ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ-ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ನಳಿನ್ ಕುಮಾರ್

0

ಮಂಗಳೂರು: ಕರ್ನಾಟಕ ರಾಜ್ಯ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿ.ವೈ.ವಿಜಯೇಂದ್ರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ನಿರ್ಗಮಿತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ನಳಿನ್ ಕುಮಾರ್ ಕಟೀಲು ಅವರು, ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಆಡಳಿತ ವೈಫಲ್ಯಗಳು ಕಂಡುಬರುತ್ತಿವೆ. ಕಳೆದ ಆರು ತಿಂಗಳ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದೆಲ್ಲದರ ವಿರುದ್ಧ ಹೋರಾಟ ಕೈಗೆತ್ತಿಕೊಂಡು ಪಾರ್ಟಿಯನ್ನು ತಳಮಟ್ಟದಿಂದ ಮತ್ತೆ ಸಂಘಟನೆ ಮಾಡುವ ಶಕ್ತಿ ವಿಜಯೇಂದ್ರರಿಗೆ ಇದೆ. ಜೊತೆಯಾಗಿ ಪಾರ್ಟಿಯನ್ನು ಕಟ್ಟಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.

ಕಳೆದ ನಾಲ್ಕು ವರ್ಷ ಅವಧಿಯಲ್ಲಿ ರಾಜ್ಯಧ್ಯಕ್ಷನಾಗಿ ಮಾಡಿರುವ ಕೆಲಸದ ಬಗ್ಗೆ ತೃಪ್ತಿ ಇದೆ. ಕರಾವಳಿಯಿಂದ ಬಂದವನು ಏನು ರಾಜ್ಯವನ್ನು ಸುತ್ತುತ್ತಾನೆ ಅನ್ನೋದಕ್ಕೆ ಅಪವಾದವಾಗಿ 18 ಬಾರಿ ರಾಜ್ಯ ಸುತ್ತಿ ಸಂಘಟನೆ ಮಾಡಿದ್ದೇನೆ. ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ರಾಜ್ಯದ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಪಾರ್ಟಿ ಎಷ್ಟು ಹೇಳ್ತದೋ ಅಷ್ಟು ಮಾಡುವುದು ನಮ್ಮ ಕೆಲಸ. ನಾನು ಇಷ್ಟರವರೆಗೆ ಆಕಾಂಕ್ಷಿಯಾಗಿ ಎಲ್ಲೂ ಬಂದಿಲ್ಲ. ಪಾರ್ಟಿ ಕೊಟ್ಟಿರುವ ಜವಾಬ್ದಾರಿಯನ್ನು ಕಟ್ಟಾಳುವಾಗಿ ನಿರ್ವಹಿಸುತ್ತೇನೆ. ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸೀಟ್ ಗೆಲ್ಲುವುದು ಗುರಿ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

LEAVE A REPLY

Please enter your comment!
Please enter your name here