ಉಡುಪಿಯಲ್ಲಿ ನಡೆದ ಒಂದೇ ಮನೆಯ ನಾಲ್ವರ ಬರ್ಬರ ಕೊಲೆ ಪ್ರಕರಣ-ಶಿವಪ್ರಸಾದ್ ಆಳ್ವರನ್ನು ಎಸ್‌ಪಿಪಿಯಾಗಿ ನೇಮಿಸಲು ಕುಟುಂಬಸ್ಥರ ಮನವಿ

0

ಪುತ್ತೂರು: ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ನೇಜಾರಿನ ತೃಪ್ತಿನಗರದಲ್ಲಿ ಕೆಲವು ದಿನಗಳ ಹಿಂದೆ ನಡೆದಿರುವ ಒಂದೇ ಮನೆಯ ನಾಲ್ವರ ಬರ್ಬರ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರ ವಾದಿಸಲು ಕೆ. ಶಿವಪ್ರಸಾದ್ ಆಳ್ವರವರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಕ ಮಾಡಬೇಕು ಎಂದು ಮೃತರ ಕುಟುಂಬಸ್ಥರು ಸರಕಾರವನ್ನು ಒತ್ತಾಯಿಸಿದ್ದಾರೆ.

ನೇಜಾರಿನ ಮನೆಯಲ್ಲಿ ಹಸೀನಾ(51ವ), ಅವರ ಮಕ್ಕಳಾದ ಅಫ್ನಾನ್(23ವ), ಗಗನಸಖಿಯಾಗಿದ್ದ ಐನಾಜ್(21ವ) ಮತ್ತು ಆಸೀಮ್(13ವ)ರವರನ್ನು ಪ್ರವೀಣ್ ಅರುಣ್ ಚೌಗುಲೆ ಎಂಬಾತ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಕೆಲವು ದಿನಗಳ ಹಿಂದೆಯಷ್ಟೇ ನಡೆದಿದೆ. ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಗಗನಸಖಿಯಾಗಿದ್ದ ಐನಾಜ್(21ವ)ರವರನ್ನು ಅದೇ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಪ್ರವೀಣ್ ಅರುಣ್ ಚೌಗಲೆ(39ವ) ಎಂಬಾತ ಕೊಲೆ ಮಾಡಲೆಂದು ಅವರ ಮನೆಗೆ ರಿಕ್ಷಾದಲ್ಲಿ ಬಂದಿದ್ದ. ಅವರ ಮನೆಗೆ ನುಗ್ಗಿದವನೇ ಐನಾಜ್‌ಗೆ ಚೂರಿಯಿಂದ ಇರಿದಿದ್ದ. ಇದನ್ನು ತಡೆಯಲು ಬಂದಿದ್ದ ಹಸೀನಾ, ಅಫ್ನಾನ್ ಮತ್ತು ಆಸೀಮ್‌ರವರನ್ನೂ ಚೂರಿಯಿಂದ ಇರಿದು ಕೊಲೆ ಮಾಡಿದ್ದ. ಕೇವಲ 20 ನಿಮಿಷಗಳ ಅಂತರದಲ್ಲಿ ಒಂದೇ ಚೂರಿಯಿಂದ ಇರಿದು ನಾಲ್ವರನ್ನು ಕೊಲೆ ಮಾಡಿ ಬಳಿಕ ಪ್ರವೀಣ್ ಅರುಣ್ ಚೌಗಲೆ ಪರಾರಿಯಾಗಿದ್ದ. ನಂತರ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ನಾಲ್ವರ ಕೊಲೆಗೆ ಬಳಸಿದ ಚೂರಿ ಇನ್ನೂ ಪತ್ತೆಯಾಗಿಲ್ಲ. ಅಲ್ಲದೆ ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುದನ್ನೂ ಆತ ಇನ್ನೂ ಸರಿಯಾಗಿ ತಿಳಿಸಿಲ್ಲ. ಮದುವೆಯಾಗಿ ಮಕ್ಕಳನ್ನು ಹೊಂದಿರುವ ಪ್ರವೀಣ್ ಅರುಣ್ ಚೌಗಲೆ ಯಾವ ಕಾರಣಕ್ಕಾಗಿ ಐನಾಜ್ ಅವರನ್ನು ಟಾರ್ಗೆಟ್ ಮಾಡಿದ್ದ, ಐನಾಜ್‌ರವರನ್ನು ಕೊಲೆ ಮಾಡಿದ ಬಳಿಕ ಅವರ ಮನೆಯಲ್ಲಿದ್ದ ಮತ್ತೆ ಮೂವರನ್ನೂ ಯಾಕೆ ಬಲಿ ಪಡೆದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣ ನಿಗೂಢವಾಗಿಯೇ ಮುಂದುವರಿದಿದೆ. ಒಂದೇ ಮನೆಯ ನಾಲ್ವರನ್ನು ಬರ್ಬರವಾಗಿ ಕೊಲೆ ಮಾಡಿರುವ ಈ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ವ್ಯಾಪಕ ಆಗ್ರಹ ವ್ಯಕ್ತವಾಗಿದೆ. ತನ್ನ ಪತ್ನಿ ಮತ್ತು ಮಕ್ಕಳನ್ನು ಕಳೆದುಕೊಂಡಿರುವ ವಿದೇಶದಲ್ಲಿ ಉದ್ಯೋಗಿಯಾಗಿದ್ದ ನೂರ್ ಮಹಮ್ಮದ್ ಅವರು ಈ ಕೊಲೆ ಪ್ರಕರಣದ ತನಿಖೆಗೆ ತ್ವರಿತಗತಿ ನ್ಯಾಯಾಲಯ ಆರಂಭಿಸಬೇಕು ಮತ್ತು ನಮಗೆ ನ್ಯಾಯ ಒದಗಿಸಿಕೊಡಲು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ಕೆ. ಶಿವಪ್ರಸಾದ್ ಆಳ್ವರವರನ್ನು ನೇಮಕ ಮಾಡಬೇಕು ಎಂದು ತಮ್ಮ ಮನೆಗೆ ಭೇಟಿ ನೀಡಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮನವಿ ಮಾಡಿದ್ದಾರೆ.


ಪುತ್ತೂರು ದರ್ಬೆ ಕಾವೇರಿಕಟ್ಟೆ ನಿವಾಸಿಯಾಗಿದ್ದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕಾರವಾರ ಜಿಲ್ಲೆಯನ್ನು ಒಳಗೊಂಡ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿಯಾಗಿರುವ ಮತ್ತು ಹಲವು ಪ್ರಮುಖ ಪ್ರಕರಣಗಳಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುವ ಕೆ. ಶಿವಪ್ರಸಾದ್ ಆಳ್ವರವರನ್ನು ನ.6ರಂದು ರಾತ್ರಿ ನೆಹರೂನಗರದಲ್ಲಿ ನಡೆದ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್(26ವ)ರವರ ಕೊಲೆ ಪ್ರಕರಣದಲ್ಲಿಯೂ ವಿಶೇಷ ಸರಕಾರಿ ಅಭೀಯೋಜಕರನ್ನಾಗಿ ನೇಮಕ ಮಾಡಬೇಕು ಎಂದು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.

LEAVE A REPLY

Please enter your comment!
Please enter your name here