ಮಹಿಳೆಯರಿಗೆ ಸಾಂತ್ವನ ನೀಡುವ ಕೇಂದ್ರದಲ್ಲಿ ಆಪ್ತ ಸಮಾಲೋಚನೆಗೆ ಕೊಠಡಿ ಕೊರತೆ

0

ಪ್ರತ್ಯೇಕ ಕೊಠಡಿಗಳಿದ್ದ ಹಳೆ ಕಟ್ಟಡದಿಂದ ಶಿಫ್ಟ್ ಆದ ಬಳಿಕ ಇರುವುದೊಂದೇ ಕೊಠಡಿ!
ಪುತ್ತೂರು:ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಾಂತ್ವನ ನೀಡುವ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ 22 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಾಂತ್ವನ ಕೇಂದ್ರಗಳ ಪೈಕಿ ಪುತ್ತೂರಿನ ಸಾಂತ್ವನ ಕೇಂದ್ರವು ಆಪ್ತ ಸಮಾಲೋಚನೆಗೆ ಕೊಠಡಿಗಳ ಸಮಸ್ಯೆ ಎದುರಿಸುತ್ತಿದೆ. ಈ ಹಿಂದೆ ಹಳೆ ಪುರಸಭೆ ಕಟ್ಟಡದಲ್ಲಿದ್ದ ಸಾಂತ್ವನ ಕೇಂದ್ರ ಪ್ರಸ್ತುತ ತಾ.ಪಂ ಸಾಮರ್ಥ್ಯ ಸೌಧದಲ್ಲಿ ಕಾರ್ಯಾಚರಿಸುತ್ತಿದೆ.ಆದರೆ ಅಲ್ಲಿ ಆಪ್ತ ಸಮಾಲೋಚನೆಗೆ ಸುರಕ್ಷಿತ ವ್ಯವಸ್ಥೆಯಿಲ್ಲ ಎನ್ನುವ ದೂರು ಕೇಳಿ ಬರುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯು ಐದು ಸಾಂತ್ವನ ಕೇಂದ್ರಗಳನ್ನು ಹೊಂದಿದೆ, ಇದನ್ನು ವಿವಿಧ ಎನ್‌ಜಿಒಗಳು ನಡೆಸುತ್ತವೆ. ಪುತ್ತೂರಿನ ಸಾಂತ್ವನ ಕೇಂದ್ರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿದ್ದರೂ ಅದನ್ನು ಸಮಾಜ ಕಾರ್ಯ ಸಂಸ್ಥೆ ಜನಶಿಕ್ಷಣ ಟ್ರಸ್ಟ್ ನಡೆಸುತ್ತಿದೆ. ಪ್ರತಿ ಸಾಂತ್ವವ ಕೇಂದ್ರವು ಒಬ್ಬ ಸಲಹೆಗಾರ ಮತ್ತು ಮೂವರು ಸಾಮಾಜಿಕ ಕಾರ್ಯಕರ್ತರನ್ನು ಹೊಂದಿದೆ ಮತ್ತು ಅವರು ವರದಕ್ಷಿಣೆ, ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಕೌಟುಂಬಿಕ ಹಿಂಸೆಯಂತಹ ವಿವಿಧ ದೌರ್ಜನ್ಯಗಳಿಗೆ ಬಲಿಯಾದ ಮಹಿಳೆಯರಿಗೆ ಸಮಾಲೋಚನೆ ಮತ್ತು ಕಾನೂನು ನೆರವು, ಸಹಾಯ ಮಾಡಲು ವಾರದ ಎಲ್ಲಾ ದಿನಗಳಲ್ಲೂ ಕೆಲಸ ಮಾಡುತ್ತಾರೆ.ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಾಂತ್ವನ ನೀಡುವ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ 2001-02ರಲ್ಲಿ ‘ಸಾಂತ್ವನ’ ಯೋಜನೆಯನ್ನು ಪ್ರಾರಂಭಿಸಲಾಯಿತಾದರೂ ಪುತ್ತೂರಿನ ಸಾಂತ್ವನ ಕೇಂದ್ರದಲ್ಲಿ ಆಪ್ತ ಸಮಾಲೋಚನೆಗೆ ಕೊಠಡಿ ಕೊರತೆಯಿದೆ.


ಕೊಠಡಿ ಕೊರತೆ: ಹಿಂದೆ ಹಳೆ ಪುರಸಭಾ ಕಟ್ಟಡದಲ್ಲಿದ್ದ, ನಾಲ್ಕು ಕೊಠಡಿಯನ್ನೊಳಗೊಂಡ ಸಣ್ಣ ಪ್ರತ್ಯೇಕ ಕಟ್ಟಡವನ್ನು ಸಾಂತ್ವನ ಕೇಂದ್ರಕ್ಕೆ ನೀಡಲಾಗಿತ್ತು.ಅಲ್ಲಿ ಸಮಾಲೋಚನೆ ನಡೆಸಲು ಪ್ರತ್ಯೇಕ ಕೊಠಡಿಗಳು ನೊಂದ ಮಹಿಳೆಯರಗೆ ಪೂರಕವಾಗಿತ್ತು. ಆದರೆ ಆ ಕಟ್ಟಡ ತೀರಾ ಹಳೆಯದಾಗಿದ್ದು, ಶೋಚನಿಯ ಸ್ಥಿತಿಯಲ್ಲಿದ್ದುದರಿಂದ ಅಲ್ಲಿಂದ ಸಾಂತ್ವನ ಕೇಂದ್ರ ತಾ.ಪಂ ಸಾಮರ್ಥ್ಯ ಸೌಧಕ್ಕೆ ಸ್ಥಳಾಂತರಗೊಂಡಿತ್ತು. ಆದರೆ ಅಲ್ಲಿ ಒಂದೇ ಕೊಠಡಿ ಇರುವುದರಿಂದ ಆಪ್ತ ಸಮಾಲೋಚನೆಗೆ ಪ್ರತ್ಯೇಕ ಕೊಠಡಿಯ ಕೊರತೆಯಿದೆ. ಪಕ್ಕದಲ್ಲಿರುವ ಕಿಟಕಿಯಿಂದ, ಒಳಗೆ ಮಾತನಾಡುವುದು ಹೊರಗಡೆ ಕೇಳಬಹುದು ಎಂಬ ಸಂಶಯ ನೊಂದ ಮಹಿಳೆಯರಲ್ಲಿ ಕಾಡುತ್ತಿದೆ. ಈ ನಿಟ್ಟಿನಲ್ಲಿ ಸಾಂತ್ವನ ಕೇಂದ್ರಕ್ಕೆ ಪ್ರತ್ಯೇಕ ಕೊಠಡಿಗಳಿರುವ ಕಟ್ಟಡಕ್ಕೆ ಬೇಡಿಕೆ ವ್ಯಕ್ತವಾಗಿದೆ.

ಗಿಡಗಂಟಿಗಳಿಂದ ಮುಚ್ಚಿದ ಹಳೆ ಕಟ್ಟಡ ದುರಸ್ತಿಗೊಳಿಸಿದರೆ ಉತ್ತಮ
ಸಾಂತ್ವನ ಕೇಂದ್ರ ಈ ಹಿಂದೆ ಕಾರ್ಯಾಚರಿಸುತ್ತಿದ್ದ ನಗರಸಭೆ ಸ್ವಾನದಲ್ಲಿರುವ ಹಳೆ ಕಟ್ಟಡವನ್ನು ದುರಸ್ತಿಪಡಿಸದೆ ಗಿಡಗಂಟಿಗಳಿಂದ ಮುಚ್ಚಿದೆ. ಈ ಕಟ್ಟಡ ಶಾಸಕರ ಕಚೇರಿಯ ಪಕ್ಕದಲ್ಲಿದ್ದು, ಅದನ್ನು ದುರಸ್ತಿಗೊಳಿಸಿದರೆ ಸಾಂತ್ವನ ಕೇಂದ್ರಕ್ಕೆ ಮತ್ತೆ ಜೀವ ಕಲೆ ತುಂಬಿದಂತಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಠಡಿ ಸಮಸ್ಯೆ ಇರುವುದು ಹೌದು. ಹಳೆ ಪುರಸಭೆ ಕಟ್ಟಡ ತೆರವು ಮಾಡುವ ಸಂದರ್ಭ ನಾವು ಅಲ್ಲಿಂದ ತೆರಳಬೇಕಾಯಿತು. ಆದರೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆಗೆ ಈಗಾಗಲೇ ಸೀಶಕ್ತಿ ಭವನದ ಹಿಂಬದಿ ಕೊಠಡಿ ನೋಡಿದ್ದೇವೆ. ಅಲ್ಲಿ ಪಾರ್ಟಿಷಿಯನ್ ಕೂಡಾ ಮಾಡಿ ಆಗಿದೆ. ಅಲ್ಲಿಗೆ ಸಾಂತ್ವನ ಕೇಂದ್ರ ಶಿಫ್ಟ್ ಮಾಡಲಿದ್ದೇವೆ.‌ ಈ ನಡುವೆ ನಮ್ಮ ಸಮಸ್ಯೆ ಬಗೆಹರಿಸಲು ಶಾಸಕರಿಗೂ ಪತ್ರ ಮಾಡಿದ್ದೇವೆ. ಅವರನ್ನು ನಾವು ಖುದ್ದು ಭೇಟಿ ಮಾಡಿ ಸಮಸ್ಯೆಯನ್ನು ತೋಡಿಕೊಳ್ಳಲಿದ್ದೇವೆ. ಈ ಹಿಂದೆ ಇದ್ದ ಹಳೆ ಕಟ್ಟಡವನ್ನು ದುರಸ್ತಿ ಮಾಡಿಕೊಡುವುದಾದರೆ ಅಲ್ಲಿಯೂ ಸಾಂತ್ವನ ಕೇಂದ್ರ ಮುಂದುವರಿಸಬಹುದು ಎಂಬ ಮನವಿಯನ್ನೂ ಮಾಡಲಿದ್ದೇವೆ

  • ಕೃಷ್ಣ ಶೆಟ್ಟಿ ನಿರ್ದೇಶಕರು,
    ಜನ ಶಿಕ್ಷಣ ಟ್ರಸ್ಟ್

LEAVE A REPLY

Please enter your comment!
Please enter your name here