ಕೆದಂಬಾಡಿ : ನವರಾತ್ರಿ ಉತ್ಸವ ಸಮಾರೋಪ ಸಮಾರಂಭ-ಪುತ್ತಿಲ ಪರಿವಾರದಿಂದ ಮಿಂಚು ಬಂಧಕ ಕೊಡುಗೆ

0

ಪುತ್ತೂರು: ಶ್ರೀರಾಮ ಮಂದಿರ ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಇಲ್ಲಿ 9 ದಿನಗಳ ಕಾಲ ನಡೆದ ನವರಾತ್ರಿ ಉತ್ಸವ ಅ.23 ರಂದು ಸಮಾಪನಗೊಂಡಿತು. ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ‘ಹಿಂದೂ ಸಮಾಜವನ್ನು ಧಾರ್ಮಿಕ ನೆಲೆಯಲ್ಲಿ ಒಂದುಗೂಡಿಸುವ ಕಾರ್ಯ ದೇಶದೆಲ್ಲೆಡೆ ನಡೆಯುತ್ತಿದೆ. ‘ಶೋಷಿತ ಸಮಾಜಕ್ಕೆ ಧೈರ್ಯ, ಅಶಕ್ತರಿಗೆ ಸಹಾಯಹಸ್ತ, ರಾಷ್ಟ್ರೀಯತೆಯ ವಿಚಾರದಲ್ಲಿ ನಾವು ಸದಾ ಇದ್ದೇವೆ’ ಎಂದರು. ಪುತ್ತಿಲ ಪರಿವಾರ ಕೆದಂಬಾಡಿ ಘಟಕದ ವತಿಯಿಂದ ಮಿಂಚು ಬಂಧಕಕ್ಕೆ ತಗಲುವ ವೆಚ್ಚದ 21 ಸಾವಿರ ರೂಪಾಯಿಯ ಚೆಕ್ ನ್ನು ಮಂದಿರದ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಜೀವನಕ್ಕೆ ಅಲಂಕಾರ ಸಿಗುವುದು ಮಂದಿರಗಳಿಂದ – ನಳಿನಾಕ್ಷಿ ಆಚಾರ್ಯ
ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದ ಸುಳ್ಯ ರೋಟರಿ ಪ್ರೌಢಶಾಲೆಯ ಶಿಕ್ಷಕಿ ನಳಿನಾಕ್ಷಿ ಆಚಾರ್ಯರವರು ‘ಧಾರ್ಮಿಕ ಶಿಕ್ಷಣವನ್ನು ಹಿಂದು ಧರ್ಮದಲ್ಲಿ ಅವಶ್ಯಕವಾಗಿಸಬೇಕಾಗಿದೆ. ಜೀವನಕ್ಕೆ ಅಲಂಕಾರ ನೀಡುವುದು ಮಂದಿರ ಆಲಯಗಳ ಪೂಜೆ ಪುನಸ್ಕಾರಗಳಿಂದ ಧರ್ಮದ ಆಚರಣೆಗಳನ್ನು ನಿಯಮಬದ್ದವಾಗಿ ಆಚರಿಸಿ ಧರ್ಮ ಕಾರ್ಯವನ್ನು ಎತ್ತಿ ಹಿಡಿಯಬೇಕು ಎಂದರು.  ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಜೈಶಂಕರ ರೈ ಬೆದ್ರುಮಾರ್, ’45 ವರ್ಷಗಳ ಹಿಂದೆ ಅಂಗನವಾಡಿಯಲ್ಲಿ ಕಾಲುದೀಪವಿಟ್ಟು ಆರಂಭಿಸಿದ ನವರಾತ್ರಿ ಉತ್ಸವ ಇಂದು 9 ದಿನಗಳ ಕಾಲ ನಡೆಯುವ ಉತ್ಸವವಾಗಿ ಮಾರ್ಪಾಡಾಗಿದೆ. ಭಕ್ತಿ ಮತ್ತು ಶ್ರದ್ದೆಯ ಆರಾಧನೆಯಿಂದಾಗಿ ಮತ್ತು ಊರಪರವೂರ ಭಕ್ತರ ಸಹಕಾರದಿಂದ ಈ ಹಿಂದಿನ ಆಡಳಿತ ಮಂಡಳಿಯವರು ನಡೆಸಿಕೊಂಡು ಬಂದು ಈ ರೀತಿಯ ಉತ್ಸವ ನಡೆಸಲು ಸಾಧ್ಯವಾಗಿದೆ ಎಂದರು.

ಗೌರವಾರ್ಪಣೆ
ಕೆದಂಬಾಡಿ ಗ್ರಾಮದ ಘನತ್ಯಾಜ್ಯ ಘಟಕದ ಸಿಬ್ಬಂದಿಗಳಾದ  ಪುಷ್ಪಾ ಬೋಳೋಡಿ, ಗಿರಿಜಾ ಬಾಬು ಇದ್ಪಾಡಿ, ಗಿರಿಜಾ ಕೃಷ್ಣಪ್ಪ ಇದ್ಪಾಡಿಯವರನ್ನು ಇದೇ ವೇಳೆ ಗೌರವಿಸಲಾಯಿತು. ಶ್ರೀರಾಮ ಮಂದಿರದ ಪ್ರಧಾನ ಕಾರ್ಯದರ್ಶಿ ಸಂತೋಷ್ ರೈ ಕೋರಂಗ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಮತ್ತು ಮಂದಿರದ ಇತಿಹಾಸ, ಜೀರ್ಣೋದ್ಧಾರ ಬಗ್ಗೆ ಮೆಲುಕು ಹಾಕಿದರು. ಮಂದಿರದ ಕೋಶಾಧಿಕಾರಿ ಐ.ಸಿ. ಕೈಲಾಸ್ ವಂದಿಸಿದರು. ವಿಜಯ ಕುಮಾರ್ ರೈ ಕೋರಂಗ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಐ ಸಿ ಕೈಲಾಸ್, ಕರುಣಾಕರ ರೈ, ಬಾಬು ಕೋರಂಗ, ರಾಜೀವ ರೈ ಕೋರಂಗ, ಜೊತೆ ಕಾರ್ಯದರ್ಶಿ ಸುರೇಶ್ ರೈ ಮಾಣಿಪ್ಪಾಡಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಯುವರಂಗ ಕೆದಂಬಾಡಿ ಮತ್ತು ಊರವರಿಂದ ಸಾಂಸ್ಕೃತಿಕ ವೈವಿಧ್ಯ ಜರಗಿತು.

LEAVE A REPLY

Please enter your comment!
Please enter your name here