ಅಪ್ರಾಪ್ತೆಯನ್ನು ರಕ್ಷಿಸಿದ ಯುವಕರ ಗಡಿಪಾರಿಗೆ ಆದೇಶ-ವಿಶ್ವಹಿಂದೂ ಪರಿಷತ್ ಬಜರಂಗದಳ ಆಕ್ರೋಶ, ತೀವ್ರ ಖಂಡನೆ

0

ಪುತ್ತೂರು: ಅಪ್ರಾಪ್ತ ಬಾಲಕಿಯನ್ನು ಅನ್ಯಮತೀಯನಿಂದ ರಕ್ಷಣೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಯುವಕರನ್ನು ಪೊಲೀಸ್ ಇಲಾಖೆ ಗಡಿಪಾರಿಗೆ ಶಿಪಾರಸ್ಸು ಮಾಡಿರುವುದನ್ನು ವಿಶ್ವಹಿಂದೂ ಪರಿಷತ್, ಬಜರಂಗದಳ ಕಟುವಾಗಿ ಖಂಡಿಸುತ್ತದೆ. ಈ ನಾಲ್ವರ ವಿರುದ್ದ ನಗರ ಠಾಣೆಯಲ್ಲಿ ಯಾವುದೇ ಪ್ರಕರಣಗಳಿಲ್ಲ. ಬಾಲಕಿಯನ್ನು ರಕ್ಷಿಸಿ ಪೋಷಕರ ಗಮನಕ್ಕೆ ತಂದಿರುವ ಒಂದೇ ಕಾರಣಕ್ಕೆ ಗಡಿಪಾರಿಗೆ ನೋಟೀಸ್ ನೀಡಲಾಗಿದೆ. ಅವರು ರೌಡಿಸಂ, ಕೋಮುವಾದ ಹಾಗೂ ಅಶಾಂತಿ ಮಾಡಿರುವುದೇ ಆಗಿದ್ದಲ್ಲಿ ಅದನ್ನು ಸ್ಪಷ್ಟಪಡಿಸಲಿ. ಸುಳ್ಳು ಕೇಸು ಹಾಕಿ ಸರಕಾರವೇ ಅಶಾಂತಿ ಸೃಷ್ಠಿಸುತ್ತಿದ್ದು ಇದಕ್ಕೆ ಸರಕಾರವೇ ಹೊಣೆ ಎಂದು ಭಜರಂಗಳದ ದಕ್ಷಿಣ ಪ್ರಾಂತ ಸಹ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ.16ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ತಿಂಗಳ ಹಿಂದೆ ಚುನಾವಣಾ ಸಮಯದಲ್ಲಿ ಅಪ್ರಾಪ್ತ ಯುವತಿಯನ್ನು ಯುವಕನೋರ್ವ ಪುಸಲಾಯಿಸಿ ಸಿನಿಮಾಗೆ ಕರೆದುಕೊಂಡು ಹೋಗಿ ನಂತರ ಹೊಟೇಲ್‌ನಲ್ಲಿ ಜ್ಯೂಸ್ ಕುಡಿಸುವ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಗಮನಿಸಿ ಅವರನ್ನು ಠಾಣೆಗೆ ಕರೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ. ಆ ಘಟನೆ ಸಂಬಂಧಿಸಿದಂತೆ ಕಬಕದ ಮುಸ್ಲಿಂ ಯುವಕನ ಮೇಲೆ ಪೋಕ್ಸೋ ಕೇಸು ದಾಖಲಾಗಿದೆ. ಇದೇ ಘಟನೆಗೆ ಸಂಬಂಧಿಸಿ ಆತನನ್ನು ಅಕ್ರಮವಾಗಿ ಕಿಡ್ನಾಪ್ ಮಾಡಲಾಗಿದೆ ಎಂದು ನಾಲ್ವರ ಮೇಲೆ ಕೇಸು ದಾಖಲಾಗಿದೆ. ಆ ಘಟನೆಯಲ್ಲಿದ್ದ ರಿಕ್ಷಾ ಚಾಲಕ ದಿನೇಶ್ ತಿಂಗಳಾಡಿ, ಎಲೆಕ್ಟ್ರಿಷಿಯನ್ ಪ್ರಜ್ವಲ್ ಸಂಪ್ಯ, ಕೂಲಿ ಕಾರ್ಮಿಕರಾದ ನಿಶಾಂತ್ ತಿಂಗಳಾಡಿ ಮತ್ತು ಪ್ರದೀಪ್ ಅಜಲಡ್ಕ ಎಂಬ ನಾಲ್ಕು ಮಂದಿಯನ್ನು ಪೊಲೀಸ್ ಇಲಾಖೆ ಬಾಗಲಕೋಟೆಗೆ ಗಡಿಪಾರಿಗೆ ಶಿಪಾರಸ್ಸು ಮಾಡಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಹೇಳಿರುವ ಹಸಂತಡ್ಕ ಪೊಲೀಸ್ ಇಲಾಖೆ ನೀಡಿರುವ ನೊಟೀಸ್‌ನಲ್ಲಿ ನಾಲ್ವರು ಕೋಮುವಾದಿ, ರೌಡಿಸಂ, ಅಶಾಂತಿ ಸೃಷ್ಟಿಸುವಲ್ಲಿ ಭಾಗಿಗಳಾಗಿದ್ದಾರೆ ಎಂದು ಉಲ್ಲೇಖಿಸಿ ಸಹಾಯಕ ಆಯುಕ್ತರ ಮೂಲಕ ಗಡಿಪಾರಿಗೆ ನೊಟೀಸ್ ನೀಡಲಾಗಿದೆ. ಪೊಲೀಸ್ ಇಲಾಖೆಯ ಈ ನಡೆ ಹಲವು ಪ್ರಶ್ನೆಗಳು ಹುಟ್ಟು ಹಾಕುತ್ತದೆ. ಒಬ್ಬ ರಿಕ್ಷಾ ಚಾಲಕ, ಕೂಲಿ ಕಾರ್ಮಿಕ, ಎಲೆಕ್ಟ್ರಿಷಿಯನ್ ಕೆಲಸ ಮಾಡುವ ಯುವಕರು ಅಂತಹ ಯಾವುದೇ ಕೆಲಸಗಳಲ್ಲಿ ಇಲ್ಲದೇ ಇದ್ದರೂ ಗಡಿಪಾರಿಗೆ ಆದೇಶಿಸಿರುವುದಲ್ಲದೆ ಗ್ರಾಮಾಂತರ ಪ್ರದೇಶದಲ್ಲಿರುವ ಯುವಕರನ್ನು ನಗರ ಠಾಣೆಯವರು ಗಡಿಪಾರಿಗೆ ಶಿಪಾರಸ್ಸು ಮಾಡಿರುವುದರಿಂದ ಪೊಲೀಸ್ ಇಲಾಖೆಯ ಮೇಲೆ ಸಂಶಯದಿಂದ ನೋಡುವಂತೆ ಮಾಡಿದೆ ಎಂದು ಹೇಳಿದ್ದಾರೆ.

ಸರಕಾರ, ಜನಪ್ರತಿನಿಧಿಗಳ ಒತ್ತಡಕ್ಕೋಸ್ಕರ ಯಾರನ್ನೋ ರೌಡಿಸಂ, ಕೋಮುವಾದಿ ಮಾಡುವಲ್ಲಿ ಪೊಲೀಸ್ ಇಲಾಖೆ ನೇರ ಕಾರಣ. ಇದಕ್ಕೆ ಪ್ರೇರಣೆ ನೀಡಲು ಪ್ರಾರಂಭ ಮಾಡಿದ್ದು ತಕ್ಷಣ ನಿಲ್ಲಿಸಬೇಕು. ಅಂತಹ ಕೃತ್ಯಗಳಲ್ಲಿ ಭಾಗಗಳಾದವರನ್ನು ಗಡಿಪಾರು ಮಾಡುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಈ ರೀತಿ ಕೃತ್ಯಗಳನ್ನು ಕೆಟ್ಟ ಶಬ್ದಗಳನ್ನು ಖಂಡಿಸಿತ್ತೇವೆ. ಸುಳ್ಯದಲ್ಲಿ ಎರಡು ಕೇಸು ದಾಖಲಾಗಿರುವ ಲತೇಶ್ ಗುಂಡ್ಯ ಅವರ ಗಡಿಪಾರಿಗೆ ಆದೇಶಿಸಲಾಗಿದೆ. ಸರಕಾರ ಹಿಂದೂ ವಿರೋಧಿಯಾಗಿ ಯೋಚನೆ ಮಾಡಿದರೆ ಅದಕ್ಕೆ ಖಂಡಿತವಾಗಿ ಇಡೀ ಸಮಾಜ, ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು. ಇದಕ್ಕೆ ಹೋರಾಟಗಳು ಅನಿವಾರ್ಯ. ನಮ್ಮದು ಸುಮ್ಮನೆ ಕುಳಿತುಕೊಳ್ಳುವ ಸಂಘಟನೆಯಲ್ಲ. ನಾವು ನ್ಯಾಯ ಕೇಳಲು ಬಂದಿದ್ದೇವೆ. ಇಲಾಖೆ ಸಾಮಾನ್ಯ ವ್ಯಕ್ತಿಗಳ ಮೇಲೆ ಕೇಸು ಹಾಕಿ ಗಡಿಪಾರು ಮಾಡುವ ಕೆಲಸ ಮಾಡಿದರೆ ನಾವು ಹೋರಾಟ ಮಾಡಲು ಸಿದ್ದ. ಇದರ ಕುರಿತು ಇಲಾಖೆಯ ಮೇಲಾಧಿಕಾರಿಗಳು, ಗೃಹ ಸಚಿವ ಪರಮೇಶ್ವರ್‌ ಅವರು ಯೋಚಿಸಿ ಸ್ಪಷ್ಟ ಸೂಚನೆ ನೀಡಬೇಕು. ಸಂಘಟನೆ ಹಾಗೂ ಸಂಘಟನೆಯ ಕಾರ್ಯಕರ್ತರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದರೆ ಅದನ್ನು ಸ್ಪಷ್ಟಪಡಿಸಿ. ಅದನ್ನೂ ಎದುರಿಸಲು ನಾವು ಸಿದ್ದ. ಅಶಾಂತಿ, ರೌಡಿಸಂ ನಿಲ್ಲಿಸುವುದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ. ಆದರೆ ಈ ರೀತಿ ಸಂಘಟನೆಗೆ ಉತ್ತಮ ಕೆಲಸ ಮಾಡುವವರನ್ನು ಈ ರೀತಿಯಾಗಿ ಮಾಡಬಾರದು. ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಇದರ ಬಗ್ಗೆ ಗಮನಿಸಿ ಮುಂದೆ ಇಂತಹ ತಪ್ಪು ಕೆಲಸ ಮಾಡಬಾರುದು ಎಂದು ಆಗ್ರಹಿಸಿದರು.

ಸಮಾಜದಲ್ಲಿ ಅಶಾಂತಿ ನಿಲ್ಲಿಸುವಲ್ಲಿ ಪೊಲೀಸ್ ಇಲಾಖೆ ಮಾಡುವ ಕೆಲಸಗಳಿಗೆ ನಮ್ಮ ಬೆಂಬಲವಿದೆ. ನಮ್ಮ ಸಂಘಟನೆ, ಸಮಾಜಕ್ಕೆ, ರಾಷ್ಟ್ರಕ್ಕೆ ಪೂರಕವಾದ ಸಂಘಟನೆ. ಅದನ್ನು ಬಿಟ್ಟು ನಮ್ಮ ಸಂಘಟನೆ ಕಾರ್ಯಕರ್ತರು ಬೇರೆ ಕೆಲಸ ಮಾಡಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ಕಾನೂನು ಪಾಲನೆಗಾಗಿರುವುದು. ನಡೆದ ಘಟನೆಗಳಿಗೆ ಸಂಬಂಧಿಸಿ ಕೇಸು ದಾಖಲಿಸಲಿ. ಇದರ ಹೊರತಾಗಿ ಯಾವುದೇ ಘಟನೆಗಳು ನಡೆಯದೇ ಇದ್ದರೂ ಕೇಸು ದಾಖಲಿಸುವುದನ್ನು ನಾವು ಸಹಿಸುವುದಿಲ್ಲ ಎಂದು ಡಿವೈಎಸ್‌ಪಿಯವರ ವಿರುದ್ದ ಮುರಳಿಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

ಗಡಿಪಾರು ಮಾಡಿರುವ ವಿಚಾರ‍ಕ್ಕೆ ಸಂಬಂಧಿಸಿ ನ.22ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಹಾಯಕ ಆಯುಕ್ತರಿಂದ ನೋಟೀಸ್ ಬಂದಿದೆ. ಈ ಘಟನೆಯ ಮೇಲೆ ವಕೀಲರ ಮೂಲಕ ಹೈಕೋಟ್‌ಗೆ ಅರ್ಜಿ ಸಲ್ಲಿಸಲಾಗುವುದು. ಗಡಿಪಾರು ಮಾಡಲು ಆಯಾ ಠಾಣಾ ವ್ಯಾಪ್ತಿಯವರು ಮಾಡಬೇಕು. ಆದರೆ ಈಗಾಗಲೇ ಗಡಿಪಾರಿಗೆ ಶಿಪಾರಸ್ಸು ಮಾಡಲಾದ ನಾಲ್ವರು ನಗರ ಠಾಣಾ ವ್ಯಾಪ್ತಿಯವರಲ್ಲ. ಅವರ ಮೇಲೆ ಯಾವುದೇ ಕೇಸುಗಳಿಲ್ಲ. ಅಪ್ರಾಪ್ತ ಬಾಲಕಿಗೆ ರಕ್ಷಣೆ ನೀಡಿದ ಮಾತ್ರಕ್ಕೆ ಗಡಿಪಾರಿಗೆ ನೊಟೀಸ್ ನೀಡಲಾಗಿದೆ ಎಂದು ಮುರಳಿಕೃಷ್ಣ ಹಸಂತಡ್ಕ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಹಕಾರ್ಯದರ್ಶಿ ಶ್ರೀಧರ ತೆಂಕಿಲ, ಗ್ರಾಮಾಂತರ ಪ್ರಖಂಡ ಸಂಚಾಲಕ ವಿಶಾಖ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here