ಹಿರೆಬಂಡಾಡಿ: ಪುತ್ತೂರು ತಾ| ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಬಾಲಕರ / ಬಾಲಕಿಯರ ಕ್ರೀಡಾಕೂಟ ಸಮಾರೋಪ

0

ನರಿಮೊಗರು ಸಾಂದೀಪನಿಯಲ್ಲಿ ಮುಂದಿನ ವರ್ಷದ ಕ್ರೀಡಾಕೂಟ – ಧ್ವಜ, ವೀಳ್ಯ ಹಸ್ತಾಂತರ

ಹಿರೆಬಂಡಾಡಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಗ್ರಾಮ ಪಂಚಾಯತ್ ಹಿರೆಬಂಡಾಡಿ ಮತ್ತು ಸರಕಾರಿ ಪ್ರೌಢಶಾಲೆ ಹಿರೆಬಂಡಾಡಿ ಇದರ ಆಶ್ರಯದಲ್ಲಿ ’ಸ್ವಾಸ್ಥ್ಯ ಬದುಕಿಗೊಂದು ದಿವ್ಯೌಷಧ’ ಎಂಬ ಧ್ಯೇಯದೊಂದಿಗೆ ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯ ನೂತನ ಕ್ರೀಡಾಂಗಣದಲ್ಲಿ ಎರಡು ದಿನ ನಡೆದ 2023-24ನೇ ಸಾಲಿನ ಪುತ್ತೂರು ಶೈಕ್ಷಣಿಕ ವಲಯ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕರ ಹಾಗೂ ಬಾಲಕಿಯರ ಕ್ರೀಡಾಕೂಟ ʼಕ್ರೀಡಾಮೃತ-2023’ ಇದರ ಸಮಾರೋಪ ಸಮಾರಂಭ ಅ.27ರಂದು ಸಂಜೆ ನಡೆಯಿತು.

ಸಮಗ್ರ ಚಾಂಪಿಯನ್ ಪಡೆದುಕೊಂಡ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಕ್ರೀಡಾಕೂಟದ ಸ್ವಾಗತ ಸಮಿತಿ ಅಧ್ಯಕ್ಷರೂ, ನಿಕಟಪೂರ್ವ ಶಾಸಕರೂ ಆದ ಸಂಜೀವ ಮಠಂದೂರು ಅವರು, ಜಗತ್ತಿಗೆ ದೇಶವನ್ನು ಪರಿಚಯಿಸಲು ಇರುವ ಏಕೈಕ ವೇದಿಕೆ ಕ್ರೀಡೆಯಾಗಿದೆ. ಕ್ರೀಡೆಯಲ್ಲಿ ಹಿರೆಬಂಡಾಡಿಯನ್ನು ಇನ್ನಷ್ಟೂ ಎತ್ತರಕ್ಕೆ ಕೊಂಡೊಯ್ಯಲು ಇಲ್ಲಿನ ಜನ ಸಿದ್ದರಾಗಿದ್ದಾರೆ. 16ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯು ಯಶಸ್ವಿಯಾಗಿ ಕ್ರೀಡಾಕೂಟ ಸಂಘಟಿಸುವ ಮೂಲಕ ಸರಕಾರಿ ಶಾಲೆಯೂ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಯಶಸ್ವಿಯಾಗಿ ಸಂಘಟಿಸಬಹುದು ಎಂಬುದನ್ನು ತೋರಿಸಿಕೊಡುವುದರ ಮೂಲಕ ಧೈರ್ಯ ತುಂಬುವ ಕೆಲಸ ಮಾಡಿದೆ ಎಂದರು.

ಅತಿಥಿಯಾಗಿದ್ದ ಪಿ.ಎಂ.ಪೋಷಣ್ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಸಿ. ಮಾತನಾಡಿ, ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಯಶಸ್ವಿ ಕ್ರೀಡಾಕೂಟ ಸಂಘಟಿಸುವುದರ ಜೊತೆಗೆ ಸುಸಂಸ್ಕೃತ ಕ್ರೀಡಾಂಗಣವನ್ನು ಪರಿಚಯಿಸುವ ಕೆಲಸವೂ ಆಗಿದೆ ಎಂದರು. ಇನ್ನೋರ್ವ ಅತಿಥಿ ಉಪ್ಪಿನಂಗಡಿಯ ದಂತವೈದ್ಯ ಡಾ.ರಾಜಾರಾಮ್ ಕೆ.ಬಿ. ಮಾತನಾಡಿ, ಶೇ.100 ಅಂಕ ಪಡೆಯುವುದರಿಂದ ಶಿಕ್ಷಣ ಪರಿಪೂರ್ಣವಾಗುವುದಿಲ್ಲ. ಶಾಲೆಗಳಲ್ಲಿ ದೈಹಿಕ ವ್ಯಾಯಾಮವೂ ಸಿಗಬೇಕು. ಕ್ರೀಡೆ ಬಾಂಧವ್ಯ, ಸ್ನೇಹದ ಸಂಕೋಲೆ ಬೆಸೆಯುತ್ತದೆ. ಇಲ್ಲಿ ಜಯಗಳಿಸಿದ ವಿದ್ಯಾರ್ಥಿಗಳು ಮುಂದೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಜಯಗಳಿಸಲಿ ಎಂದರು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಹೆನ್ನಾಳ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ನಡೆದಿರುವುದು ಸಂತಸ ತಂದಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಹಿರೆಬಂಡಾಡಿ ಗ್ರಾ.ಪಂ.ಅಧ್ಯಕ್ಷ ಸದಾನಂದ ಶೆಟ್ಟಿ, ಉಪಾಧ್ಯಕ್ಷೆ ಶಾಂಭವಿ, ಸಾಮಾಜಿಕ ಮುಂದಾಳು ಕೃಷ್ಣರಾವ್ ಅರ್ತಿಲ, ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಜಯಮಾಲಾ, ಕ್ರೀಡಾಕೂಟದ ಆರ್ಥಿಕ ಸಮಿತಿ ಅಧ್ಯಕ್ಷ ರವೀಂದ್ರ ದರ್ಬೆ, ಹಿರೆಬಂಡಾಡಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ, ಎಸ್‌ಡಿಎಂಸಿ ನಿಕಟಪೂರ್ವ ಕಾರ್ಯಾಧ್ಯಕ್ಷ ಶ್ರೀಧರ ಮಠಂದೂರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಂತ, ಹಿರೆಬಂಡಾಡಿ ಗ್ರಾ.ಪಂ.ಸದಸ್ಯರು, ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೌರವಾರ್ಪಣೆ:
ಕ್ರೀಡಾಕೂಟ ಯಶಸ್ವಿಗೆ ಸಹಕರಿಸಿದ ವಿವಿಧ ಸಮಿತಿಗಳ ಅಧ್ಯಕ್ಷರನ್ನು ಕ್ರೀಡಾಕೂಟದ ಸ್ವಾಗತ ಸಮಿತಿ ಅಧ್ಯಕ್ಷ ಸಂಜೀವ ಮಠಂದೂರು ಅವರು ಶಾಲುಹಾಕಿ ಗೌರವಿಸಿದರು. ಹಿರಿಯ ಶಿಕ್ಷಕಿ ಲಲಿತಾ ಸ್ವಾಗತಿಸಿ, ಪ್ರಭಾರ ಮುಖ್ಯಶಿಕ್ಷಕ ಹರಿಕಿರಣ್ ಕೆ.,ವಂದಿಸಿದರು. ಶಿಕ್ಷಕಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು. ಸಮಾರೋಪ ಸಮಾರಂಭದ ಬಳಿಕ ಧ್ವಜಾವರೋಹಣ ಮಾಡಿ, ರಾಷ್ಟ್ರಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

ಸಮಗ್ರ ಪ್ರಶಸ್ತಿ 14ರ ವಯೋಮಾನ ಪ್ರಾಥಮಿಕ:
14ರ ವಯೋಮಾನದ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲೆ, ಕಡಬ ಸೈಂಟ್ ಜೋಕಿಮ್ಸ್ ಹಿರಿಯ ಪ್ರಾಥಮಿಕ ಶಾಲೆ ಸಮಾನ ಅಂಕ ಪಡೆದುಕೊಂಡು ಪ್ರಥಮ ಸಮಗ್ರ ಪ್ರಶಸ್ತಿ ಹಂಚಿಕೊಂಡಿವೆ. ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ ಕಡಬ ಸೈಂಟ್ ಆನ್ಸ್ ಆಂಗ್ಲಮಾಧ್ಯಮ ಶಾಲೆ ಪ್ರಥಮ ಹಾಗೂ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

8ನೇ ತರಗತಿ ವಿಭಾಗ:
14ರ ವಯೋಮಾನದ 8ನೇ ತರಗತಿ ಬಾಲಕರ ವಿಭಾಗದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಪ್ರಥಮ ಹಾಗೂ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪ್ರಥಮ ಹಾಗೂ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

17ರ ವಯೋಮಾನ:
17ರ ವಯೋಮಾನದ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಪ್ರಥಮ ಹಾಗೂ ಸೈಂಟ್ ಫಿಲೋಮಿನಾ ಪುತ್ತೂರು ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪ್ರಥಮ ಹಾಗೂ ಕಡಬ ಸರಕಾರಿ ಹೈಸ್ಕೂಲ್ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ವೈಯಕ್ತಿಕ ಚಾಂಪಿಯನ್:
ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲೆಯ ಜಯೇಶ್ ಹಾಗೂ ಕಡಬ ಸೈಂಟ್ ಜೋಕಿಮ್ಸ್ ಶಾಲೆಯ ಲಿಖಿತ್‌ರಾಜ್‌ ತಲಾ 15 ಅಂಕ ಪಡೆದುಕೊಂಡು ವೈಯಕ್ತಿಕ ಚಾಂಪಿಯನ್ ಪಡೆದುಕೊಂಡರು. ಬಾಲಕಿಯರ ವಿಭಾಗದಲ್ಲಿ ಕಡಬ ಸೈಂಟ್ ಆನ್ಸ್ನ ತೀಕ್ಷಾ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು. 8ನೇ ತರಗತಿ ಬಾಲಕಿಯರ ವಿಭಾಗದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ದಿವಿಜ್ಞಾ ಯು.ಎಸ್., ಬಾಲಕರ ವಿಭಾಗದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಚೇತಸ್ ಪಿ.ವೈ.ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು. 17ರ ವಯೋಮಾನದ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಸಾತ್ವಿಕ್ ಆರ್., ಹಾಗೂ ಬಾಲಕಿಯರ ವಿಭಾಗದಲ್ಲಿ ಕಡಬ ಸರಕಾರಿ ಪ್ರೌಢಶಾಲೆಯ ಚರಿಷ್ಮಾ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು.

’2024-25ನೇ ಸಾಲಿನ ಪುತ್ತೂರು ಶೈಕ್ಷಣಿಕ ವಲಯ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕರ ಹಾಗೂ ಬಾಲಕಿಯರ ಕ್ರೀಡಾಕೂಟದ ಆತಿಥ್ಯ ವಹಿಸಲಿರುವ ನರಿಮೊಗರು ಸಾಂದೀಪನಿ ಶಾಲೆಯ ಮುಖ್ಯಶಿಕ್ಷಕಿ ಜಯಮಾಲಾ ಅವರಿಗೆ ಕ್ರೀಡಾಕೂಟದ ಧ್ವಜ ಹಾಗೂ ವೀಳ್ಯ ಹಸ್ತಾಂತರ ಮಾಡಲಾಯಿತು. ಹಿರೆಬಂಡಾಡಿ ಶಾಲಾ ಮುಖ್ಯಶಿಕ್ಷಕ ಹರಿಕಿರಣ್ ಕೆ., ಅವರು ಧ್ವಜ, ವೀಳ್ಯ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here