ನೆಲ್ಯಾಡಿ: ಸಂತಜಾರ್ಜ್ ವಿದ್ಯಾಸಂಸ್ಥೆಗಳು ನೆಲ್ಯಾಡಿ ಇಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ಜೀವನ ಕೌಶಲ್ಯಗಳ ಸಂಗಮ ವಿಜ್ಞಾನ ವಸ್ತುಪ್ರದರ್ಶನ (ಟೆಕ್‌ಕ್ರಾಫ್ಟ್) ಮತ್ತು ಮೆಟ್ರಿಕ್ ಮೇಳ(ರೆಕ್ಸ್‌ಪೊ) ನ.11ರಂದು ನಡೆಯಿತು.
ನೆಲ್ಯಾಡಿ ಶ್ರೀ ಗಣೇಶ್ ಸ್ಟೋರ್ ಮಾಲಕ ದಿನೇಶ್ ಎಂ.ಟಿ. ಅವರು ಮೆಟ್ರಿಕ್ ಮೇಳ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ವ್ಯಾಪರದ ಬಗ್ಗೆ ಅನುಭವ ಮೂಡಿಸಲು ಮೆಟ್ರಿಕ್ ಮೇಳ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇಲ್ಲಿ ನಡೆಯುವ ಮೆಟ್ರಿಕ್ ಮೇಳದಲ್ಲಿ ಅತೀ ಹೆಚ್ಚು ವ್ಯಾಪಾರ ಮಾಡುವ ವಿದ್ಯಾರ್ಥಿಗೆ 1 ಸಾವಿರ ರೂ.ನಗದು ಬಹುಮಾನ ನೀಡುವುದಾಗಿ ಹೇಳಿದರು.
ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಆಕ್ಸೆಂಚರ್ ಇಂಡಿಯಾ ಪ್ರೈವೆಟ್ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಖಲಂದರ್ ಡಿ.ಆರ್.,ಅವರು ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸಲು ವಿಜ್ಞಾನ ವಸ್ತುಪ್ರದರ್ಶನದಿಂದ ಹೆಚ್ಚಿನ ಅನುಕೂಲವಾಗಲಿದೆ. ಇದೊಂದು ಬಹಳ ಉಪಯುಕ್ತವಾದ ಕಾರ್ಯಕ್ರಮವಾಗಿದೆ ಎಂದರು.
ಕಲಾ-ಪ್ರಾಚ್ಯವಸ್ತು ಪ್ರದರ್ಶನ ಉದ್ಘಾಟಿಸಿದ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಕಾರ್ಯದರ್ಶಿಯಾಗಿರುವ ಅಬ್ರಹಾಂ ವರ್ಗೀಸ್‌ರವರು ಮಾತನಾಡಿ, ಮಕ್ಕಳಲ್ಲಿ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಪ್ರಾಚ್ಯ ವಸ್ತುಗಳ ಸಂಗ್ರಹಾಲಯವು ಅತ್ಯಂತ ಉಪಯುಕ್ತವಾಗಿದೆ. ಇದರಿಂದ ಮಕ್ಕಳಿಗೆ ಇನ್ನಷ್ಟೂ ಉತ್ತೇಜನ ಸಿಗಲಿ ಎಂದರು. ಸಂಸ್ಥೆಯ ಸಂಚಾಲಕ ರೆ.ಫಾ.ನೋಮಿಸ್ ಕುರಿಯಾಕೋಸ್ ಶುಭಾಶಂಸನೆಗೈದರು. ನಿವೃತ್ತ ಮುಖ್ಯಗುರು ವೆಂಕಟ್ರಮಣ ಆರ್., ಪ್ರೌಢಶಾಲಾ ಮುಖ್ಯಶಿಕ್ಷಕ ಎಂ.ಐ.ತೋಮಸ್, ರಕ್ಷಣ್ ಉಪಸ್ಥಿತರಿದ್ದರು.
ಪ.ಪೂ.ಕಾಲೇಜಿನ ಪ್ರಾಂಶುಪಾಲ ಏಲಿಯಾಸ್ ಎಂ.ಕೆ.ಸ್ವಾಗತಿಸಿ, ಆಂಗ್ಲಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ಹರಿಪ್ರಸಾದ್ ಕೆ.ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರು, ಶಿಕ್ಷಕರು ಸಹಕರಿಸಿದರು.
ಗಮನಸೆಳೆದ ಮೆಟ್ರಿಕ್‌ಮೇಳ,ವಸ್ತು ಪ್ರದರ್ಶನ:
ಬೆಳಗ್ಗಿನಿಂದ ಸಂಜೆ ತನಕ ನಡೆದ ಮೆಟ್ರಿಕ್ ಮೇಳದಲ್ಲಿ ಮಕ್ಕಳೇ ತರಕಾರಿ, ಜ್ಯೂಸ್, ಹಣ್ಣು ಹಂಪಲು, ತಿಂಡಿ, ತಿನಸುಗಳನ್ನು ಮಾರಾಟ ಮಾಡಿ ಲಾಭಗಳಿಸಿದರು. ವಿಜ್ಞಾನ ವಸ್ತುಪ್ರದರ್ಶನದಲ್ಲೂ ಶಾಲೆಯ ಮಕ್ಕಳು ವಿವಿಧ ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು. ಹಳೆಯ ವಸ್ತುಗಳ ಸಂಗ್ರಹಾಲಯ ಪ್ರಾಚ್ಯ ವಸ್ತುಪ್ರದರ್ಶನವೂ ಗಮನ ಸೆಳೆಯಿತು. ಒಟ್ಟಿನಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು.