ಪುತ್ತೂರು:ಕಳೆದ ವರ್ಷ ಬೆಳ್ಳಾರೆ ಸಮೀಪದ ಕಳೆಂಜ ಎಂಬಲ್ಲಿ ನಡೆದಿದ್ದ ಮಸೂದ್ ಅಲಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅಭಿಲಾಷ್‌ಗೆ ರಾಜ್ಯ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
2022ರ ಜುಲೈ 19ರ ರಾತ್ರಿ ಬೆಳ್ಳಾರೆ ಠಾಣಾ ವ್ಯಾಪ್ತಿಯ ಕಳಂಜ ವಿಷ್ಣುನಗರದಲ್ಲಿ 8 ಮಂದಿ ಆರೋಪಿಗಳು ಬಾಟಲಿಯಿಂದ ಮಸೂದ್ ಅವರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು.ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಾದ ಅಭಿಲಾಷ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ ಪೂಜಾರಿ, ಜಿಮ್ ರಂಜಿತ್, ಭಾಸ್ಕರ ಎಂಬವರನ್ನು ಬಂಧಿಸಿದ್ದರು.ಮಸೂದ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಬಳಿಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.
ರಾಜಿ ಮಾತುಕತೆಗೆಂದು ಕರೆದು ಮಾರಣಾಂತಿಕ ಹಲ್ಲೆ: ಸಂಜೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ರಾಜಿ ಮಾತುಕತೆಗೆಂದು ಕರೆಸಿ ಮಸೂದ್‌ಗೆ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂದು ಮಸೂದ್ ಅವರ ಜೊತೆಗಿದ್ದ ಪೆರುವಾಜೆ ಗ್ರಾಮದ ಪೆಲತ್ತಡ್ಕದ ಇಬ್ರಾಹಿಂ ಸಾನಿಫ್ ಎಂಬವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದರು.ಕಾಸರಗೋಡು ತಾಲೂಕು ಮೊಗ್ರಾಲ್ ಪುತ್ತೂರು ನಿವಾಸಿ ಮಸೂದ್ ಅಲಿ(18 ವ.)ಯವರು ಘಟನೆ ಸಂಭವಿಸುವ ತಿಂಗಳ ಹಿಂದೆಯಷ್ಟೇ ಕಾಸರಗೋಡಿನಿಂದ ಕಳಂಜದಲ್ಲಿರುವ ಅಜ್ಜ ಅಬ್ಬು ಮುಕ್ರಿ ಎಂಬವರ ಮನೆಗೆ ಬಂದು ಸ್ಥಳೀಯವಾಗಿ ಕೂಲಿ ಕೆಲಸ ಮಾಡಿಕೊಂಡಿದ್ದರು.ಜು.19ರ ರಾತ್ರಿ ವಿಷ್ಣುನಗರ ಬಸ್ ನಿಲ್ದಾಣದ ಬಳಿ ಜನ ಗುಂಪು ಸೇರಿ ಮಾತನಾಡುತ್ತಿದ್ದರು.ನಾನು ಅಲ್ಲಿಗೆ ನೋಡಲು ಬಂದಾಗ ಪರಿಚಯದವರಾದ ಸುನಿಲ್,ಅಭಿಲಾಷ್, ಸುಧೀರ್,ಶಿವ,ರಂಜಿತ್, ಸದಾಶಿವ, ಜಿಮ್ ರಂಜಿತ್ ಹಾಗೂ ಭಾಸ್ಕರ ಎಂಬವರು ಗುಂಪು ಸೇರಿ ಮಾತನಾಡಿಕೊಂಡಿದ್ದರು.
ಅವರ ಪೈಕಿ ಸುನಿಲ್ ಹಾಗೂ ಅಭಿಲಾಷ್ ನನ್ನನ್ನು ಕರೆದು, ಸಂಜೆ ವೇಳೆ ಸುಧೀರ್‌ಗೆ ಮಸೂದ್ ಅಂಗಡಿಯ ಬಳಿ ತಾಗಿದ ವಿಚಾರದಲ್ಲಿ ಪರಸ್ಪರ ಕೈಯಿಂದ ಹೊಡೆದಾಡಿಕೊಂಡಿದ್ದು, ಆ ಬಳಿಕ ಮಸೂದ್ ಸುಧೀರ್‌ಗೆ ಬಾಟಲಿ ತೋರಿಸಿ ಬೆದರಿಸಿ ಮನೆಗೆ ಹೋಗಿರುವುದಾಗಿ ತಿಳಿದು ನಾವು ಬಂದಿರುತ್ತೇವೆ.ನೀನು ಮಸೂದನನ್ನು ಆತನ ಮನೆಯಿಂದ ಕರೆದುಕೊಂಡು ಬಾ, ಮಾತನಾಡಿ ಮುಗಿಸುವಾ ಎಂದು ಹೇಳಿದ್ದರು.ರಾಜಿ ಮಾಡುವುದಿದ್ದರೆ ಆಗಬಹುದು ಎಂದು ಹೇಳಿ ನಾನು ಮಸೂದನ ಅಜ್ಜಿ ಮನೆಗೆ ಹೋಗಿ ಮಸೂದನನ್ನು ನನ್ನ ಬೈಕಿನಲ್ಲಿ ವಿಷ್ಣುನಗರಕ್ಕೆ ಕರೆದುಕೊಂಡು ಬಂದೆ.ನಾವು ಅಲ್ಲಿಗೆ ತಲುಪುತ್ತಿದ್ದಂತೆ ಆರೋಪಿಗಳೆಲ್ಲರೂ ಗುಂಪು ಸೇರಿ ಮಸೂದನಿಗೆ ಕೈಯಿಂದ ಹಲ್ಲೆ ಮಾಡಲು ಪ್ರಾರಂಭಿಸಿದರು.ಮಸೂದ್‌ಗೆ ಹೊಡೆಯಬೇಡಿ ಎಂದು ಹೇಳಿ ನಾನು ಆತನನ್ನು ಗಟ್ಟಿಯಾಗಿ ಹಿಡಿದುಕೊಂಡೆ.ಅಷ್ಟರಲ್ಲಿ ದೂಡಾಟ ಉಂಟಾಗಿ ನಾನು ಹಾಗೂ ಮಸೂದ್ ನೆಲದಲ್ಲಿ ಬಿದ್ದೆವು. ನಾವು ಬಿದ್ದಲ್ಲಿಗೇ ಕಾಲಿನಿಂದ ತುಳಿಯುತ್ತಿದ್ದರು.
ಅಭಿಲಾಷ್ ಅಲ್ಲೇ ಬಿದ್ದುಕೊಂಡಿದ್ದ ಖಾಲಿ ಜ್ಯೂಸ್ ಬಾಟಲ್ ತೆಗೆದು ನೆಲದಲ್ಲಿ ಬಿದ್ದುಕೊಂಡಿದ್ದ ಮಸೂದನ ತಲೆಗೆ ಹೊಡೆದ ಪರಿಣಾಮ ಬಾಟಲಿ ಹುಡಿಯಾಗಿರುತ್ತದೆ.ಆಗ ನಾನು ಮಸೂದನಲ್ಲಿ ಓಡಿ ತಪ್ಪಿಸಿಕೊಳ್ಳಲು ಹೇಳಿದ್ದು ಮಸೂದ್ ಅಲ್ಲಿಂದ ಓಡಿ ಹೋದ.ಸ್ವಲ್ಪ ಸಮಯದಲ್ಲಿ ಅಲ್ಲಿಗೆ ಪೊಲೀಸರು ಬಂದಿದ್ದು ನಾವೆಲ್ಲರೂ ಅಲ್ಲಿಂದ ಹೋಗಿರುತ್ತೇವೆ.ಬಳಿಕ ನಾನು, ನಾಸಿರ್, ತಲ್‌ಶೀರ್ ಸೇರಿ ಮಸೂದನನ್ನು ಹುಡುಕಾಡಿದ್ದು ಜು.20ರ ರಾತ್ರಿ 1.30 ಗಂಟೆಗೆ ಅಬೂಬಕ್ಕರ್ ಎಂಬವರ ಬಾವಿಯ ಬಳಿ ಮಸೂದ್ ಬಿದ್ದುಕೊಂಡಿದ್ದು ಮಾತನಾಡುತ್ತಿರಲಿಲ್ಲ.ನಾವೆಲ್ಲರೂ ಮಸೂದನನ್ನು ಉಪಚರಿಸಿ ತಲ್‌ಶೀರ್ ಅವರ ಕಾರಿನಲ್ಲಿ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು.ಅಲ್ಲಿನ ವೈದ್ಯರ ಸೂಚನೆಯಂತೆ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೀವ್ರ ನಿಗಾ ವಿಭಾಗದಲ್ಲಿ ದಾಖಲಿಸಿದ್ದೆವು ಎಂದು ಇಬ್ರಾಹಿಂ ಶಾನೀಫ್ ಅವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದರು.ಆರೋಪಿಗಳ ವಿರುದ್ಧ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು.
ಗಾಯಾಳು ಸಾವು ಕೊಲೆ ಪ್ರಕರಣ ದಾಖಲು: ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಗಾಯಾಳು ಮಸೂದ್ ಅವರು ಚಿಕಿತ್ಸೆಗೆ ಸ್ಪಂದಿಸದೆ ದಿನಗಳ ಬಳಿಕ ಮೃತಪಟ್ಟಿದ್ದರು.ನಂತರ ಪೊಲೀಸರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.ಬಂಧಿತ ಎಂಟು ಮಂದಿ ಆರೋಪಿಗಳಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.ಪ್ರಕರಣದ ಆರೋಪಿಗಳಾದ ರಂಜಿತ್, ಸದಾಶಿವ, ಸುಧೀರ್ ಹಾಗೂ ಎಂಟನೇ ಆರೋಪಿ ಭಾಸ್ಕರ ಕೆ.ಎಂ.ಎಂಬವರನ್ನು ಕರ್ನಾಟಕ ಹೈಕೋರ್ಟ್ ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.ಇದೀಗ ಪ್ರಕರಣದ ಪ್ರಮುಖ ಆರೋಪಿ ಅಭಿಲಾಷ್‌ಗೆ ಉಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲ ಸುಯೋಗ್ ಹೇರಳೆ ವಾದಿಸಿದ್ದರು.