ಪರಿಶೀಲಿಸಿ ಕ್ರಮ ಕೈಗೊಳ್ಳಲು ಮತ್ತು ಹೆಚ್ಚಿನ ಅನುದಾನಕ್ಕೆ ಆಗ್ರಹಿಸಿ ಗ್ರಾಮಸ್ಥರಿಂದ ಶಾಸಕರಿಗೆ ಮನವಿ
ಪುತ್ತೂರು: ನಿಡ್ಪಳ್ಳಿ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್ ಭವನಕ್ಕೆ ಹೆಚ್ಚಿನ ಅನುದಾನ ನೀಡಬೇಕು ಮತ್ತು ಕಳಪೆ ಕಾಮಗಾರಿ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಿಡ್ಪಳ್ಳಿ ಗ್ರಾಮಸ್ಥರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನ ಬಹಳ ಸಣ್ಣದಾಗಿದ್ದು ಭವನದಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲದ ಕಾರಣ ಸಭೆ ಸಮಾರಂಭಗಳಿಗೆ ಸ್ಥಳಾವಕಾಶದ ಕೊರತೆ ಉಂಟಾಗಲಿದೆ. ಆದುದರಿಂದ ಭವನಕ್ಕೆ ಹೆಚ್ಚಿನ ಅನುದಾನವನ್ನು ಸಂಬಂಧಪಟ್ಟ ಇಲಾಖೆಯಿಂದ ಒದಗಿಸಿಕೊಡುವಂತೆ ಮತ್ತು ಅಂಬೇಡ್ಕರ್ ಭವನದ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದ್ದು ಗೋಡೆಗಳಲ್ಲಿ, ಪಿಲ್ಲರ್‌ಗಳಲ್ಲಿ ಬಿರುಕು ಉಂಟಾಗಿದೆ. ಹಾಗಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಮನವಿ ಮಾಡಲಾಗಿದೆ.
ಸಾಮಾಜಿಕ ಹೋರಾಟಗಾರ ಕೃಷ್ಣ ನಿಡ್ಪಳ್ಳಿ, ಬಾಲಚಂದ್ರ ಮೊಟ್ಟಿಕಲ್ಲು, ಸುಂದರ ಗೋಳ್ತಡಿ,ಹರೀಶ್ ಡೊಂಬಟೆಬರಿ, ಸತೀಶ್ ರೈ ಹೊಸಮನೆ, ಶಶಿಧರ ಬ್ರಹ್ಮರಗುಂಡ ಮನವಿ ನೀಡುವ ನಿಯೋಗದಲ್ಲಿದ್ದರು.