ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸುವಂತೆ ಎಸ್ಪಿಯವರಲ್ಲಿ ಮಾತನಾಡುವ ಭರವಸೆ
ಪುತ್ತೂರು: ನ.6ರಂದು ಹತ್ಯೆಗೊಳಗಾದ ಕಲ್ಲೇಗ ಟೈಗರ್ಸ್ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರ ಶೇವಿರೆ ಮನೆಗೆ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ನೀಡಿ ಸಂತಾಪ ಸೂಚಿಸಿದರು.
ಅಮಾಯಕ ಹುಡುಗನ ಹತ್ಯೆ ಮಾಡುವುದು ಸಮಾಜದಲ್ಲಿ ಆತಂಕ ಸೃಷ್ಟಿಸಿದೆ. ಘಟನೆಗೆ ಕಾರಣವಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕುರಿತು ಎಸ್ಪಿಯವರಲ್ಲಿ ಮಾತನಾಡುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಅಕ್ಷಯ್ ಕಲ್ಲೇಗ ಅವರ ತಂದೆ ಚಂದ್ರಶೇಖರ್ ಗೌಡ ಅವರಿಗೆ ಭರವಸೆ ನೀಡಿದರು. ಈ ಸಂದರ್ಭ ಚಂದ್ರಶೇಖರ್ ಗೌಡ ಅವರು ತನ್ನ ಮಗ ಸಮಾಜಕ್ಕೆ ಉಪಕಾರ ಮಾಡಿದ ವಿಚಾರವನ್ನು ತಿಳಿಸಿ ಮನೆಯಲ್ಲಿ ಮಗನಿಗೆ ಸಿಕ್ಕಿದ ಪ್ರಶಸ್ತಿಯನ್ನು ತೋರಿಸಿದರು.
ಮೆರವಣಿಗೆಗೆ ಅವಕಾಶ ನೀಡಿಲ್ಲ:
ಅನ್ಯ ಕೋಮಿನಿಂದ ಕೊಲೆಗೀಡಾದ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರ ಪ್ರಾರ್ಥಿವ ಶರೀರವನ್ನು ಸಹ ಮೆರವಣಿಗೆ ಮೂಲಕ ಕರೆದೊಯ್ಯಲಾಗಿತ್ತು. ಆದರೆ ಯಾವುದೇ ಕೋಮು ಇಲ್ಲದ ಘಟನೆಯಲ್ಲಿ ಅಕ್ಷಯ್ ಅವರ ಪ್ರಾರ್ಥಿವ ಶರೀರವನ್ನು ಕಬಕದಿಂದ ಮೆರವಣಿಗೆ ಮೂಲಕ ತರಲು ಪೊಲೀಸರು ಬಿಡಲಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಧರ್ ಪಟ್ಲ ಅವರು ಕೋಟ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೆ ತಂದರು. ಈ ಕುರಿತು ನಾನು ಕುದ್ದಾಗಿ ಎಸ್ಪಿಯವರಲ್ಲಿ ಮಾತನಾಡುತ್ತೇನೆಂದು ಶ್ರೀನಿವಾಸ ಪೂಜಾರಿ ತಿಳಿಸಿದರು. ಈ ಸಂದರ್ಭ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷ ಆರ್.ಸಿ.ನಾರಾಯಣ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಬಿಜೆಪಿ ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಯುವ ಮೋರ್ಚಾದ ಸುನಿಲ್ ದಡ್ಡು, ಕಬಕ ಗ್ರಾ.ಪಂ ಸದಸ್ಯ ವಿನಯ ಕಲ್ಲೇಗ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಆರೋಪಿಗಳಿಗೆ ಗಲ್ಲುಶಿಕ್ಷೆ ಆಗಲೇ ಬೇಕು
ಅಕ್ಷಯ್ ಕಲ್ಲೇಗ ಅವರ ತಂದೆ ಚಂದ್ರಶೇಖರ್ ಗೌಡ ಅವರು ತನ್ನ ಮಗನನ್ನು ಕೊಂದ ಆರೋಪಿಗಳಿಗೆ ಗಲ್ಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ಆಗಲೇ ಬೇಕು. ಮುಂದೆ ಇನ್ನು ಇಂತಹ ಘಟನೆ ನಡೆಯಬಾರದು. ನಮ್ಮಷ್ಟು ಕಷ್ಟ ಯಾರಿಗೂ ಬರಬಾರದು. ಎಷ್ಟೋ ಜನ ಬಂದು ಹೋದವರು ಆದರೆ ನನ್ನ ಮಗನನ್ನು ಕೊಡಲು ಆಗುತ್ತದ ನಿಮಗೆ ಎಂದು ಕೋಟ ಶ್ರೀನಿವಾಸ್ ಪೂಜಾರಿವರನ್ನು ಪ್ರಶ್ನಿಸಿದ ಅವರು ನನ್ನ 26 ವರ್ಷದ ಮಗ 40 ವರ್ಷದಲ್ಲಿ ಮಾಡುವ ಸಾಧನೆಯನ್ನು ಒಮ್ಮೆಲೆ ಮಾಡಿದ. ಆದರೂ ಅವನು ಮೇಲೆ ಹೋಗುತ್ತಿರುವುದು ನೋಡಲಾಗವರು ಅವನನ್ನು ಕೊಲೆ ಮಾಡಿದ್ದಾರೆ. 58 ಬಾರಿ ಇರಿದು ಕೊಲೆ ಮಾಡಿದ್ದಾರೆ ಎಂದು ವೈದ್ಯರೇ ತಿಳಿಸಿದ್ದಾರೆ. ಯಾರಿಗೂ ಯಾರನ್ನೂ ಕೊಲೆ ಮಾಡುವ ಹಕ್ಕಿಲ್ಲ. ಮೊನ್ನೆ ದೆಹಲಿಗೆ ಹೋಗಿ ರಾತ್ರಿ ಬಂದಿದ್ದ. ನಾನೆ ರಾತ್ರಿ ಅವನನ್ನು ಕಲ್ಲೇಗದಲ್ಲಿ ನವರಾತ್ರಿಗೆ ಅಳವಡಿಸಿದ ಅಡಿಕೆ ಕಂಬವನ್ನು ತೆರವು ಮಾಡಲು ಕಳುಹಿಸಿದ್ದೆ. ಅವರು ಊರಿಗೆ ಉಪಕಾರಿ. ಆದರೆ ಅವನನ್ನೇ ಚುಚ್ಚಿ ಚುಚ್ಚಿ ಕೊಂದಿದ್ದಾರೆ ಎಂದು ಅವಳತ್ತುಕೊಂಡರು.
ಪತ್ರಿಕಾ ಮಾದ್ಯಮದವರು ಒಂದಕ್ಕೆರಡು ಸೇರಿಸಿ ಹಾಕಿದ್ದಾರೆ:
ಮೂರು ವರ್ಷ ಹೊಟೇಲ್ ಮ್ಯಾನೇಜ್ಮೆಂಟ್ ಮಾಡಿದ್ದಾನೆ. ಹಾಗೆ ಮತ್ತೆ ಸಣ್ಣಪುಟ್ಟ ವಿಚಾರದಲ್ಲಿ ಹೇಳಿದನ್ನು ಕೇಳುತ್ತಿಲ್ಲ ಹೊರತು ಬೇರೆನು ಅವನು ಮಾಡುತ್ತಿರಲಿಲ್ಲ. ಡಿಸೆಂಟ್ ಆಗಿದ್ದ. ಮೊನ್ನೆಯೂ ಕೂಡಾ ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿದ್ದ. ಇದೇ ವಿಚಾರದಲ್ಲಿ ಮತ್ತೆ ಅಪಘಾತ ಎಸಗಿದ ವ್ಯಕ್ತಿಯೊಂದಿಗೆ ಮಾತನಾಡಿದ್ದ. ಆದರೆ ಪತ್ರಿಕಾ ಮಾದ್ಯಮದವರು ಒಂದಕ್ಕೆ ಎರಡು ಸೇರಿಸಿ ಹಾಕಿದ್ದಾರೆ. ಮೊನ್ನೆಯ ತನಕ ಅವರು ಎಷ್ಟುಒಳ್ಳೆಯ ಕೆಲಸ ಮಾಡಿದ್ದಾನೆ. ಅದನ್ನು ನೀವು ಹಾಕಿದ್ದೀರ ಎಂದು ಅಲ್ಲಿದ್ದ ಪತ್ರಿಕಾ ವರದಿಗಾರರನ್ನು ಪ್ರಶ್ನಿಸಿದ ಅವರು ನನ್ನ ಮಗ ರೌಡಿಶೀಟರ್ ಎಂದು ಬರೆದಿದ್ದೀರಿ ಹೊರತು, ಅವನು ಮಾಡಿದ ಒಳ್ಳೆಯ ಕೆಲಸ, ಎಷ್ಟು ರಕ್ತದಾನ ಮಾಡಿ ಎಷ್ಟು ಜನರಿಗೆ ಉಪಕಾರ ಮಾಡಿದ್ದಾನೆ. ಕಲ್ಲೇಗ ದೈವಸ್ಥಾನದಲ್ಲಿ ಏನೆಲ್ಲ ಕೆಲಸ ಮಾಡಿದ, ನಗರದಲ್ಲಿ ಕುಡಿಯುವ ನೀರಿನ ಘಟಕ ಒದಗಿಸಿದ, ಕಳೆದ ವರ್ಷ ಕಲ್ಲುರ್ಟಿ ದೈವಕ್ಕೆ ಕಾಣಿಕೆ ನೀಡಿದ ವಿಚಾರವನ್ನು ಯಾಕೆ ಹಾಕಿಲ್ಲ? ಎಂದು ಪತ್ರಿಕೆಯವರ ಮೇಲೆ ಹರಿಹಾಯ್ದರು.