ಪುತ್ತೂರು: ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೆ ವಿಷದ ಹಾವು ಕಡಿದಿದ್ದು, ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಐಸಿಯು ನಲ್ಲಿದ್ದ ಅವರನ್ನು ನ.17ರಂದು ಬೆಳಿಗ್ಗೆ ವಾರ್ಡ್‌ಗೆ ಶಿಫ್ಟ್ ಮಾಡಿದ್ದಾರೆ.
ನ.16ರಂದು ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಮಠಂದೂರು ಅವರು ಪುತ್ತೂರು ಬಿಜೆಪಿ ಕಚೇರಿಯಿಂದ ಸಂಜೆ ಗಂಟೆ 5ಕ್ಕೆ ಹಿರೇಬಂಡಾಡಿ ಮನೆಗೆ ತೆರಳಿದ್ದರು. ರಾತ್ರಿ ಗಂಟೆ 7ರ ಸುಮಾರಿಗೆ ಅವರು ಮನೆಯ ಅಂಗಳದಲ್ಲಿ ವಾಕಿಂಗ್ ಹೋಗುತ್ತಿದ್ದ ವೇಳೆ ಕಡಂಬಳ ಹಾವು(ಕಟ್ಟಮಲಕರಿ)ಅವರ ಬಲ ಪಾದದ ಸೈಡ್‌ಗೆ ಕಡಿದಿದೆ. ತಕ್ಷಣ ಅವರು ಪುತ್ತೂರಿನ ವೈದ್ಯರನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಕೂಡಲೇ ಆಸ್ಪತ್ರೆಗೆ ಬನ್ನಿ, ವಿಷ ತೆಗೆಯೋಣ ಎಂದು ವೈದ್ಯರು ತಿಳಿಸಿದ್ದು ಅದರಂತೆ ಮಠಂದೂರು ಅವರು ಪುತ್ತೂರು ಮಹಾವೀರ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅವರಿಗೆ ಡಾ.ಸುರೇಶ್ ಪುತ್ತೂರಾಯ ಅವರು ಚಿಕಿತ್ಸೆ ನೀಡಿದ್ದು ಮಠಂದೂರು ಅವರು ಅಪಾಯದಿಂದ ಪಾರಾಗಿ ಚೇತರಿಸಿಕೊಂಡಿದ್ದಾರೆ. ಆರಂಭದಲ್ಲಿ ಅವರು ಐಸಿಯು ವಿನಲ್ಲಿ ದಾಖಲಾಗಿದ್ದು, ಇದೀಗ ಅವರನ್ನು ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ.
8 ಬಾರಿ ರಕ್ತ ಪರೀಕ್ಷೆ :
ಕಡಂಬಳ ಹಾವು(ಕಟ್ಟ ಮಲಕರಿ) ವಿಷದ ಹಾವಾಗಿದ್ದರಿಂದ ವಿಷ ದೇಹಕ್ಕೆ ಹರಡಿಕೊಂಡ ಕುರಿತು ಪತ್ತೆ ಮಾಡಲು 8 ಭಾರಿ ರಕ್ತ ಪರೀಕ್ಷೆ ಮಾಡಲಾಗಿದೆ. ರಕ್ತ ಪರೀಕ್ಷೆ ವರದಿಯಲ್ಲಿ ಯಾವುದೇ ವಿಷದ ಅಂಶ ಬೆಳಕಿಗೆ ಬಂದಿಲ್ಲ. ಈಗ ಆರೋಗ್ಯದಲ್ಲಿದ್ದೇನೆ. ನ.17ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದೇನೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.