ಪುತ್ತೂರು: ದರ್ಬೆ ಸಂತ ಫಿಲೋಮಿನಾ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದಲ್ಲಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ 2000ರಲ್ಲಿ ನಿವೃತ್ತರಾದ ಸಹಾಯಕ ಪ್ರಾಧ್ಯಾಪಕಿ ಪ್ರೊ|ಕೊನ್ಸೆಪ್ಟ ಲೋಬೋರವರಿಗೆ ನ.2 ರಂದು 82ರ ಹುಟ್ಟುಹಬ್ಬದ ಸಂಭ್ರಮ. ಈ ನಿಟ್ಟಿನಲ್ಲಿ ಪ್ರೊ|ಕೊನ್ಸೆಪ್ಟ ಲೋಬೋರವರ ನೆಚ್ಚಿನ ಹಿರಿಯ ವಿದ್ಯಾರ್ಥಿಗಳು ಕೂರ್ನಡ್ಕದಲ್ಲಿನ ಅವರ ನಿವಾಸಕ್ಕೆ ಭೇಟಿಯಿತ್ತು ಪ್ರೊ|ಕೊನ್ಸೆಪ್ಟ ಲೋಬೋರವರ ಜನುಮದಿನಕ್ಕೆ ಅವರನ್ನು ಸನ್ಮಾನಿಸಿ ತುಂಬು ಹೃದಯದಿಂದ ಶುಭ ಹಾರೈಸಿದ್ದಾರೆ.
ಜಿ.ಎಲ್ ಜ್ಯುವೆಲ್ಲರ್ಸ್ ಸಂಸ್ಥೆಯ ಮಾಲಕ ಬಲರಾಂ ಆಚಾರ್ಯ ಮಾತನಾಡಿ, ಅವಿವಾಹಿತರಾಗಿರುವ ಮೇಡಂ ಕೊನ್ಸೆಪ್ಟ ಲೋಬೊರವರನ್ನು ಆನಂದ ರೈಯವರು ಕೇರ್ ಟೇಕರ್ ಆಗಿ ನೋಡಿಕೊಳ್ಳುತ್ತಿರುವುದು ಪುಣ್ಯದ ಕೆಲಸವಾಗಿದೆ. ಕಾಲೇಜು ದಿನಗಳಲ್ಲಿ ಮೇಡಂ ಕೊನ್ಸೆಪ್ಟ ಲೋಬೋರವರಿಂದ ಸಾಕಷ್ಟು ಕಲಿತ್ತಿದ್ದೇವೆ ಎಂದು ಹೇಳಿ ಮೇಡಂರವರ ಮುಂದಿನ ಜೀವನವು ಆಯುರಾರೋಗ್ಯದಿಂದ ಕೂಡಿರಲಿ ಎಂದು ಹೇಳಿ ಶುಭ ಹಾರೈಸಿದರು.
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ ಮಾತನಾಡಿ, 1972ರಲ್ಲಿ ನಾನು ಫಿಲೋಮಿನಾ ಕಾಲೇಜಿಗೆ ಸೇರ್ಪಡೆಗೊಂಡಿದ್ದೆ. ತನ್ನ ವೃತ್ತಿ ಜೀವನದ ಸಂದರ್ಭದಲ್ಲಿ ಮೇಡಂ ಕೊನ್ಸೆಪ್ಟರವರು ನಮ್ಮಂತಹ ವಿದ್ಯಾರ್ಥಿಗಳಿಗೆ ಅನೇಕ ಬಾರಿ ನೆರವಿನ ಹಸ್ತ ಚಾಚುವ ಮೂಲಕ ಮಾನವೀಯತೆಯನ್ನು ಮೆರೆದಿರುತ್ತಾರೆ. ಮೇಡಂರವರ ಮುಂದಿನ ಜೀವನವು ನೆಮ್ಮದಿಯ ಬದುಕಿನಿಂದ ಕೂಡಿರಲಿ ಎಂದು ಹೇಳಿ ಶುಭ ಹಾರೈಸಿದರು.
ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈ ಮಾತನಾಡಿ, ಪಿಯುಸಿಯಲ್ಲಿ ನಾನು ಮೇಡಂ ಕೊನ್ಸೆಪ್ಟರವರ ವಿದ್ಯಾರ್ಥಿಯಾಗಿದ್ದು ಬಳಿಕ ತಾನು ಕಲಾ ಪದವಿಯನ್ನು ಆರಿಸಿಕೊಂಡೆ. ಮೇಡಂ ಕೊನ್ಸೆಪ್ಟರವರು ತನ್ನ ವೃತ್ತಿ ಜೀವನದ ಸಂದರ್ಭದಲ್ಲಿ ಎಲ್ಲರ ಪ್ರೀತಿಯನ್ನು ಸಂಪಾದಿಸಿ ಎಲ್ಲರಿಗೂ ಪ್ರೀತಿಯ ಮೇಡಂ ಎನಿಸಿಕೊಂಡಿದ್ದಾರೆ ಎಂದು ಹೇಳಿ ಮೇಡಂ ಕೊನ್ಸೆಪ್ಟರವರ ಮುಂದಿನ ಜೀವನವು ಸುಖ-ನೆಮ್ಮದಿಯಿಂದ ಕೂಡಿರಲಿ ಎಂದು ಹೇಳಿ ಶುಭ ಹಾರೈಸಿದರು.
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ|ಝೇವಿಯರ್ ಡಿ’ಸೋಜ ಮಾತನಾಡಿ, ತಾನು ಕಾಲೇಜಿನ ಪ್ರಾಂಶುಪಾಲರಾಗಿದ್ದ ಸಂದರ್ಭದಲ್ಲಿ ಮಹಿಳಾ ದಿನಾಚರಣೆಯ ದಿನದಂದು ವಿವಿಧ ವೃತ್ತಿಯಲ್ಲಿನ ಪ್ರಥಮ ಮಹಿಳೆಯನ್ನು ಗುರುತಿಸುವ ಕಾರ್ಯವನ್ನು ಹಮ್ಮಿಕೊಂಡ ಸಂದರ್ಭದಲ್ಲಿ ಪುತ್ತೂರಿನ ಪ್ರಥಮ ಅಧ್ಯಾಪಿಕೆಯಾಗಿರುವ ಕೊನ್ಸೆಪ್ಟ ಮೇಡಂರವರು ಆಗಮಿಸಿ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದ್ದರು. ಮೇಡಂ ಕೊನ್ಸೆಪ್ಟರವರ ಮುಂದಿನ ಜೀವನವು ಆರೋಗ್ಯದಾಯಕವಾಗಿರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಶಿವರಾಂ ರೈ, ಗಣೇಶ್ ರೈ, ಏಷ್ಯನ್ ವುಡ್ನ ಇಸ್ಮಾಯಿಲ್ ಹಾಗೂ ಆನಂದ ರೈಯವರ ಕುಟುಂಬಿಕರು ಉಪಸ್ಥಿತರಿದ್ದರು. ಮೇಡಂ ಕೊನ್ಸೆಪ್ಟ ಲೋಬೊರವರ ಕೇರ್ ಟೇಕರ್ ಆನಂದ ರೈ ಸ್ವಾಗತಿಸಿ, ಆನಂದ ರೈಯವರ ಪುತ್ರ ಅಭಿಷೇಕ್ ವಂದಿಸಿದರು.
1965ರಲ್ಲಿ ಸೇವೆ ಆರಂಭ..
ಮೂಲತಃ ಮೂಡುಫೆರಾರ್ ನಿವಾಸಿಯಾಗಿರುವ ದಿ.ಝೇವಿಯರ್ ಲೋಬೋ ಹಾಗೂ ದಿ.ಕ್ಯಾಥರೀನ್ ಡಿ’ಕುನ್ಹರವರ ಐವರು ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದ ಕೊನ್ಸೆಪ್ಟ ಲೋಬೋರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನ ಪಡೀಲು ಸೈಂಟ್ ಜೋಸೆಫ್ಸ್ ಎಲಿಮೆಂಟರಿ ಸ್ಕೂಲ್ನಲ್ಲಿ, ಪ್ರೌಢಶಿಕ್ಷಣವನ್ನು ಮಂಗಳೂರಿನ ನಾಗುರಿ ಕಪಿತಾನಿಯೋ ಸ್ಕೂಲ್ನಲ್ಲಿ, ಪದವಿ ಶಿಕ್ಷಣವನ್ನು ಮಂಗಳೂರು ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ, ಸಸ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಮೈಸೂರು ಮಾನಸ ಗಂಗೋತ್ರಿ ವಿಶ್ವವಿದ್ಯಾನಿಲಯದಲ್ಲಿ ಪೂರೈಸಿದ್ದರು. 1965, ಜುಲೈ 13ರಂದು ಫಿಲೋಮಿನಾ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ನೇಮಕಗೊಂಡು, ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ 2000, ಮಾರ್ಚ್ 31ರಂದು ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ನಿವೃತ್ತಿ ಹೊಂದಿದ್ದರು.
ಪ್ರೀತಿಯ ವಿದ್ಯಾರ್ಥಿಗಳಿಗೆ ದೇವರು ಆಶೀರ್ವದಿಸಲಿ..
ತನ್ನ ವೃತ್ತಿ ಜೀವನದಲ್ಲಿ ಅನೇಕ ವಿದ್ಯಾರ್ಥಿಗಳನ್ನು ಕಂಡಿದ್ದೇನೆ. ಎಲ್ಲ ವಿದ್ಯಾರ್ಥಿಗಳು ತನ್ನನ್ನು ‘ಮದರ್’ ಎಂದೇ ಕರೆಯುತ್ತಿದ್ದರು. ನನ್ನ ಆ ಎಲ್ಲಾ ವಿದ್ಯಾರ್ಥಿ ಸಮೂಹಕ್ಕೆ ದೇವರು ಒಳ್ಳೆಯ ಸ್ಥಾನಮಾನ, ಗೌರವ, ನೆಮ್ಮದಿ ಹಾಗೂ ಆಶೀರ್ವಾದವನ್ನು ಭಗವಂತನಲ್ಲಿ ನಾನು ಸದಾ ಪ್ರಾರ್ಥಿಸುತ್ತೇನೆ. ಆನಂದ ರೈಯವರು ಸದಾ ನನ್ನೊಂದಿಗೆ ಇದ್ದು ನನ್ನನ್ನು ಉತ್ತಮವಾಗಿ ನೋಡಿಕೊಳ್ಳುತ್ತಿದ್ದಾರೆ.
-ಪ್ರೊ|ಕೊನ್ಸೆಪ್ಟ ಲೋಬೊ, ನಿವೃತ್ತ ಸ.ಪ್ರಾಧ್ಯಾಪಕಿ, ಫಿಲೋಮಿನಾ ಕಾಲೇಜು