ಪಡ್ನೂರು ಜನಾರ್ದನ ಯುವಕ ಮಂಡಲದ ಸುವರ್ಣ ಮಹೋತ್ಸವ, ಪಡ್ನೂರು ಉತ್ಸವ ಸಂಪನ್ನ

0

ಯುವಕ ಮಂಡಲದ 50 ವರ್ಷದ ಸಾಧನೆಗೆ ಗಣ್ಯರಿಂದ ಮೆಚ್ಚುಗೆ, ಮೇಲೈಸಿದ ಪಡ್ನೂರು ನೈಟ್

ಪುತ್ತೂರು: ವೈದ್ಯಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳ ಕಾಲ ಪಡ್ನೂರು ಹಿ.ಪ್ರಾ ಶಾಲಾ ಆವರಣದಲ್ಲಿ ಅದ್ಧೂರಿಯಾಗಿ ಸಂಭ್ರಮಿಸಿದ ಪಡ್ನೂರು ಶ್ರೀ ಜನಾರ್ದನ ಯುವಕ ಮಂಡಲದ ಸುವರ್ಣ ಮಹೋತ್ಸವ `ಪಡ್ನೂರು ಉತ್ಸವ’ವು ನ.6ರಂದು ಸಂಪನ್ನಗೊಂಡಿತು. ಸುವರ್ಣ ಮಹೋತ್ಸವಕ್ಕೆ ಆಗಮಿಸಿದ ಗಣ್ಯರು ಯುವಕ ಮಂಡಲದ 50 ವರ್ಷಗಳ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನ.4ರಂದು ಗಣಪತಿ ಹೋಮದೊಂದಿಗೆ ಪ್ರಾರಂಭಗೊಂಡ ಸುವರ್ಣ ಸಂಭ್ರಮವು ನಂತರ ಉಚಿತ ವೈದ್ಯಕೀಯ ಶಿಬಿರ, ಸಂಜೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ, ಪೌರಾಣಿಕ ನಾಟಕ ಪ್ರದರ್ಶನಗಳು ಪ್ರೇಕ್ಷಕರ ಮನಸೋರೆಗೊಳಿಸಿತು. ಕಬಡ್ಡಿಯಲ್ಲಿ ತನ್ನದೇ ಛಾಪು ಮೂಡಿಸಿದ್ದ ಜನಾರ್ದನ ಯುವಕ ಮಂಡಲವು ಸುವರ್ಣ ಸಂಭ್ರಮದ ಅಂಗವಾಗಿ ನ.6ರಂದು 58 ಕೆ.ಜಿ ವಿಭಾಗದ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ ನಡೆದು ಸಂಜೆ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭ ನೆರವೇರಿತು. ಸಭಾ ಕಾರ್ಯಕ್ರಮದ ಬಳಿಕ ಅದೃಷ್ಟ ಕೂಪನ್ ಲಕ್ಕಿಡಿಪ್ ಡ್ರಾ, ಅನ್ನಸಂತರ್ಪಣೆ ನೆವರೇರಿತು. ಕಾರ್ಯಕ್ರಮದಲ್ಲಿ ಊಟ, ಉಪಾಹಾರಗಳು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ವ್ಯವಸ್ಥಿತ ಹಾಗೂ ಶಿಸ್ತು ಬದ್ದವಾಗಿ ನೆರವೇರಿತ್ತು. ಕಾರ್ಯಕ್ರಮದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಲಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಳೆಯ ಮಧ್ಯೆಯೂ ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆದ ಸುವರ್ಣ ಮಹೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಪಡ್ನೂರು ಉತ್ಸವದ ವೈಭವವನ್ನು ಕಣ್ತುಂಬಿಕೊಂಡರು.

ಮೆಲೈಸಿದ ಪಡ್ನೂರು ನೈಟ್:
ಕರಾವಳಿ ಕರ್ನಾಟಕದ ಪ್ರಖ್ಯಾತ ಸಂಗೀತ ರಸಮಂಜರಿ ತಂಡವಾದ ಡಿಲ್ಸೆಸ್ ರಾಕ್ ಎನ್ ಮೆಲೋಡೀಸ್‌ರವರ ಕೇರಳ ಹಾಗೂ ಕರ್ನಾಟಕದ ಪ್ರಖ್ಯಾತ ವಾದಕ ಹಾಗೂ ಗಾಯಕರನ್ನು ಒಳಗೊಂಡ ಸಂಗೀತ, ನೃತ್ಯ, ರಸಮಂಜರಿ ಮೊದಲಾದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದ ಮನೋರಂಜನಾ ಪಡ್ನೂರು ನೈಟ್-2023 ಮೇಲೈಸಿತು.

ಪಡ್ನೂರು ಉತ್ಸವದ ಮುಖಾಂತರ ಗ್ರಾಮದ ಏಕೀಕರಣವಾಗಿದೆ-ನಳೀನ್ ಕುಮಾರ್ ಕಟೀಲ್:
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ವ್ಯಕ್ತಿಯ ನಿರ್ಮಾಣದಡಿಯಲ್ಲಿ ಸಮಾಜಮುಖಿ ಕಾರ್ಯಗಳಿಗೆ ಪಡ್ನೂರಿನ ಜನಾರ್ದನ ಯುವಕ ಮಂಡಲವು ಯುವಕರಿಗೆ ಪ್ರೇರಣೆ ನೀಡುವ ಕಾರ್ಯವಾಗುತ್ತಿದೆ. ಇದರಿಂದಾಗಿ ಪಡ್ನೂರು ಗ್ರಾಮವು ಸಂಸ್ಕಾರಯುತ ಗ್ರಾಮವಾಗಿ ಬೆಳೆದಿದೆ. ಯುವಕ ಮಂಡಲದ ಸುವರ್ಣ ಮಹೋತ್ಸವದ ಪಡ್ನೂರು ಉತ್ಸವದ ಮೂಲಕ ಗ್ರಾಮದ ಏಕೀಕರಣ ಮಾಡುವ ಅದ್ಬುತ ಕಾರ್ಯವಾಗಿದ್ದು ಇದು ಜಿಲ್ಲೆಯಲ್ಲಿ ಮೊದಲ ಕಾರ್ಯಕ್ರಮವಾಗಿ ಮೂಡಿಬಂದಿದೆ ಎಂದರು. ಸಮಾಜಮುಖಿ ಕಾರ್ಯಕ್ರಮಗಳಿಂದ ಪಡ್ನೂರಿನ ಯುವಕ, ಯುವತಿ ಮಂಡಲ ಸಮಾಜದ ಎಲ್ಲಾ ಯುವಕ ಮಂಡಲಗಳಿಗೆ ಪ್ರೇರಣೆಯಾಗಿದೆ. ಇಲ್ಲಿನ ಪ್ರೇರಣೆಯಿಂದ ಇತರ ಯುವಕ ಮಂಡಲಗಳು ಸಮಾಜಮುಖಿ ಕೆಲಸಗಳನ್ನು ಮಾಡುವಂತಾಗಲಿ. 50 ವರ್ಷದ ಸಾಧನೆ ಮುಂದಿನ ಶತಮಾನೋತ್ಸವ ಕಾರ್ಯಗಳಿಗೆ ಹೆಜ್ಜೆಯ ಗುರುತುಗಳಾಗಲಿ. ರಾಷ್ಟ್ರ ಚಿಂತನೆಯು ಯುವಕರು ಬೆಳೆಯಲಿ ಎಂದು ಹೇಳಿದರು.


ರಂಗಮಂದಿರಕ್ಕೆ ರೂ.5ಲಕ್ಷ ಅನುದಾನ:
ರಂಗಮಂದಿರದ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಬೇಡಿಕೆ ಸಲ್ಲಿಸಿದ್ದು ಇದಕ್ಕೆ ರೂ.5ಲಕ್ಷ ಅನುದಾನ ನೀಡಲಾಗುವುದು. ಈ ಅನುದಾನದ ಮೂಲಕ ಯುವಕ ಮಂಡಲದ ಹೆಸರಿನಲ್ಲಿ ಶಾಶ್ವತವಾದ ರಂಗ ಮಂದಿರ ನಿರ್ಮಾಣವಾಗಲಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಪಡ್ನೂರು ಉತ್ಸವ ಮೈಸೂರು ದಸರಾಕ್ಕಿಂತ ಕಡಿಮೆಯಾಗಿಲ್ಲ-ಸಂಜೀವ ಮಠಂದೂರು:
ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪಡ್ನೂರು ಹಿಂದುತ್ವದ ಶಕ್ತಿ ಪೀಠ. ಇಲ್ಲಿ ಆಗುವ ಕಾರ್ಯಕ್ರಮಗಳು ಹಿಂದುತ್ವದ ನೆಲೆಯಲ್ಲಿ ನಡೆಯುವ ಮೂಲಕ ರಾಷ್ಟ್ರಹಿತ ಬಯಸುವ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿದೆ. ಭಾರತ ಜಗದ್ಗುರು ಆಗಬೇಕು ಎಂಬ ನೆಲೆಯಲ್ಲಿ ಇಲ್ಲಿ ನಡೆಯುವ ಕಾರ್ಯಕ್ರಮಗಳು ತಾಲೂಕಿನಲ್ಲಿ ಮಾದರಿಯಾಗಿದೆ. ಪಡ್ನೂರು ಉತ್ಸವ ಇಡೀ ಗ್ರಾಮದ ಉತ್ಸವವಾಗಿ ನಡೆದು ಪರಿವರ್ತನೆಯಾಗಿ ಮತ್ತೊಮ್ಮೆ ಸಮಾಜಮುಖಿಯಾಗಿ ಚಿಂತನೆ ಮಾಡುವಂತೆ ಮಾಡಿದೆ. ಸುವರ್ಣ ಮಹೋತ್ಸವದ ಕಾರ್ಯಕ್ರಮಗಳು ಊರನ್ನು ಒಟ್ಟು ಗುಡಿಸುವ ಧಾರ್ಮಿಕತೆಯ ನೆಲಗಟ್ಟನ್ನು ಭದ್ರಗೊಳಿಸಿದೆ. ಯುವಕ ಮಂಡಲವು ಊರಿನ ಅಭಿವೃದ್ಧಿಗೆ ಪ್ರೇರಣೆ ನಿಡುವ ಕೆಲಸ ಮಾಡಿದೆ. 50 ಸಂವತ್ಸರಗಳಲ್ಲಿ ಸಮಾಜಮುಖಿಯಾಗಿ ತೊಡಗಿಸಿಕೊಂಡಿದೆ. ಗ್ರಾಮದ ಅಭಿವೃದ್ಧಿಗೆ ಯುವಕ ಮಂಡಲಗಳಲ್ಲಿ ಪಡ್ನೂರು ಜನಾರ್ದನ ಯುವಕ ಮಂಡಲವು ಒಂದಾಗಿದ್ದು ಅದ್ಧೂರಿಯಾಗಿ ನಡೆದ ಪಡ್ನೂರು ಉತ್ಸವದ ಮೂಲಕ ಮೈಸೂರಿನ ದಸಾರಕ್ಕೂ ಕಡಿಮೆಯಾಗಿಲ್ಲ. ದಸರಾ ಪಡ್ನೂರು ಉತ್ಸವ ಒಂದೇ ಎಂದು ತೋರಿಸಿಕೊಟ್ಟಿದೆ ಎಂದರು.

ಸುವರ್ಣ ಮಹೋತ್ಸವ ಬ್ರಹ್ಮಕಲಶೋತ್ಸವದ ಮಾದರಿಯಲ್ಲಿ ನಡೆದಿದೆ-ಹಾರಕರೆ ವೆಂಕಟ್ರಮಣ ಭಟ್:
ಸಮಾರೋಪ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ ಮಾತನಾಡಿ, ಪಡ್ನೂರಿನ ಹೆಸರಿನಲ್ಲಿಯೇ ಯುವಕ ಮಂಡಲವನ್ನು ನೆನಪಿಸುತ್ತದೆ. ಕಳೆದ 50 ವರ್ಷಗಳಲ್ಲಿ ಈ ಭಾಗದ ಸರ್ವರನ್ನು ಒಗ್ಗೂಡಿಸಿಕೊಂಡು ಅತೀ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಯುವಕ ಮಂಡಲದಲ್ಲಿ ಗ್ರಾಮದ ಎಲ್ಲಾ ಭಾಗದ ಜನರಿದ್ದು ದೇವಸ್ಥಾನ, ಭಜನಾ ಮಂದಿರ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಗಲು ಕೊಟ್ಟು ದುಡಿಯುವ ಯುವಕರ ತಂಡ ಯುವಕ ಮಂಡಲದಲ್ಲಿದೆ. ಉತ್ತಮ ಸಮಾಜಮುಖೀ ಕೆಲಸಗಳ ಮೂಲಕ ಗ್ರಾಮದಲ್ಲಿ ಗುರುತಿಸಿಕೊಂಡಿದೆ. ಪ್ರತಿಯೊಬ್ಬ ಸದಸ್ಯರ ಒಮ್ಮತದ ಅಭಿಪ್ರಾಯದಲ್ಲಿ ಮುನ್ನಡೆಯುತ್ತಿದೆ. ಎಲ್ಲರನ್ನು ಒಗ್ಗೂಡಿಸಿಕೊಂಡು ಸುವರ್ಣ ಮಹೋತ್ಸವವು ಬ್ರಹ್ಮಕಲಶೋತ್ಸವದ ಮಾದರಿಯಲ್ಲಿ ನಡೆದಿದೆ ಎಂದರು.

ಯುವಕ ಮಂಡಲದಿಂದ ಸಾಮಾಜಿಕ ಜಾಗೃತಿಯ ಕಾರ್ಯವಾಗಬೇಕು-ಮುರಳಿಕೃಷ್ಣ ಹಸಂತಡ್ಕ:
ಪ್ರಮುಖ ಭಾಷಣ ಮಾಡಿದ ಬಜರಂಗದಳದ ಪ್ರಾಂತ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕುಡಿಯುವ ನೀಡಿಗೆ ತತ್ವಾರವಾಗುತ್ತಿದೆ. ಹೀಗಾಗಿ ಯುವಕ ಮಂಡಲಗಳು ಜಲ, ಮಣ್ಣಿನ ಸಂರಕ್ಷಣೆಯ ಜಾಗೃತಿಗೊಳಿಸಬೇಕು. ಸಾಮಾಜಿಕ ಕಾರ್ಯಕ್ರಮದ ಮೂಲಕ ಪ್ರಕೃತಿಯ ಸಂರಕ್ಷಚಣೆಯಾಗಬೇಕು. ಜನ ಸಾಮಾನ್ಯರನ್ನು ಸಾಮಾಜಿಕವಾಗಿ ಜಾಗೃತಿಗೊಳಿಸಬೇಕು. 50ನೇ ಸಂಭ್ರಮದ ನೆನಪಿಗಾಗಿ ಮನೆ ಮನೆಗಳಲ್ಲಿ ಗಿಡ ನೆಡುವ ಮೂಲಕ ಪ್ರಕೃತಿಯ ಆರಾಧನೆಯ ರಾಷ್ಟ್ರ ನಿರ್ಮಾಣದ ಜೊತೆಗೆ ಪ್ರಕೃತಿ ನಿರ್ಮಾಣದ ಕೆಲಸವಾಗಬೇಕು. ರಾಷ್ಟ್ರ ನಿರ್ಮಾಣದ ಜೊತೆಗೆ ಅನೇಕ ಆಕ್ರಮಣಗಳನ್ನು ಎದುರಿಸಲು ಸಾಧ್ಯ. ಇದಕ್ಕಾಗಿ ಇಡೀ ಸಮಾಜವನ್ನು ಒಟ್ಟಾಗಿ ಮುನ್ನಡೆಸಬೇಕು ಎಂದರು.

ಪಡ್ನೂರು ಶಿಕ್ಷಣ ಕಾಶಿ-ಡಾ.ಶ್ರೀಧರ ಎಚ್.ಜಿ:
ವಿವೇಕಾನಂದ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ್ ಎಚ್.ಜಿ ಮಾತನಾಡಿ, ಪಡ್ನೂರು ಗ್ರಾಮದಿಂದ ವಿವೇಕಾನಂದ ಕಾಲೇಜಿಗೆ ಬಂದಿರುವ ವಿದ್ಯಾರ್ಥಿಗಳಷ್ಟು ಬೇರೆ ಯಾವ ಗ್ರಾಮಗಳಿಂದಲೂ ಬಂದಿಲ್ಲ. ಹಳೆ ವಿದ್ಯಾರ್ಥಿಗಳ ಮಾಹಿತಿಯ ಪ್ರಕಾರ ಪ್ರತಿಯೊಂದು ಮನೆಯಲ್ಲಿಯೂ ವಿವೇಕಾನಂದ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಣ ಕಾಶಿ ಪಡ್ನೂರು ಗ್ರಾಮದಲ್ಲಿದ್ದು ಅದನ್ನು ಉಳಿಸಿ ಬೆಳೆಸಬೇಕು ಎಂದರು.

ಮಕ್ಕಳನ್ನು ಯುವಕ ಮಂಡಲಕ್ಕೆ ಸೇರ್ಪಡೆಗೊಳಿಸಿ-ವಿಶ್ವನಾಥ ಗೌಡ ಪಟ್ಟೆ
ಅಧ್ಯಕ್ಷತೆ ವಹಿಸಿದ್ದ ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ಗೌಡ ಪಟ್ಟೆ ಮಾತನಾಡಿ, ಕಷ್ಟದಲ್ಲಿ ಮುನ್ನಡೆಸಿ ಯುವಕ ಮಂಡಲವು 50 ಸಂವತ್ಸರಗಳನ್ನು ಪೂರೈಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. 20ಕ್ಕೂ ಅಧಿಕ ಮಂದಿ ಪದಾಧಿಕಾರಿಗಳಗಾಗಿ ಯುವಕ ಮಂಡಲವನ್ನು ಮುನ್ನಡೆಸಿರುತ್ತಾರೆ. ಸಾಮಾನ್ಯ ಕಾರ್ಯಕರ್ತರಾಗಿ ದುಡಿದ ಪದಾಧಿಕಾರಿಗಳು ಯುವಕ ಮಂಡಲದ ಬೆಳವಣಿಗೆಗೆ ತನ್ನ ಸೇವೆಯನ್ನು ಮುಡಿಪಾಗಿರಿಸಿರುತ್ತಾರೆ ಎಂದ ಅವರು ದೇಶಾಭಿಮಾನ ಹೊಂದಿರುವ ಯುವಕ ಮಂಡಲಗಳಿಗೆ ಮಕ್ಕಳನ್ನು ಸೇರ್ಪಡೆಗೊಳಿಸುವಂತೆ ಅವರು ಪೋಷಕರಲ್ಲಿ ವಿನಂತಿಸಿದರು. ಮುಂಬಯಿ ಗಿರಿಜಾ ವೆಲ್‌ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ವಸಂತ ಮುಂಬಯಿ, ಬನ್ನೂರು ಗ್ರಾ.ಪಂ ಅಧ್ಯಕ್ಷೆ ಸ್ಮಿತಾ, ಸರಸ್ವತಿ ಯುವತಿ ಮಂಡಲದ ಗೌರವಾಧ್ಯಕ್ಷೆ ಸರೋಜ ಜಿ.ರಾವ್, ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಜೋಯಿಷ ಯರ್ಮುಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಧಾರ್ಮಿಕ ಕ್ಷೇತ್ರದಲ್ಲಿ ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್, ಪವರ್‌ಮೆನ್ ವಾಲ್ಟರ್ ರವಿ, ನಿವೃತ್ತ ಸೈನಿಕ ವಿಜಯ ನೆಲಪ್ಪಾಲು, ಸಾಮಾಜಿಕ ಕ್ಷೇತ್ರದಲ್ಲಿ ಮುಂಬಯಿ ಗಿರಿಜಾ ವೆಲ್‌ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ವಸಂತ ಮುಂಬಯಿ, ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ಕಾಂತಪ್ಪ ಗೌಡ ಪುಳು, ಸಾಹಿತ್ಯ ಕ್ಷೇತ್ರದಲ್ಲಿ ಡಾ.ಶ್ರೀಧರ ಎಚ್.ಜಿ, ಪತ್ರಿಕಾ ವಿತರಕ ಗಣಪತಿ ಭಟಗ ಯರ್ಮುಂಜ, ಯುವಕ ಮಂಡಲದ ಮಾಜಿ ಅಧ್ಯಕ್ಷ ಜನಾರ್ದನ ಭಟ್ ಸೇಡಿಯಾಪು, ಪಡ್ನೂರು ಅಂಚೆ ಇಲಾಖೆಯ ಗಣಪತಿ ಭಟ್ ಪುಳು, ಪಡ್ನೂರು ಶಾಲಾ ನಿವೃತ್ತ ಮುಖ್ಯಗುರುಗಳಾದ ಮಹಾಲಿಂಗ ಭಟ್ ಪಡ್ನೂರು, ಸುಬ್ಬಣ್ಣ ಭಟ್ ವಳಂಗಜೆ, ಶಂಕರಿ ಅಜೇಯನಗರ, ವಾರಿಜಾಕ್ಷಿಯವರನ್ನು ಸನ್ಮಾನಿಸಲಾಯಿತು.

ಶ್ವೇತಾ, ನವ್ಯ, ರಮ್ಯ ಪ್ರಾರ್ಥಿಸಿದರು. ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಧರ ಕುಂಜಾರು ಪ್ರಸ್ತಾವಣೆಯೊಂದಿಗೆ ಸ್ವಾಗತಿಸಿದರು. ಕಿಶೋರ್ ಕುಂಜಾರು, ಗಿರೀಶ್ ಕಡ್ತಿಮಾರ್, ಪೂವಪ್ಪ ದೇಂತಡ್ಕ, ಗಿರಿಧರ ಗೌಡ ಪಂಜಿಗುಡ್ಡೆ, ಅವಿನಾಶ್ ಕಡ್ತಿಮಾರ್, ವಿನೋದ್ ಪಟ್ಟೆ, ಬಾಲಕೃಷ್ಣ ಗೌಡ ಮೂವಪ್ಪು, ಶ್ಯಾಂ ಪ್ರಸಾದ್ ಪಂಜಿಗುಡ್ಡೆ, ವಿಶ್ವಪ್ರಸಾದ್ ಸೇಡಿಯಾಪು, ರಾಜೇಶ್ ಆಟಿಕ್ಕು, ಯಶೋಧರ ಕುಂಜಾರು, ರಾಜೇಶ್ ಬೇರಿಕೆ, ಜಗದೀಶ್ ಆಟಿಕ್ಕು, ರಮ್ಯ ಪಟ್ಟೆ, ಸುಮಿತ್ರ ಮುಂಡಾಜೆ ಯುವತಿ ಮಂಡಲದ ಜ್ಯೋತಿ ಪಟ್ಟೆ, ರೇಖಾ ಆಟಿಕ್ಕು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸುವರ್ಣ ಮಹೋತ್ಸವ ಸಮಿತಿ ಕೋಶಾಧಿಕಾರಿ ರಾಜೇಶ್ ಬೇರಿಕೆ ಹಾಗೂ ನವೀನ್ ಕುಲಾಲ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ದೇಂತಡ್ಕ ವಂದಿಸಿದರು.

LEAVE A REPLY

Please enter your comment!
Please enter your name here