ ಪ್ರದರ್ಶನ ನೀಡಲಿವೆ. ಇದರ ಜೊತೆಗೆ 80 ತಂಡಗಳಲ್ಲಿ 1400 ಕುಣಿತ ಭಜಕರು, 1200 ನಿತ್ಯ ಭಜಕರು ಭಜನೆ ಕೀರ್ತನೆ ಹಾಡಲಿದ್ದಾರೆ ಎಂದು ಸೀತಾರಾಮ ರೈ ಕೆದಂಬಾಡಿ ಗುತ್ತು ಅವರು ತಿಳಿಸಿದ್ದಾರೆ.
ನೋಡುಗರ ಅನೂಕಲಕ್ಕೆ ತಕ್ಕಂತೆ 13 ಕಡೆ ಪ್ರದರ್ಶನ:
ಶೋಭಯಾತ್ರೆಯಲ್ಲಿ ಭಾಗವಹಿಸುವ ಕಲಾ ತಂಡಗಳು ತಮ್ಮ ಪ್ರದರ್ಶನವನ್ನು ತೋರಿಸಲು ಈ ಭಾರಿ ಹೊಸ ಯೋಜನೆ ರೂಪಿಸಲಾಗಿದ್ದು, ನೋಡುಗರಿಗೆ ಅನುಕೂಲವಾಗುವಂತೆ ಆಯ್ದ 13 ಕಡೆಗಳಲ್ಲಿ ಕಲಾ ತಂಡಗಳೂ ಪ್ರದರ್ಶನ ನೀಡಲಿವೆ. ಆರಂಭಿಕ ಪ್ರದರ್ಶನವಾಗಿ ಬೊಳುವಾರು ವೃತ್ತದಲ್ಲಿ. ಮುಂದೆ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಎದುರು, ಮಹಾವೀರ ಆಸ್ಪತ್ರೆ ದ್ವಾರದ ಎದುರು, ಇನ್‌ಲ್ಯಾಂಡ್ ಮಯೂರ, ಶ್ರೀಧರ್ ಭಟ್ ಮತ್ತು ಹೆಗ್ಡೆ ಆಕೇರ್ಡ್ ಮಧ್ಯೆ, ಜಿ.ಎಲ್ ಕಾಂಪ್ಲೆಕ್ಸ್ ಮತ್ತು ಸಂಜೀವ ಶೆಟ್ಟಿ ಜವುಳಿ ಮಳಿಗೆಯ ಮಧ್ಯೆ, ಸಂಜೀವ ಶೆಟ್ಟಿ ಇನ್ನೊಂದು ಮಳಿಗೆಯ ಬಳಿ, ಕೆ.ಎಸ್.ಆರ್.ಟಿ.ಸಿ. ಬಸ್‌ನಿಲ್ದಾಣದ ಬಳಿ, ಅರುಣಾ ಚಿತ್ರ ಮಂದಿರದ ಬಳಿ, ಕಲ್ಲಾರೆ ಜಂಕ್ಷನ್ ಬಳಿ, ರಿಲಾಯನ್ಸ್ ಮತ್ತು ಹರ್ಷ ಮಳಿಗೆಯ ಬಳಿ, ದರ್ಬೆ ವೃತ್ತದ ಬಳಿ, ಸಂತ ಫಿಲೋಮಿನಾ ಕಾಲೇಜು ಮತ್ತು ಪರ್ಲಡ್ಕ ಕ್ರಾಸ್ ಬಳಿ ಕಲಾ ತಂಡಗಳು ಮತ್ತು ಸ್ತಬ್ಧ ಚಿತ್ರಗಳು ತಮ್ಮ ಕಲಾ ಪ್ರದರ್ಶನ ನೀಡಲಿವೆ. ನೋಡುಗರು ಈ ಸ್ಥಳದಲ್ಲಿ ಪ್ರದರ್ಶನ ವೀಕ್ಷಣೆ ಮಾಡಬಹುದು ಎಂದು ಸೀತಾರಾಮ ರೈ ಕೆದಂಬಾಡಿಗುತ್ತು ತಿಳಿಸಿದ್ದಾರೆ.
ಸಮಯಕ್ಕೆ ಆದ್ಯತೆ
ಸಂಜೆ ಶೋಭಾಯಾತ್ರೆಯು 5 ಗಂಟೆಗೆ ಸರಿಯಾಗಿ ಚಾಲನೆಗೊಳ್ಳಲಿದೆ. ಶೋಭಯಾತ್ರೆಯಲ್ಲಿ ಸಂಘಟಕರು ಸೂಚಿಸಿದ 13 ಕಡೆಗಳಲ್ಲಿ ಮಾತ್ರ ಸ್ತಬ್ದಚಿತ್ರಗಳು ಮತ್ತು ಕಲಾವಿದರು ತಮ್ಮ ಪ್ರದರ್ಶನವನ್ನು ನೀಡಲಿದ್ದಾರೆ. ಸುಮಾರು 8 ರಿಂದ 10 ನಿಮಿಷ ಕಲಾವಿದರು ತಮ್ಮ ಪ್ರದರ್ಶನಕ್ಕೆ ಅವಕಾಶವಿದೆ. ಸುಮಾರು 105 ಮಂದಿ ಸ್ವಯಂ ಸೇವಕರು ಶೋಭಯಾತ್ರೆಯಲ್ಲಿ ಸ್ತಬ್ದಚಿತ್ರಗಳು ಮತ್ತು ಕಲಾ ಚಿತ್ರಗಳ ಪ್ರದರ್ಶನದ ನಿರ್ವಹಣೆ ಮಾಡಲಿದ್ದಾರೆ. 105 ಮಂದಿ ಸ್ವಯಂ ಸೇವಕರಲ್ಲಿ ಉಪಸಮಿತಿ ಮಾಡಲಾಗಿದ್ದು ಅವರಿಗೆ ನಾಲ್ವರು ಪ್ರಮುಖರು ಅಲ್ಲಲ್ಲಿ ನಿರ್ದೇಶನ ನೀಡಲಿದ್ದಾರೆ. ಒಟ್ಟು ಶೋಭಯಾತ್ರೆಯು ತಡವಾದರೆ ಅನೇಕ ಮಂದಿ ಶೋಭಯಾತ್ರೆಯನ್ನು ನೋಡದೆ ಹಿಂದಿಗುರುತ್ತಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರೆಲ್ಲರೂ ಶೋಭಯಾತ್ರೆಯನ್ನು ವೀಕ್ಷಿಸಬೇಕೆಂಬ ಹಿನ್ನೆಲೆಯಲ್ಲಿ ಸಮಯಕ್ಕೆ ಆದ್ಯತೆ ನೀಡಿ ಉತ್ತಮ ರೀತಿಯಲ್ಲಿ ನಡೆಯಲಿದೆ.
ಸೀತಾರಾಮ ರೈ ಕೆದಂಬಾಡಿಗುತ್ತು, ಸಂಚಾಲಕರು
ಶಾರದೋತ್ಸವ ಶೋಭಾಯಾತ್ರೆ ಸಮಿತಿ
ಮೊದಲ ಬಾರಿಗೆ ಪೇಟೆ ರಸ್ತೆಯುದ್ದಕ್ಕೂ ದೀಪಾಲಂಕಾರ
ಪುತ್ತೂರಿನ ಇತಿಹಾಸದಲ್ಲಿ ದರ್ಬೆಯಿಂದ ಬೊಳುವಾರು ತನಕ ರಸ್ತೆಯುದಕ್ಕೂ ಮೊದಲ ಬಾರಿಗೆ ವಿದ್ಯುತ್ ದೀಪಾಲಂಕಾರವನ್ನು ಶಾರದೋತ್ಸವ ಶೋಭಯಾತ್ರೆ ಸಮಿತಿ ಮಾಡಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ಮುಖ್ಯ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ದೀಪಾಲಂಕಾರ ಮಾಡಲಾಗಿತ್ತು. ಇದೀಗ ಪುತ್ತೂರು ಶಾರದೋತ್ಸವದಲ್ಲಿ ಪೇಟೆಯುದ್ದಕ್ಕೂ ರಸ್ತೆಗೆ ಅಡ್ಡಲಾಗಿ ಮತ್ತು ದರ್ಬೆಯಲ್ಲಿ ರಸ್ತೆ ವಿಭಜಕದ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇದರ ಜೊತೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರವನ್ನು ವಿದ್ಯುತ್ ದೀಪಾಲಂಕಾರಗಳಿಂದ ಶೃಂಗಾರಗೊಳಿಸಲಾಗಿದೆ.