ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾವಳಿ ಹಬ್ಬ, ಬಲಿ ಉತ್ಸವ ಆರಂಭ

0

ಭಕ್ತರಿಗೆ ಅವಲಕ್ಕಿ, ತೆಂಗಿನಕಾಯಿ ಪ್ರಸಾದ ವಿತರಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆಯಂದು ಒಳಗಾದ ದೇವರ ಬಲಿ ಉತ್ಸವ ಪೂರ್ವ ಸಂಪ್ರದಾಯದಂತೆ ದೀಪಾವಳಿಯ ಅಮವಾಸ್ಯೆ ದಿನ ಸಂಜೆ ಮತ್ತೆ ಬಲಿ ಉತ್ಸವ ಆರಂಭಗೊಳ್ಳುತ್ತದೆ.ಅದೇ ರೀತಿ ಈ ಬಾರಿ ನ.12ರಂದು ರಾತ್ರಿ ಶ್ರೀ ದೇವರ ಬಲಿ ಹೊರಟು ಧ್ವಜಸ್ಥಂಭದ ಬಳಿಯ ಬಲೀಂದ್ರ ಕಂಬದ ಬಳಿ ಹಣತೆ ಬೆಳಗಿಸಿ ಅವಲಕ್ಕಿ ಅರ್ಪಣೆಯ ಮೂಲಕ ಉತ್ಸವ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ಪ್ರಧಾನ ಅರ್ಚಕ ವೇ.ಮೂ.ವಿ.ಎಸ್.ಭಟ್ ಮತ್ತು ವೇ.ಮೂ.ವಸಂತ ಕೆದಿಲಾಯ ಅವರ ನೇತೃತ್ವದಲ್ಲಿ ಉತ್ಸವಾದಿಗಳು ನಡೆಯಿತು.


ಸಂಜೆ ದೇವಳದ ಪ್ರಾಕಾರ ಗುಡಿಗಳಲ್ಲಿ ಹೂವಿನ ಪೂಜೆ ನಡೆಯಿತು.ಬಳಿಕ ದೇವಳದ ನಡೆಯಲ್ಲಿ ಅವಲಕ್ಕಿಯನ್ನು ಸೇರಿನಲ್ಲಿ ಅಳತೆ ಮಾಡುವ ಸಂಪ್ರದಾಯ ನಡೆಯಿತು. ಇದಾದ ಬಳಿಕ ಮಹಾಪೂಜೆಯಾಗಿ ಬಳಿಕ ಶ್ರೀ ದೇವರ ಉತ್ಸವದ ಸಂದರ್ಭದಲ್ಲಿ ಬ್ರಹ್ಮವಾಹಕರು ದೇವರ ಉತ್ಸವ ಮೂರ್ತಿಯನ್ನು ಶಿರದ ಮೇಲಿಡುವ ಮೊದಲು ದೇವಳದ ಧ್ವಜಸ್ಥಂಭದ ಬಳಿಯ ಕೊಡಿಮರದ ಬಳಿ ಹಾಕಿರುವ ಬಲೀಂದ್ರ ಕಂಬದಲ್ಲಿ ಹಣತೆ ಬೆಳಗಿಸಲಾಯಿತು. ಸಾಂಪ್ರದಾಯಿಕ ಮತ್ತು ಪಾರಂಪರಿಕ ಸೇವೆಯಾಗಿ ‘ಬಲೀಂದ್ರ ಕೂ’ ಎಂದು ಮೂರು ಬಾರಿ ಕರೆದ ಬಳಿಕ ಶ್ರೀ ದೇವರ ಮಾಮೂಲು ಉತ್ಸವ ಬಲಿ ನಡೆಯಿತು. ಶ್ರೀ ದೇವರ ವರ್ಷದ ಪ್ರಥಮ ಉತ್ಸವ ನಡೆದ ಬಳಿಕ ಭಕ್ತಾದಿಗಳಿಗೆ ವಸಂತ ಕಟ್ಟೆಯಲ್ಲಿ ಅವಲಕ್ಕಿ ಮತ್ತು ತೆಂಗಿನಕಾಯಿಯ ಪ್ರಸಾದವನ್ನು ನೀಡಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ಡಾ.ಸುಧಾ ಎಸ್ ರಾವ್, ಬಿ.ಐತ್ತಪ್ಪ ನಾಯ್ಕ್, ಬಿ.ಕೆ.ವೀಣಾ, ರಾಮ್‌ದಾಸ್ ಗೌಡ, ರಾಮಚಂದ್ರ ಕಾಮತ್, ರವೀಂದ್ರನಾಥ ರೈ ಬಳ್ಳಮಜಲು, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸರಾವ್, ವಾಸ್ತು ಇಂಜಿನೀಯರ್ ಪಿ.ಜಿ. ಜಗನ್ನಿವಾಸರಾವ್ , ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಸಹಿತ ಸಾವಿರಾರು ಮಂದಿ ಭಕ್ತರು ಉಪಸ್ಥಿತರಿದ್ದರು.

ಇಂದು ಸಾಮೂಹಿಕ ಗೋಪೂಜೆ

ದೀಪಾವಳಿಯ ವೇಳೆ ಗೋಪೂಜೆ ಸಲ್ಲಿಸಿದರೆ ಲಕ್ಷ್ಮಿಯ ಅನುಗ್ರಹವಾಗುತ್ತದೆ ಎಂದು ಶಾಸಗಳು ಹೇಳುತ್ತವೆ.ದೇಗುಲದಲ್ಲಿ ಸಾಮೂಹಿಕ ಗೋಪೂಜೆಗೂ ವ್ಯವಸ್ಥೆ ಕಲ್ಪಿಸಲಾಗಿದೆ.ಗೋಗ್ರಾಸ, ಗೋದಾನಕ್ಕೂ ಅವಕಾಶವಿದೆ. ನ.13ರಂದು ಸಾಮೂಹಿಕ ಗೋಪೂಜೆ ನಡೆಯಲಿದೆ.ಗೋ ಪೂಜೆ ಸೇವೆ ಮಾಡಿಸುವವರು ಸಂಜೆ ಗಂಟೆ 4.30ಕ್ಕೆ ಗೋ ಶಾಲೆಯಲ್ಲಿ ಸಂಕಲ್ಪ ಮಾಡಿಸಿ ಪೂಜೆಯಲ್ಲಿ ಭಾಗವಹಿಸಬೇಕು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ತಿಳಿಸಿದ್ದಾರೆ.

ಪರವೂರಿನವರಿಗೆ ಪ್ರಥಮ ಪ್ರಸಾದ
ಈ ಹಬ್ಬದ ದಿನ ಮಾತ್ರ ಅವಲಕ್ಕಿ ವಿತರಿಸುವ ಮುನ್ನ ಪರವೂರಿನವರು ಇದ್ದೀರಾ? ಬನ್ನಿ ಎಂದು ಕರೆದು ಪರವೂರಿನವರಿಗೆ ಪ್ರಥಮ ಪ್ರಸಾದ ನೀಡುವ ಒಂದು ಸಂಪ್ರದಾಯವಿದ್ದು ಈ ಬಾರಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್‌ನಂದನ್ ದಂಪತಿ, ಮನೆಯವರಿಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಪ್ರಸಾದ ನೀಡಿದರು.

LEAVE A REPLY

Please enter your comment!
Please enter your name here