ಉದ್ಯೋಗ ಖಾತರಿಯಲ್ಲಿ ದಾಖಲೆಗಳ ನಿರ್ವಹಣೆ ಸಮರ್ಪಕವಾಗಿರಬೇಕು- ವಿಷ್ಣುಪ್ರಸಾದ್ ಸಿ.
ಪುತ್ತೂರು: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹಾಗೂ 15ನೇ ಹಣಕಾಸು ಯೋಜನೆ 2023-24ನೇ ಸಾಲಿನ ಕೊಳ್ತಿಗೆ ಗ್ರಾಮ ಪಂಚಾಯತ್‌ನ ಪ್ರಥಮ ಮತ್ತು ದ್ವಿತೀಯ ಹಂತದ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ ನ.4ರಂದು ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.
ಉದ್ಯೋಗ ಖಾತರಿ ಯೊಜನೆಯ ಕಾರ್ಯಕ್ರಮ ವ್ಯವಸ್ಥಾಪಕ ಪ್ರವೀಣ್ ಪ್ರಾಸ್ತಾವಿಕ ಮಾತನಾಡಿ 2005ರಿಂದ ಉದ್ಯೋಗ ಖಾತರಿ ಯೋಜನೆ ಜಾರಿಗೆಯಾಗಿದ್ದು 2008-09ರಲ್ಲಿ ಕರ್ನಾಟಕದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಕೂಲಿ ಕಾರ್ಮಿಕರಿಗೆ ನೂರು ದಿನಗಳ ಕೆಲಸ, ಆಸ್ತಿಗಳನ್ನು ಸೃಜಿಸುವುದು ಇದರ ಉದ್ಧೇಶವಾಗಿದೆ. ಗ್ರಾಮೀಣ ಮಟ್ಟದಲ್ಲಿ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಬಲಪಡಿಸಲು ಇದು ಸಹಕಾರಿಯಾಗಿದೆ. ಕೇಂದ್ರ ಸರಕಾರದ ಹಣಕಾಸು ಯೋಜನೆಯನ್ನು ಉದ್ಯೋಗ ಖಾತರಿಯೊಂದಿಗೆ ಸೇರಿಸಲಾಗಿದ್ದು ಕಾಮಗಾರಿ ಉದ್ದೇಶಕ್ಕಾಗಿಯೇ ಹಣ ಬಳಕೆಯಾಗಿದೆಯಾ ಎಂಬುದನ್ನು ಗುರುತಿಸಲಾಗುತ್ತದೆ ಎಂದರು. 2022ರ ಎಪ್ರಿಲ್‌ನಿಂದ 2023ರ ಮಾರ್ಚ್‌ವರೆಗೆ ನಡೆಸಲಾದ ಕಾಮಗಾರಿಯ ವಿವರ ತಿಳಿಸಿ ಒಟ್ಟು 129 ಕಾಮಗಾರಿ ನಡೆಸಲಾಗಿದ್ದು ರೂ.21,82,367 ಮೊತ್ತ ಪಾವತಿಯಾಗಿದೆ ಎಂದರು. 2022-23ರ ಕಾಮಗಾರಿಯ ಲೆಕ್ಕಪರಿಶೋಧನೆಯಲ್ಲಿ ಕಂಡು ಬಂದ ಕೆಲವು ನ್ಯೂನತೆಗಳನ್ನು ತಿಳಿಸಿ ಎನ್‌ಆರ್‌ಎಮ್‌ಎಲ್‌ನಲ್ಲಿ ಸಹಿ ಹಾಕದೆ ಇರುವುದು, ಕಾಮಗಾರಿ ನಡೆಸಿ ಮೂಲ ಉದ್ಧೇಶಕ್ಕೆ ಬಳಸದೆ ಅನ್ಯ ಉದ್ಧೇಶಕ್ಕೆ ಬಳಕೆ ಮಾಡಿದ್ದು ಹಾಗೂ ಛಾಯಾಚಿತ್ರಗಳು ಇಲ್ಲದೆ ಇರುವುದರ ಬಗ್ಗೆ ಹೇಳಿದರು. ಕಾಮಗಾರಿಗೆ ಸಂಬಂಧಿಸಿ ಕಡ್ಡಾಯವಾಗಿ ನಾಮಫಲಕ ಅಳವಡಿಸುವಂತೆ ತಿಳಿಸಿದರು.
ಉದ್ಯೋಗ ಖಾತರಿ ಯೋಜನೆಯ ತಾಲೂಕು ತಾಂತ್ರಿಕ ಸಂಯೋಜಕ ವಿನೋದ್ ಮಾತನಾಡಿ ಉದ್ಯೋಗ ಖಾತರಿ ಯೋಜನೆ ಕೆಲಸ ಇಲ್ಲದವರಿಗೆ ಕೆಲಸ ನೀಡುವ ಯೋಜನೆಯಾಗಿದೆ. ಉದ್ಯೋಗ ಖಾತರಿಯಲ್ಲಿ ನಡೆಸಲಾದ ಕಾಮಗಾರಿಗಳಿಗೆ ಸಂಬಂಧಿಸಿದ ಬಿಲ್‌ಗಳನ್ನು ಗ್ರಾ.ಪಂ.ಗೆ ನೀಡಬೇಕು. ಕೆಲವು ವಸ್ತುಗಳ ಬಳಕೆಗೆ ಬಿಲ್‌ಗಳು ಇಲ್ಲದ ಸಂದರ್ಭದಲ್ಲಿ ಸ್ವಯಂ ದೃಢೀಕರಣ ಮಾಡಿದ ಬಿಲ್‌ನ್ನು ನೀಡಬೇಕು. ಯಾವುದೇ ಕಾಮಗಾರಿ ನಡೆಸಿ ಆಸ್ತಿಯನ್ನು ಮೂಲ ಉದ್ಧೇಶಕ್ಕೆ ಬಳಕೆ ಮಾಡದಿದ್ದರೆ ನರೇಗಾ ಅಧಿನಿಯಮ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತದೆ ಎಂದರು. ಇಲ್ಲಿ ನ್ಯೂನತೆಗಳು ತುಂಬ ಕಂಡು ಬಂದಿದೆ. ಆದ್ದರಿಂದ ಯಾವುದೇ ಕೆಲಸಗಳು ಪಾರದರ್ಶಕವಾಗಿರಬೇಕು. ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಮಾಹಿತಿ ಶಿಕ್ಷಣ ಸಂವಹನ ಸಂಯೋಜಕ ಭರತ್‌ರಾಜ್ ಮಾತನಾಡಿ ಉದ್ಯೋಗ ಖಾತರಿಯಲ್ಲಿ ವೈಯುಕ್ತಿಕ ಕಾಮಗಾರಿ ವೆಚ್ಚವನ್ನು ರೂ.2,50,೦೦೦ ದಿಂದ 5.ಲಕ್ಷದವರೆಗೆ ಏರಿಕೆ ಮಾಡಲಾಗಿದೆ. ಇದು ನಮಗೆ ವರದಾನವಾಗಿದೆ. ಕಾಮಗಾರಿ ನಡೆಸಿದ ಸ್ಥಳದಲ್ಲಿ ಹಳದಿ ಬಣ್ಣದ ನಾಮಫಲಕ ಅಳವಡಿಸುವುದು ಕಡ್ಡಾಯವಾಗಿದೆ. ಇದರಿಂದ ಎಲ್ಲರಿಗೂ ಮಾಹಿತಿ ಲಭ್ಯವಾಗುತ್ತದೆ. ಯೋಜನೆಯಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ದೀರ್ಘಬಾಳ್ವಿಕೆ ಬರುವಂತಹ ಆಸ್ತಿಗಳನ್ನು ನಿರ್ಮಿಸುವುದು ಇದರ ಉದ್ಧೇಶವಾಗಿದೆ. ಬಚ್ಚಲು ಗುಂಡಿ ನಿರ್ಮಾಣ ಮಾಡಿಕೊಳ್ಳಿ. ಪ್ರತೀ ಕಾಮಗಾರಿಯ ಮೂರು ಹಂತದ ಛಾಯಾಪ್ರತಿಯನ್ನು ಕಡ್ಡಾಯವಾಗಿ ನೀಡಬೇಕು. ಮಾನವ ದಿನಗಳ ಹಾಜರಾತಿ ಕಡ್ಡಾಯ. ಕಾಮಗಾರಿಗೆ ನಡೆಸಲು ಅರ್ಜಿಯನ್ನು ಮೊದಲೇ ನೀಡಬೇಕು ಎಂದು ಹೇಳಿ ಉದ್ಯೋಗ ಖಾತರಿಯನ್ನು ದುರುಪಯೋಗ ಮಾಡದೆ ಸದುಪಯೋಗ ಪಡೆಸಿಕೊಳ್ಳಿ ಎಂದರು.
ನೋಡಲ್ ಅಧಿಕಾರಿಯಾದ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್‌ನ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಸಿ. ಮಾತನಾಡಿ ಉದ್ಯೋಗ ಖಾತರಿಯಲ್ಲಿ ತಪ್ಪು ಮಾಡಿದರೆ ತಪ್ಪನ್ನು ತಿದ್ದಿಕೊಂಡು ಕೆಲಸ ನಿರ್ವಹಿಸಬೇಕು. ದಾಖಲೆಗಳನ್ನು ನಿರ್ವಹಣೆ ಮಾಡಬೇಕು. ದಾಖಲೆ ನಿರ್ವಹಣೆಯಲ್ಲಿ ಲೋಪಗಳಾದರೆ ಶಿಸ್ತುಕ್ರಮ ಜರಗಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಸರಿಯಾಗಿ ದಾಖಲೆ ನಿರ್ವಹಿಸಿಕೊಳ್ಳಿ ಎಂದರು.
ತಾಲೂಕು ತಾಂತ್ರಿಕ ಸಂಯೋಜಕಿ ಪ್ರಶಾಂತಿ ಯೋಜನೆ ಕಾಮಗಾರಿಯ ಮಾಹಿತಿ ನೀಡಿದರು. ಅಧ್ಯಕ್ಷೆ ಅಕ್ಕಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯರಾದ ಪವನ್ ಡಿ.ಜಿ., ಬಾಲಕೃಷ್ಣ, ಪ್ರೇಮಾ, ಯಶೊಧಾ ಬಾಬುರಾಜೇಂದ್ರ, ವೇದಾವತಿ ಉಪಸ್ಥಿತರಿದ್ದರು. ಸಿಬಂದಿಗಳು ಸಹಕರಿಸಿದರು. ಗ್ರಾ.ಪಂ. ದ್ವಿ.ದರ್ಜೆ ಲೆಕ್ಕಸಹಾಯಕ ಜಯಪ್ರಸಾದ್ ಸ್ವಾಗತಿಸಿ ವಂದಿಸಿದರು.
ಕಾಮಗಾರಿಯನ್ನು ಮೂಲ ಉದ್ಧೇಶಕ್ಕೆ ಬಳಕೆ ಮಾಡಬೇಕು:ಗ್ರಾ.ಪಂ.ಉಪಾಧ್ಯಕ್ಷ ಪ್ರಮೋದ್ ಕೆ.ಎಸ್. ಮಾತನಾಡಿ ಒಬ್ಬ ವ್ಯಕ್ತಿ ತನ್ನ ಕುಟುಂಬಕ್ಕೆ ಬೇಕಾದ ಕೆಲಸ ಕಾರ್ಯಗಳನ್ನು ಉದ್ಯೋಗ ಖಾತರಿಯಲ್ಲಿ ಮಾಡುವ ಅವಕಾಶವನ್ನು ಸರಕಾರ ಒದಗಿಸಿದೆ. ಆಸ್ತಿಗಳನ್ನು ಸೃಜಿಸುವುದು ಇದರ ಉದ್ಧೇಶ. ಯೋಜನೆಯಲ್ಲಿ ಕಾಮಗಾರಿಗಳು ಪಾರದರ್ಶಕವಾಗಿರಬೇಕು. ಕಾಮಗಾರಿಯನ್ನು ಮೂಲ ಉದ್ಧೇಶಕ್ಕೆ ಬಳಕೆ ಮಾಡಬೇಕು. ಇಲ್ಲದಿದ್ದರೆ ವಸೂಲಾತಿಗೆ ಕ್ರಮವಹಿಸಬೇಕಾಗುತ್ತದೆ. ಇಲ್ಲಿನ ಕಾಮಗಾರಿಗಳಲ್ಲಿ ಕೆಲವು ಲೋಪವಾಗಿದೆ. ಅದನ್ನು ಸರಿಪಡಿಸಿಕೊಂಡು ಹೋಗುತ್ತೇವೆ ಎಂದರು. ಈ ಯೋಜನೆಗೆ ಎಲ್ಲರೂ ಸಹಕಾರ ನೀಡಿದರೆ ಹೆಚ್ಚಿನ ಅನುದಾನ ತರಲು ಸಾಧ್ಯ. ಕೆಲವರಿಗೆ ಉದ್ಯೋಗ ಖಾತರಿ ಯೋಜನೆಯ ಹಣ ತೆಗೆದುಕೊಂಡು ಕಾಮಗಾರಿ ನಡೆಸಿದನ್ನು ಹೇಳಲು ನಾಚಿಕೆಯಾಗುತ್ತದೆ. ನಾಚಿಕೆ ಪಡುವವರು ಯೋಜನೆ ಪಡೆದುಕೊಳ್ಳುವುದು ಬೇಡ ಎಂದರು. ಮುಂದಿನ ಆರ್ಥಿಕ ವರ್ಷದಲ್ಲಿ ಕೋಟಿ ರೂ.ಗಳ ಅನುದಾನ ತರುವ ಯೋಜನೆ ಇಟ್ಟುಕೊಳ್ಳೋಣ ನ್ಯೂನತೆಗಳನ್ನು ಸರಿಪಡಿಸುವಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದರು.