ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

ನೆಲ್ಯಾಡಿ: ಸಂತ ಜಾರ್ಜ್ ವಿದ್ಯಾಸಂಸ್ಥೆ ನೆಲ್ಯಾಡಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್‌ರವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಕನ್ನಡ ಭಾಷೆಯ ಬಗ್ಗೆ ಕನ್ನಡಿಗರಾದ ನಮ್ಮಲ್ಲಿ ಅಭಿಮಾನವಿರಬೇಕು. ಯಾವುದೇ ಭಾಷೆಯನ್ನು ಆಸಕ್ತಿದಾಯಕವಾಗಿ ಕಲಿಸಿದಾಗ ಅದರ ಮೇಲೆ ಒಲವು ತನ್ನಿಂದ ತಾನಾಗಿ ಮೂಡುತ್ತದೆ. ಹೀಗೆ ಕನ್ನಡಿಗರಾದ ನಾವು ಕನ್ನಡದ ಕಸ್ತೂರಿಯನ್ನು ಎಲ್ಲೆಡೆ ಪಸರಿಸಬೇಕು ಎಂದು ಹೇಳಿದರು.

ಪ್ರಧಾನ ಭಾಷಣಗಾರರಾಗಿದ್ದ ಕನ್ನಡ ಉಪನ್ಯಾಸಕರಾದ ಚೇತನ್ ಕುಮಾರ್ ಟಿ. ಅವರು ಮಾತನಾಡಿ, ಕನ್ನಡ ರಾಜ್ಯೋತ್ಸವದಂದು ಮಾತ್ರ ಕನ್ನಡಾಭಿಮಾನವನ್ನು ಮೆರೆದರೆ ಸಾಲದು. ಅದು ದಿನನಿತ್ಯ ನಮ್ಮ ನರನಾಡಿಗಳಲ್ಲಿ ಹರಿಯಬೇಕು. ಕರ್ನಾಟಕದಲ್ಲಿ ಕನ್ನಡದ ಹಿನ್ನಡೆಗೆ ಕನ್ನಡಿಗರಾದ ನಾವೇ ಕಾರಣ. ಹಾಗಾಗಿ ಅದನ್ನರಿತು ನಾವು ನಮ್ಮ ಭಾಷೆಯ ಉಳಿವಿಗೆ ಶ್ರಮಿಸಬೇಕು ಎಂದು ಹೇಳಿದರು.

ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಏಲಿಯಾಸ್ ಎಂ.ಕೆ, ತೋಮಸ್ ಎಂ.ಐ, ಹರಿಪ್ರಸಾದ್ ಕೆ ಶುಭ ಹಾರೈಸಿದರು. ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಕುರಿತಾದ ಭಾಷಣ ಹಾಗೂ ಹಾಡನ್ನು ಪ್ರಸ್ತುತ ಪಡಿಸಿದರು. ಸಂಸ್ಥೆಯ ಇತಿಹಾಸ ಉಪನ್ಯಾಸಕರಾದ ವಿಶ್ವನಾಥ್ ಶೆಟ್ಟಿ ಕೆ ರವರು ಕನ್ನಡ ಗೀತೆಯನ್ನು ಹಾಡಿದರು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆಸಿದ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಶಿಕ್ಷಕಿ ಭವ್ಯಾರವರು ಪ್ರಕಟಿಸಿದರು. ಜಿಲ್ಲಾ ಮಟ್ಟದ ಕ್ರೀಡಾ ಸಾಧಕರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಕನ್ನಡ ಭಾಷಾ ಶಿಕ್ಷಕ ಕರುಣಾಕರ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮಾಧ್ಯಮ ಕಾರ್ಯಕ್ರಮ ಸಂಯೋಜಕಿ ಪ್ರಫುಲ್ಲ ಸ್ವಾಗತಿಸಿ, ಆಂಗ್ಲ ಮಾಧ್ಯಮ ಕಾರ್ಯಕ್ರಮ ಸಂಯೋಜಕಿ ಅನುಷಾ ವಂದಿಸಿದರು. ಸಂಸ್ಥೆಯ ಉಪನ್ಯಾಸಕರು, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here