ಪುತ್ತೂರು:9 ವರ್ಷಗಳ ಹಿಂದೆ ಪುತ್ತೂರು ದರ್ಬೆಯಲ್ಲಿ ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದ ತುಮಕೂರು ಮೂಲದ ಕಾರ್ಮಿಕ ಮಂಜುನಾಥ್ ಎಂಬವರು ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇಲೆಕ್ಟ್ರಿಕಲ್ ಮಾಲಕ ಮತ್ತು ವಿದ್ಯುತ್ ಗುತ್ತಿಗೆದಾರನನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
2014ರ ಜೂ.12ರಂದು ಪುತ್ತೂರು ದರ್ಬೆಯಲ್ಲಿ ವಿದ್ಯುತ್ ಕಂಬದಲ್ಲಿ ಫ್ಯೂಸ್‌ಬೋರ್ಡ್ ಜೋಡಣೆಯ ಕಾಮಗಾರಿ ಮಾಡುತ್ತಿದ್ದ ವೇಳೆ ಕಾಮಗಾರಿಯ ಉಸ್ತುವಾರಿ ನೋಡುತ್ತಿದ್ದ 1ನೇ ಆರೋಪಿ ಸಂತೋಷ್ ಇಲೆಕ್ಟ್ರಿಕಲ್ಸ್‌ನ ಮಾಲಕ ಅನಿಲ್ ಕುಮಾರ್, 2ನೇ ಆರೋಪಿಯಾಗಿದ್ದ ವಿದ್ಯುತ್ ಸರಬರಾಜಿನ ಕಂಟ್ರೋಲ್ ಸೂಪರ್‌ವೈಸರ್ ಸತೀಶ್ ಹೆಚ್ ಮತ್ತು ಉಪಗುತ್ತಿಗೆದಾರ ಹರಿಹರಣ್ ಅವರ ಅಜಾಗರೂಕತೆಯಿಂದಾಗಿ, ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಕಾರ್ಮಿಕ ತುಮಕೂರು ತಾಲೂಕಿನ ಕೊರಟಗೆರೆ ನಿವಾಸಿ ಮಂಜುನಾಥ್ ಅವರಿಗೆ ವಿದ್ಯುತ್ ಶಾಕ್ ತಗುಲಿ ಕೆಳಗೆ ಬಿದ್ದು ಮೃತಪಟ್ಟಿದ್ದರೆಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆರೋಪಿಗಳ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ವೇಳೆ ಅಭಿಯೋಜಕರು 13 ಮಂದಿ ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಿದ್ದರು.ಆದರೆ ಸಾಕ್ಷಿದಾರರು ಸರಿಯಾಗಿ ಸಾಕ್ಷಿ ನುಡಿಯಲು ವಿಫಲರಾದ ಹಿನ್ನೆಲೆಯಲ್ಲಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಽಶರು ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.ಆರೋಪಿಗಳ ಪರ ವಕೀಲರಾದ ದೇವಾನಂದ ಕೆ, ಹರಿಪ್ರಸಾದ್ ರೈ, ಹರಿಣಿ ವಾದಿಸಿದ್ದರು.