ಉಪ್ಪಿನಂಗಡಿ: ಇಲ್ಲಿನ ಪುತ್ತಿಲ ಪರಿವಾರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ನ.26ರಂದು ಉಪ್ಪಿನಂಗಡಿಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಬೃಹತ್ ಹಿಂದೂ ಸಂಗಮ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ನ.9ರಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಸನ್ನಿಧಿಯಲ್ಲಿ ನಡೆದ ಪುತ್ತಿಲ ಪರಿವಾರದ ಸಭೆಯಲ್ಲಿ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ನಡೆಯುತ್ತಿರುವ ಹಿಂದೂ ಸಮಾಜದ ಮೇಲೆ ಸರಕಾರ ಪ್ರಾಯೋಜಿತ ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿದ್ದು, ಈಗಲೂ ಹಿಂದೂ ಸಮಾಜ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಈ ವಿದ್ಯಮಾನಗಳನ್ನು ನೋಡುವಾಗ ಇನ್ನೂ ಕೂಡಾ ಬಲಿದಾನ, ಹೋರಾಟದ ಮೂಲಕವೇ ಹಿಂದೂ ಸಮಾಜವನ್ನು ಉಳಿಸಬೇಕೋ ಎಂದು ಯೋಚನೆ ಮಾಡುವಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಆದ್ದರಿಂದ ನಮ್ಮ ಹಿಂದೂ ಸಮಾಜ ಸದೃಢವಾಗಿದೆ, ಸಂಘಟಿತವಾಗಿದೆ ಎನ್ನೋ ಸಂದೇಶವನ್ನು ವಿರೋಧಿಗಳಿಗೆ ಹಾಗೂ ಸರಕಾರಕ್ಕೆ ಕೊಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಿಂದೂ ಸಮಾಜದ ಮೇಲೆ ಅತಿಕ್ರಮಣಗಳಾದರೆ ಖಂಡಿತಾ ಸಹಿಸಲು ಸಾಧ್ಯವಿಲ್ಲ. ಸರಕಾರದಿಂದ ಮತಾಂಧರ ತುಷ್ಟೀಕರಣ ನಡೆದರೆ ದೊಡ್ಡ ಹೋರಾಟ ಮುಂದಿನ ದಿನಗಳಲ್ಲಿ ಮಾಡಬೇಕಾಗುತ್ತದೆ ಎಂದರಲ್ಲದೆ, ನ.26ರಂದು ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಕ್ಷೇತ್ರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸುಮಾರು ಐದು ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಈಗಾಗಲೇ ಪುತ್ತಿಲ ಪರಿವಾರದ ಗ್ರಾಮ ಮತ್ತು ಬೂತ್ ಸಮಿತಿಗಳು ಜವಾಬ್ದಾರಿ ತೆಗೆದುಕೊಂಡಿವೆ ಎಂದರು.
ಪೂಜಾ ಸಮಿತಿಯ ಅಧ್ಯಕ್ಷ ಮಹೇಂದ್ರ ವರ್ಮ ಪಡ್ಪು ಮಾತನಾಡಿ, ಕಾರ್ಯಕ್ರಮ ರೂಪುರೇಷೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರದ ತಾಲೂಕು ಉಪಾಧ್ಯಕ್ಷ ಚಿದಾನಂದ ಪಂಚೇರು, ಪೂಜಾ ಸಮಿತಿಯ ಗೌರವಾಧ್ಯಕ್ಷ ಡಿ. ಚಂದಪ್ಪ ಮೂಲ್ಯ, ಪ್ರಧಾನ ಕಾರ್ಯದರ್ಶಿ ಕಿಶೋರ್ ಜೋಗಿ, ಉಪಾಧ್ಯಕ್ಷರಾದ ರಾಜಗೋಪಾಲ ಹೆಗ್ಡೆ, ರಮೇಶ್ ಬಂಡಾರಿ, ರಾಜೇಶ್ ಶಾಂತಿನಗರ, ಕಾರ್ಯದರ್ಶಿ ರಾಜೇಶ್ ಕೊಡಂಗೆ, ಗೌರವ ಸಲಹೆಗಾರರಾದ ಪ್ರಶಾಂತ್ ನೆಕ್ಕಿಲಾಡಿ, ಸಂದೀಪ್ ಕುಪ್ಪೆಟ್ಟಿ, ಕಾರ್ಯಕಾರಿಣಿ ಸದಸ್ಯರಾದ ಲಕ್ಷ್ಮಣ ನೆಡ್ಚಿಲ್, ಪ್ರಮುಖರಾದ ಶ್ರೀರಾಮ ಭಟ್ ಪಾದಾಳ, ಕೇಶವ ಕುಲಾಲ್, ವಿಜಯಕುಮಾರ್, ವಿಜೇತ್ ನೇಜಿಕಾರು, ರವಿ ಶೆಟ್ಟಿ ಮುರದಮೇಲು ಮತ್ತಿತರರು ಉಪಸ್ಥಿತರಿದ್ದರು.