ಪುತ್ತೂರಿನ ಆಸ್ಪತ್ರೆಗಳಲ್ಲಿಯೂ ಯಶಸ್ವಿನಿ ವಿಮಾ ಸೌಲಭ್ಯಕ್ಕೆ ಅವಕಾಶ ಕಲ್ಪಿಸಬೇಕು-ಮನವಿಗೆ ನಿರ್ಣಯ
ಪುತ್ತೂರು:ಯಶಸ್ವಿನಿ ಆರೋಗ್ಯ ವಿಮೆಯ ಸೌಲಭ್ಯ ಪಡೆಯಲು ಪ್ರಸ್ತುತ ಮಂಗಳೂರಿನ ಆಸ್ಪತ್ರೆಗಳಲ್ಲಿ ಮಾತ್ರವೇ ಅವಕಾಶವಿದ್ದು ಪುತ್ತೂರಿನ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪುತ್ತೂರಿನ ಆಸ್ಪತ್ರೆಗಳಿಗೆ ಅವಕಾಶ ಕಲ್ಪಿಸಿಕೊಡುವಂತೆ ಸರಕಾರಕ್ಕೆ ಮನವಿ ಮಾಡುವುದಾಗಿ ಬನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯು ನ.16ರಂದು ಅಧ್ಯಕ್ಷೆ ಸ್ಮಿತಾರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸದಸ್ಯ ತಿಮ್ಮಪ್ಪ ಪೂಜಾರಿ ಮಾತನಾಡಿ, ಸಹಕಾರ ಸಂಘಗಳ ಮೂಲಕ ಸದಸ್ಯರಿಗೆ ಯಶಸ್ವಿನಿ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗಿದೆ. ಆದರೆ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಪುತ್ತೂರಿನ ಯಾವುದೇ ಆಸ್ಪತ್ರೆಗಳು ಅನ್ವಯಯವಾಗುವುದಿಲ್ಲ. ದೂರದ ಮಂಗಳೂರಿಗೆ ತೆರಳಬೇಕಾಗುತ್ತದೆ. ಇದರಿಂದಾಗಿ ಪುತ್ತೂರಿನ ಜನತೆ ವಿಮೆ ಮಾಡಿಸಿದ್ದರೂ ಯೋಜನೆಯ ಸೌಲಭ್ಯ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ಬಡ ಕೃಷಿಕರೇ ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಈ ನಿಟ್ಟಿನಲ್ಲಿ ಪುತ್ತೂರಿನ ಆಸ್ಪತ್ರೆಗಳಿಗೂ ಯಶಸ್ವಿನಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದು ಈ ಕುರಿತು ಸರಕಾರಕ್ಕೆ ಮನವಿ ಮಾಡುವುದಾಗಿ ನಿರ್ಣಯ ಕೈಗೊಳ್ಳಲಾಗಿದೆ.
ಕೆಮ್ಮಾಯಿ-ಆಡ್ಲಿಮಜಲು-ಕೊಪ್ಪಳ ರಸ್ತೆ ಮೇಲ್ದರ್ಜೆಗೇರಿಸಲು ಆಗ್ರಹ:
ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿಯಿಂದ ಕೊಪ್ಪಳ-ಅಡ್ಲಿಮಜಲು ರಸ್ತೆಯ ಸುಮಾರು 4 ಕಿ.ಮೀ ರಸ್ತೆಯಲ್ಲಿ ಘನ ವಾಹನ ಹಾಗೂ ಅಧಿಕ ಭಾರದ ಲಾರಿಗಳು ತೆರಳದಂತೆ ಸೂಚನ ಫಲಕ ಅಳವಡಿಸಲಾಗಿದೆ. ಆದರೆ ಈ ಪ್ರದೇಶಲ್ಲಿ ಕೆಲವು ಕೈಗಾರಿಕೆಗಳಿದ್ದು ಘನ ವಾಹನ, ಲಾರಿಗಳ ಸಂಚಾರ ಸ್ಥಗಿತಗೊಳಿಸಿದರೆ ಗ್ರಾಮದ ಅಭಿವೃದ್ಧಿ ಕುಂಠಿತವಾಗುತ್ತದೆ. ಹೀಗಾಗಿ ಸದರಿ ರಸ್ತೆಯನ್ನು ಮೇಲ್ದರ್ಜೆಗೇರಿಸಬೇಕು ಎಂದು ಸದಸ್ಯ ತಿಮ್ಮಪ್ಪ ಪೂಜಾರಿ ಆಗ್ರಹಿಸಿದರು.
ಶಿಥಿಲಾವಸ್ಥೆಯಲ್ಲಿ ಮೂಡಾಯೂರು ಸೇತುವೆ:
ಕೆಮ್ಮಾಯಿ-ಕೊಪ್ಪಳ ರಸ್ತೆಯ ಮೂಡಾಯೂರಿನಲ್ಲಿ ಸುಮಾರು 30 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಸೇತುವೆ ಈಗ ಶಿಥಿಲಾವಸ್ಥೆಯಲ್ಲಿದ್ದು ಕುಸಿಯವ ಸ್ಥಿತಿಯಲ್ಲಿದೆ. ಇಲ್ಲಿ ಹೊಸ ಸೇತುವೆಯನ್ನು ನಿರ್ಮಿಸಿಕೊಡುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಸದಸ್ಯರು ಆಗ್ರಹಿಸಿದರು.
ನಾಳೆ(18)ಆಧಾರ್ ನೋಂದಣಿ ಮತ್ತು ತಿದ್ದುಪಡಿ:
ಬನ್ನೂರು ಗ್ರಾಮ ಪಂಚಾಯತ್ ಹಾಗೂ ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಸಹಯೋಗದಲ್ಲಿ ನ.18ರಂದು ಆಧಾರ್ ಕಾರ್ಡ್ ನೊಂದಣಿ ಹಾಗೂ ತಿದ್ದುಪಡಿ ಶಿಬಿರವು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ. ಶಿಬಿರದಲ್ಲಿ ಜನ್ಮ ದಿನಾಂಕ ಬದಲಾವಣೆ, ಹೆಸರು ಬದಲಾವಣೆ, ವಿಳಾಸ ಬದಲಾವಣೆ ಹಗೂ ಹೊಸ ಆಧಾರ್ ನೋಂದಣಿ ಮಾಡಲಾಗುವುದು. ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪಿಡಿಓ ಚಿತ್ರಾವತಿ ಹೇಳಿದರು.
ಉಪಾಧ್ಯಕ್ಷ ಶೀನಪ್ಪ ಕುಲಾಲ್, ಸದಸ್ಯರಾದ ಜಯ, ಗೀತಾ, ಹರಿಣಾಕ್ಷಿ, ಸುಪ್ರಿತಾ ಪ್ರಭು, ಗಣೇಶ್ ಹೆಗ್ಡೆ, ರಾಘವೇಂದ್ರ ಗೌಡ, ರಮಣಿ ಡಿ ಗಾಣಿಗ, ವಿಮಲ ಹರೀಶ್, ಶ್ರೀನಿವಾಸ ಪೆರ್ವೋಡಿ, ಗಿರಿಧರ ಪಂಜಿಗುಡ್ಡೆ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಚಿತ್ರಾವತಿ ಸ್ವಾಗತಿಸಿ, ಲೆಕ್ಕಸಹಾಯಕಿ ಜಯಂತಿ ವಂದಿಸಿದರು.