ಉಪ್ಪಿನಂಗಡಿಯಲ್ಲಿ ಕಂಬಳ ಕೋಣಗಳಿಗೆ ಬೀಳ್ಕೊಡುಗೆ – ರಾಜಗಾಂಭೀರ್ಯದಿಂದ ಬೆಂಗಳೂರಿನತ್ತ ಪ್ರಯಾಣ

0

ಉಪ್ಪಿನಂಗಡಿ: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ‘ಬೆಂಗಳೂರು ಕಂಬಳ- ನಮ್ಮ ಕಂಬಳ’ದಲ್ಲಿ ಭಾಗವಹಿಸಲೆಂದು ಕರಾವಳಿಯ ವಿವಿಧ ಕಡೆಗಳಿಂದ ಬಂದ ಕೋಣಗಳು ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಬಂದು ಸೇರಿದವು. ಕಂಬಳ ಕ್ರೀಡೆಯನ್ನು ರಾಜ್ಯ ರಾಜಧಾನಿಯಲ್ಲಿ ಪರಿಚಯಿಸಲು ಹೊರಟಿರುವ ಕೋಣಗಳಿಗೆ ಉಪ್ಪಿನಂಗಡಿಯಲ್ಲಿ ನೂರಾರು ಕಂಬಳಾಭಿಮಾನಿಗಳ ಸಮ್ಮುಖದಲ್ಲಿ ಪ್ರೀತಿ- ಗೌರವಾದಾರಗಳ ಸ್ವಾಗತ ನೀಡಲಾಯಿತ್ತಲ್ಲದೆ, ಕೊಂಬು- ಕಹಳೆಗಳ ನಾದದೊಂದಿಗೆ ಕೂಡಿದ ಮೆರವಣಿಗೆಯೊಂದಿಗೆ ಕೋಣಗಳನ್ನು ಬೆಂಗಳೂರಿಗೆ ಬೀಳ್ಕೊಡಲಾಯಿತು.


ನ.25 ಮತ್ತು ನ.26ರಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಸಾರಥ್ಯದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ‘ಬೆಂಗಳೂರು ಕಂಬಳ- ನಮ್ಮ ಕಂಬಳ’ದ ‘ರಾಜ- ಮಹಾರಾಜ’ ಜೋಡುಕರೆಯಲ್ಲಿ ನೇಗಿಲು ಕಿರಿಯ, ನೇಗಿಲು ಹಿರಿಯ, ಹಗ್ಗ ಕಿರಿಯ, ಹಗ್ಗ ಹಿರಿಯ, ಕನೆಹಲಗೆ, ಅಡ್ಡ ಹಲಗೆ ವಿಭಾಗಗಳಲ್ಲಿ ಸ್ಪರ್ಧೆ ನೀಡಲು ಹೊರಟು ನಿಂತಿರುವ ಕಂಬಳ ಕೋಣಗಳು ಗುರುವಾರ ಬೆಳಗ್ಗೆ ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜು ಮೈದಾನಕ್ಕೆ ಬಂದು ಸೇರಿದವು. ಕಂಬಳ ಸಮಿತಿಯ ವತಿಯಿಂದ ಇಲ್ಲಿ ಕೋಣಗಳ ಯಜಮಾನರನ್ನು ಶಾಲು ಹೊದೆಸಿ ಸ್ವಾಗತಿಸಲಾಯಿತು. ಪಶು ಸಂಗೋಪನಾ ಇಲಾಖೆಯ ಪಶು ವೈದ್ಯಾಧಿಕಾರಿಗಳು ಕೋಣಗಳ ಸಾಗಾಟಕ್ಕೆ ಅನುಮತಿ ಪತ್ರ ನೀಡಿದರು. ಕಂಬಳ ಸಮಿತಿಯವರಿಂದ ಕೋಣಗಳ ನೋಂದಣಿ ಪ್ರಕ್ರಿಯೆ ನಡೆಯಿತು. ಇಲ್ಲಿ ಚಾ- ತಿಂಡಿಯ ವ್ಯವಸ್ಥೆಯಾದ ಬಳಿಕ ಕಾಲೇಜು ಮೈದಾನದಿಂದ ರಾಷ್ಟ್ರೀಯ ಹೆದ್ದಾರಿಯ ಬಳಿಯವರೆಗೆ ಕೊಂಬು- ಕಹಳೆ, ಬ್ಯಾಂಡ್- ವಾದ್ಯಗಳ ಮೆರವಣಿಗೆ ನಡೆದು ಆ ಬಳಿಕ ಪ್ರಚಾರ ವಾಹನ ಮುಂದಕ್ಕೆ ಸಾಗಿದರೆ, ಅದರ ಹಿಂದೆ ಲಾರಿ, ಮಿನಿ ಲಾರಿ, ಟೆಂಪೋಗಳಲ್ಲಿ ರಾಜ ವೈಭವದ ಗತ್ತಿನೊಂದಿಗೆ ಕಂಬಳ ಕೋಣಗಳು ಬೆಂಗಳೂರಿನತ್ತ ಸಾಗಿದವು.


ಈ ಸಂದರ್ಭ ಬೆಂಗಳೂರು ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಸಂಚಾಲಕರಾದ ನಿರಂಜನ್ ರೈ ಮಠಂತಬೆಟ್ಟು, ಎಂ. ರಾಜೇಶ್ ಶೆಟ್ಟಿ ಎಡ್ತೂರು, ರಾಜೇಶ್ ಶೆಟ್ಟಿ, ಪುತ್ತೂರು ಕೋಟಿ- ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷ ಎನ್. ಉಮೇಶ ಶೆಣೈ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ದ.ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ)ಯ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, ೩೪ ನೆಕ್ಕಿಲಾಡಿ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಂ ಕೊಪ್ಪಳ, ಪ್ರಮುಖರಾದ ವಿಕ್ರಂ ಶೆಟ್ಟಿ ಅಂತರ, ಈಶ್ವರ ಭಟ್ ಪಂಜಿಗುಡ್ಡೆ, ಮುಹಮ್ಮದ್ ಬಡಗನ್ನೂರು, ಅಶೋಕ್ ಕುಮಾರ್ ರೈ ನೆಕ್ಕರೆ, ಯೊಗೀಶ್ ಸಾಮಾನಿ, ರಾಕೇಶ್ ರೈ ಕೆಮ್ಮಾರ, ದಿಲೀಪ್ ಶೆಟ್ಟಿ ಕರಾಯ, ಸುದೇಶ್ ಶೆಟ್ಟಿ, ರಾಧಾಕೃಷ್ಣ ನಾಕ್ ಉದಯಗಿರಿ, ಪ್ರವೀಣ್‌ಚಂದ್ರ ಆಳ್ವ, ಕೃಷ್ಣಪ್ರಸಾದ್ ಆಳ್ವ, ರೋಶನ್ ರೈ ಬನ್ನೂರು, ನಾರಾಯಣ ಶೆಟ್ಟಿ ಹೊಳೆಕರೆ, ಸತೀಶ್ ಶೆಟ್ಟಿ ಹೆನ್ನಾಳ, ದೇವಿಪ್ರಸಾದ್ ಶೆಟ್ಟಿ ಬೆಳ್ಳಿಪ್ಪಾಡಿ, ಯು.ಟಿ. ತೌಸೀಫ್, ಶಬೀರ್ ಕೆಂಪಿ, ರಾಜೇಶ್ ಶೆಟ್ಟಿ, ವಿಶ್ವನಾಥ ಶೆಟ್ಟಿ ಕಂಗ್ವೆ, ಯು. ರಾಮ, ರಾಜೇಶ್ ಶೆಟ್ಟಿ, ವೆಂಕಪ್ಪ ಗೌಡ ಮರುವೇಲು, ಫಾರೂಕ್ ಜಿಂದಗಿ ಮತ್ತಿತರರು ಉಪಸ್ಥಿತರಿದ್ದರು.


ಬೈಹುಲ್ಲು, ನೀರು, ಹುರುಳಿ ವ್ಯವಸ್ಥೆ
ಉಪ್ಪಿನಂಗಡಿಯಿಂದ ಹೊರಟ ಕಂಬಳ ಕೋಣಗಳಿಗೆ ಹಾಸನದ ಸರಕಾರಿ ತಾಂತ್ರಿಕ ಮಹಾವಿದ್ಯಾಲಯದ ಮೈದಾನದಲ್ಲಿ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಏಕಕಾಲದಲ್ಲಿ 10 ವಾಹನಗಳಿಂದ ಕೋಣಗಳನ್ನು ಇಳಿಸಲು ರ‍್ಯಾಂಪ್‌ನ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಕೋಣಗಳನ್ನು ವಾಹನಗಳನ್ನು ಇಳಿಸಿ ಅವುಗಳ ವಿಶ್ರಾಂತಿಗೆ ಸಮಯ ನೀಡಲಾಗುತ್ತದೆ. ಇಲ್ಲಿ ಕೋಣಗಳಿಗೆಂದು ಬೈಹುಲ್ಲು, ನೀರು, ಹುರಳಿಯನ್ನು ದಾಸ್ತಾನು ಮಾಡಲಾಗಿದೆ. ಅಲ್ಲದೆ, ಪ್ರಯಾಣದುದ್ದಕ್ಕೂ ನೀರು ತುಂಬಿದ ಟ್ಯಾಂಕರ್‌ಗಳು ಇವುಗಳೊಂದಿಗೆ ಸಂಚರಿಸುತ್ತಿವೆ. ಇಲ್ಲಿ ಕೋಣಗಳೊಂದಿಗೆ ಬಂದವರಿಗೆ ಊಟದ ವ್ಯವಸ್ಥೆಯೂ ನಡೆಯಲಿದೆ. ಸಂಜೆ 6 ಗಂಟೆಗೆ ಇಲ್ಲಿಂದ ಹೊರಡುವ ಕೋಣಗಳನ್ನು ಬಳಿಕ ನೆಲಮಂಗಲದಿಂದ ಸುಮಾರು 9 ಗಂಟೆಯ ಬಳಿಕ ಅಂದರೆ ಬೆಂಗಳೂರಿನ ಸಂಚಾರ ದಟ್ಟನೆ ಕಡಿಮೆಯಾದ ಬಳಿಕ ಅರಮನೆ ಮೈದಾನಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ರಾತ್ರಿ 12 ಗಂಟೆಗೆ ಅರಮನೆ ಮೈದಾನಕ್ಕೆ ತಲುಪುವ ಯೋಜನೆಯಿದೆ. ಹಾಸನದಲ್ಲಿ ಕೋಣಗಳಿಗೆ ಬೇಕಾದ ವ್ಯವಸ್ಥೆಯ ಉಸ್ತುವಾರಿಯನ್ನು ಕಂಬಳ ಸಮಿತಿ, ತುಳು ಕೂಟ, ಕನ್ನಡಪರ ಸಂಘಟನೆಗಳ ಸಹಕಾರದಲ್ಲಿ ಎಚ್.ಡಿ. ರೇವಣ್ಣ ಅವರು ವಹಿಸಿಕೊಂಡಿದ್ದಾರೆ ಎಂದು ಬೆಂಗಳೂರು ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ತಿಳಿಸಿದ್ದಾರೆ.


ಶ್ರೀ ಮಹಿಷಮರ್ಧಿನಿ ಸನ್ನಿಧಿಯಲ್ಲಿ ಪ್ರಾರ್ಥನೆ
ಶಾಸಕ, ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈಯವರ ಹುಟ್ಟೂರು ಕೋಡಿಂಬಾಡಿಯ ಮಠಂತಬೆಟ್ಟುವಿನ ಶ್ರೀ ಮಹಿಷಮರ್ಧಿನಿ ದೇವಾಲಯದಲ್ಲಿ ಕಂಬಳ ಸಮಿತಿಯವರು ಕೋಣಗಳ ಸುಖಕರ ಪ್ರಯಾಣಕ್ಕಾಗಿ ಹಾಗೂ ಬೆಂಗಳೂರಿನ ಕಂಬಳವು ಯಶಸ್ವಿಯಾಗುವಂತೆ ಶ್ರೀ ದೇವಿಯಲ್ಲಿ ಪ್ರಾರ್ಥನೆ ನೆರವೇರಿಸಿದರು.

170 ಜೊತೆ ಕೋಣಗಳು ನೋಂದಣಿ
ಉಪ್ಪಿನಂಗಡಿಯಲ್ಲಿ ನೋಂದಣಿ ಮಾಡಿಸಿಕೊಂಡು 80 ಜೊತೆ ಕೋಣಗಳು ಹೊರಟರೆ, ಸುಮಾರು ಐದು ಜೊತೆ ಕೋಣಗಳು ನೋಂದಣಿ ಮಾಡಿಸಿಕೊಳ್ಳದೆ ಹೊರಟಿವೆ. ಇನ್ನು ಕೆಲ ಕೋಣಗಳು ಗುಂಡ್ಯದಲ್ಲಿ ಜೊತೆಯಾದರೆ, ಇನ್ನು ಕೆಲವು ಸಕಲೇಶಪುರಲ್ಲಿ ಜೊತೆಯಾಗಿವೆ. ಬೆಳಗ್ಗೆ 10:15ರ ಸುಮಾರಿಗೆ ಕೋಣಗಳನ್ನು ಉಪ್ಪಿನಂಗಡಿಯಿಂದ ಬೀಳ್ಕೊಡಲಾಯಿತಾದರೂ, ಆ ಮೇಲೆಯೂ ಸುಮಾರು 11:30ರವರೆಗೂ ಕಂಬಳ ಕೋಣಗಳು ಉಪ್ಪಿನಂಗಡಿಯ ಕಾಲೇಜು ಮೈದಾನಕ್ಕೆ ಆಗಮಿಸಿ, ಮತ್ತೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿವೆ. ‘ಬೆಂಗಳೂರು ಕಂಬಳ- ನಮ್ಮ ಕಂಬಳ’ದಲ್ಲಿ ಈಗಾಗಲೇ 170 ಜೊತೆ ಕೋಣಗಳ ನೋಂದಣಿಯಾಗಿದ್ದು, ಅದರಲ್ಲಿ ಕೆಲವು ಕೋಣಗಳು ನಿನ್ನೆಯೇ ಬೆಂಗಳೂರಿಗೆ ತಲುಪಿದ್ದು, ಅಲ್ಲಿನ ಕಂಬಳ ಕರೆಯಲ್ಲಿ ಕೋಣಗಳ ಕುದಿ ಓಟ (ಪ್ರಾಯೋಗಿಕ ಓಟ)ವು ನಡೆದಿದೆ. ಇನ್ನು ಕೆಲವು ಕೋಣಗಳ ಯಜಮಾನರು ಗುರುವಾರ ರಾತ್ರಿ, ಶುಕ್ರವಾರ ಬೆಳಗ್ಗೆ ಹೊರಡುವ ಯೋಜನೆ ಹಾಕಿಕೊಂಡಿದ್ದಾರೆ. ನೋಂದಣಿಯಾದ 170 ಜೊತೆ ಕೋಣಗಳಲ್ಲಿ ಎಲ್ಲಾ ಜೊತೆ ಭಾಗವಹಿಸದಿದ್ದರೂ, ಸುಮಾರು 150 ಜೊತೆ ಕೋಣಗಳು ಭಾಗವಹಿಸುವುದು ನಿಶ್ಚಿತವಾಗಿದೆ ಎಂಬುದು ಕಂಬಳ ಸಮಿತಿಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here