ಪುತ್ತೂರು: ಸಂಸ್ಕಾರ ಭಾರತೀ ಪುತ್ತೂರು ಘಟಕದ ವತಿಯಿಂದ ನ.5ರಂದು ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ನಡೆದ ವಾಲ್ಮೀಕಿ ನಮನ ಕಾರ್ಯಕ್ರಮ ನಡೆಯಿತು. ನಿವೃತ್ತ ಉಪನ್ಯಾಸಕರು ಹಾಗೂ ಸಾಹಿತಿ ಪ್ರೊ. ಹರಿನಾರಾಯಣ ಮಾಡಾವು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ದರೋಡೆಕಾರನಾದ ರತ್ನಾಕರನೆಂಬ ಬೇಡನು ದೇವರ್ಷಿ ನಾರದರ ಉಪದೇಶದ ಮೇರೆಗೆ ರಾಮಾಯಣದಂತಹ ಬೃಹದ್ಗ್ರಂಥವನ್ನು ರಚಿಸಿ ಆದಿಕವಿ ವಾಲ್ಮೀಕಿ ಎನಿಸಿಕೊಂಡ ಎಂದರು.
24,000 ಶ್ಲೋಕಗಳನ್ನೊಳಗೊಂಡ ರಾಮಾಯಣ ಗ್ರಂಥದ ಸಾರವು ಇಂದಿಗೂ ಪ್ರಸ್ತುತ ಎಂದ ಅವರು ವಾಲ್ಮೀಕಿಯ ಪೂರ್ವೇತಿಹಾಸದ ಸವಿಸ್ತಾರವಾದ ವಿವರಗಳನ್ನು ನೀಡಿದರು.ಕಾರ್ಯಕ್ರಮದಲ್ಲಿ, ಸದಸ್ಯೆ ಶಂಕರಿ ಶರ್ಮ ಅವರು ವಾಲ್ಮೀಕಿ ನುಡಿನಮನ ಸಲ್ಲಿಸುತ್ತಾ, ರಾಮಾಯಣದಲ್ಲಿರುವ ವಿಭಿನ್ನ ಪಾತ್ರಗಳು ಇಂದಿಗೂ ಜೀವಂತ ನಿದರ್ಶನದಂತಿವೆ ಎಂದರು.
ಸದಸ್ಯೆ ವಿದುಷಿ ಪ್ರೀತಿಕಲಾ ಮತ್ತು ಸದಸ್ಯೆ ವಿದುಷಿ ಮೇಘನಾ ಪಾಣಾಜೆ ಇವರು ರಾಮಾಯಣದ ಉತ್ತರ ಕಾಂಡದಿಂದ ಆಯ್ದ ಶ್ಲೋಕಗಳ ವಿವರಣಾತ್ಮಕ ಗಾಯನದ ಮೂಲಕ ವಾಲ್ಮೀಕಿ ಗೀತ ನಮನಗೈದರು. ಸದಸ್ಯೆ ಕೃಷ್ಣವೇಣಿ ಮುಳಿಯ ಇವರು ರಾಮಾಯಣದ ರಸಪ್ರಶ್ನೆಗಳಿಂದ ಸಭಿಕರನ್ನು ರಂಜಿಸಿದರು. ದ.ಕ. ಜಿಲ್ಲೆಯ ಪುತ್ತೂರು ಘಟಕದ ಸಂಘಟನಾ ಕಾರ್ಯದರ್ಶಿ ವಿದ್ವಾನ್ ದೀಪಕ್ ಕುಮಾರ್ ಇವರು ರಾಮಾಯಣ ಉತ್ತರ ಕಾಂಡದ ಆಯ್ದ ಕೆಲವು ಶ್ಲೋಕಗಳಿಗೆ ಅತ್ಯಂತ ಭಾವಪೂರ್ಣ ನೃತ್ಯಾಭಿನಯವನ್ನು ಪ್ರದರ್ಶಿಸಿದರು. ಮಹಾಲಿಂಗೇಶ್ವರ ಭಜನ ಸೇವಾ ಟ್ರಸ್ಟ್ ಇದರ ಸಂಸ್ಕಾರ ಭಾರತೀ ಸದಸ್ಯರ ವತಿಯಿಂದ ಭಜನ ನಮನ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತೀ ದ.ಕ.ಜಿಲ್ಲೆಯ ಕಾರ್ಯದರ್ಶಿ ನಾಗರಾಜ ಶೆಟ್ಟಿ ದಂಪತಿ, ಸನಾತನ ನಾಟ್ಯಾಲಯದ ನಿರ್ದೇಶಕ ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್, ಸದಸ್ಯರಾದ ವಿದ್ವಾನ್ ಗೋಪಾಲಕೃಷ್ಣ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಜಿಲ್ಲಾ ಉಪಾಧ್ಯಕ್ಷೆ ರೂಪಲೇಖಾ ಕಾರ್ಯಕ್ರಮ ನಿರೂಪಿಸಿದರು.