ಆರ್.ಸಿ.ಎಚ್ ಪೋರ್ಟಲ್‌ಗೆ ಆಶಾ ಪ್ರೋತ್ಸಾಹಧನ ಲಿಂಕ್ ಕೈ ಬಿಡಿ, ಮಾಸಿಕ ವೇತನ ಕನಿಷ್ಠ ರೂ.15ಸಾವಿರ ಕೊಡಿ

0

ಪುತ್ತೂರಿನಲ್ಲಿ ಆಶಾ ಕಾರ್ಯಕರ್ತೆಯರಿಂದ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ – ತಾಲೂಕು ಆರೋಗ್ಯಾಧಿಕಾರಿಗೆ ಮನವಿ

ಪುತ್ತೂರು: ಆರ್.ಸಿ.ಎಚ್ ಪೋರ್ಟಲ್‌ಗೆ ಆಶಾ ಪ್ರೋತ್ಸಾಹಧನ ಲಿಂಕ್ ಕೈ ಬಿಡುವಂತೆ ಮತ್ತು ಮಾಸಿಕ ವೇತನ ಕನಿಷ್ಠ ರೂ.15 ಸಾವಿರ ಕೊಡುವಂತೆ ಸಹಿತ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಪುತ್ತೂರು ತಾಲೂಕು ಸಮಿತಿಯಿಂದ (ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್‌ಗೆ ಸಂಯೋಜಿತ) ನ.24ರಂದು ಕರ್ತವ್ಯಕ್ಕೆ ಗೈರಾಗಿ ಪುತ್ತೂರು ತಾಲೂಕು ಆಡಳಿತ ಸೌಧದ ಬಳಿ ಪ್ರತಿಭಟನೆ ನಡೆಸಿದರು. ಪುತ್ತೂರು ಮತ್ತು ಕಡಬದ ಆಶಾಕಾರ್ಯಕರ್ತೆಯರು ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ತಾಲೂಕು ಆಡಳಿತ ಸೌಧದ ಮುಂಭಾಗದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು.

ಬಿಟ್ಟಿ ಚಾಕ್ರಿ ಮಾಡಿಸುವುದನ್ನ ನಿಲ್ಲಿಸಿ:
ಎಐಯುಟಿಯುಸಿ ರಾಜ್ಯ ಖಜಾಂಚಿ ಸಂಧ್ಯಾ ಅವರು ಮಾತನಾಡಿ ಸರಕಾರ ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಇಲಾಖೆಯ ಬುನಾದಿ ಎಂದು ಹೊಗಳಿ ಕೊನೆಗೆ ಇಲಾಖೆಯ ಎಲ್ಲಾ ಕೆಲಸ ಮಾಡಿಸುತ್ತಾರೆ. ಇಲಾಖೆಯು ಒತ್ತಡ ಪೂರಕವಾಗಿ ನಿಮ್ಮದಲ್ಲದ ಕೆಲಸವನ್ನು ಮಾಡಿಸುತ್ತಿದ್ದಾರೆ. ಪ್ರತಿ ತಿಂಗಳು 2 ಕುಂದು ಕೊರತೆ ಸಭೆ ನಡೆಸಬೇಕಾಗಿದ್ದು ಅದನ್ನೂ ಮಾಡುತ್ತಿಲ್ಲ. ಶೈಕ್ಷಣಿಕ ಮತ್ತು ಚುನಾವಣೆ ಸಂದರ್ಭ ಸಹಿತ ನಿಮ್ಮಿಂದ ಕೆಲಸ ಮಾಡಿಸುತ್ತಾರೆ. ಒಟ್ಟಿನಲ್ಲಿ ನಿಮ್ಮಿಂದ ಇಲಾಖೆ ಬಿಟ್ಟಿ ಚಾಕ್ರಿ ಮಾಡಿಸಿಕೊಳ್ಳುತ್ತಿದೆ. ಇದನ್ನು ನಿಲ್ಲಿಸಬೇಕು. ಕನಿಷ್ಠ ರೂ. 15 ಸಾವಿರ ವೇತನ ಪಿಕ್ಸ್ ಮಾಡಬೇಕು ಎಂದ ಅವರು ಸರಕಾರ ಬೇರೆ ಬೇರೆ ವಿಚಾರದಲ್ಲಿ ದುಂದುವೆಚ್ಚ ಮಾಡುತ್ತಾರೆ. ಆಶಾ ಕಾರ್ಯಕರ್ತೆಯರಿಗೆ ಯಾಕೆ ವೇತನ ನೀಡಲಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಲಿ ಎಂದರು.

ಯಾವುದೇ ಸರಕಾರ ನಮ್ಮ ಕುಂದುಕೊರತೆ ಆಲಿಸುತ್ತಿಲ್ಲ:
ಆಶಾ ಕಾರ್ಯಕರ್ತೆಯರ ಪುತ್ತೂರು ತಾಲೂಕು ಸಂಘದ ಅಧ್ಯಕ್ಷೆ ಅಮಿತಾ ಹರೀಶ್ ಅವರು ಮಾತನಾಡಿ ಕೊರೋನಾ ಸಂದರ್ಭ ನಾವು ದೇವರಂತೆ ಎಲ್ಲರಿಗೂ ಕಂಡಿದ್ದೆವು. ಆದರೆ ನಮಗೆ ಕೇವಲ ರೂ.5 ಸಾವಿರ ನೀಡಿ ಕೆಲಸ ಮಾಡಿಸುತ್ತಾರೆ. ಯಾವುದೇ ಸರಕಾರ ನಮ್ಮ ಕುಂದುಕೊರತೆ ಆಲಿಸುತ್ತಿಲ್ಲ. ಮನೆ ಮನೆ ಭೇಟಿಯ ಸಂದರ್ಭ ಕೆಲವರ ಅನಾರೋಗ್ಯಕ್ಕೆ ಸಂಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಕಫ ಸಂಗ್ರಹ ಮಾಡಬೇಕಾದರೆ ಅದಕ್ಕೆ ಸರಿಯಾದ ತರಬೇತಿಯೂ ನಮಗೆ ಕೊಟ್ಟಿಲ್ಲ. ಪ್ರತಿ ಭಾರಿ ಮಾತ್ರ ನಮ್ಮಿಂದ ಕೆಲಸ ಮಾಡಲು ಮೆಸೇಜ್ ಹಾಕುತ್ತಾರೆ. ನಮ್ಮಿಂದ ಧರ್ಮಕ್ಕೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.

ನಮ್ಮ ಪಾಲಿಗೆ ಕೇವಲ ಭರವಸೆ ಮಾತ್ರ:
ಸಂಯುಕ್ತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷೆ ಶೋಭಾ ಅವರು ನಾವು ಸಮುದಾಯದಲ್ಲಿ ಕೆಲಸ ಮಾಡಲು ಬಂದವರು. ಆದರೆ ನಮ್ಮ ಕೆಲಸಕ್ಕೆ ಸರಿಯಾದ ವೇತನ ಮಾತ್ರ ಸಿಗುತ್ತಿಲ್ಲ. ಕಳೆದ ಸಲ ಆರೋಗ್ಯ ಸಚಿವರನ್ನು ಭೇಟಿಯಾದಾಗ ರೂ.1 ಸಾವಿರ ಜಾಸ್ತಿ ಮಾಡುತ್ತೇವಮ್ಮ ಎಂದು ಹೇಳಿದರು. ಮತ್ತೊಮ್ಮೆ ಕೇಳುವಾಗ ಮುಂದೆ ಬರ್ತದೆಯಮ್ಮ ಎಂದು ಹೇಳಿದು. ಅದು ಯವಾಗ ಬರುತ್ತದೆ ಎಂದು ನಮಗೆ ಗೊತ್ತಾಗುತ್ತಿಲ್ಲ ಎಂದ ಅವರು ನಮ್ಮ ಬೇಡಿಕೆಗೆ ಈಡೇರಿಸುವಂತೆ ಆಗ್ರಹಿಸಿದರು. ಎಐಯುಟಿಯುಸಿ ಜಿಲ್ಲಾ ಉಸ್ತುವಾರಿ ಹರಿಣಿ ಬೆಂಗಳೂರು ಅವರು ಹೋರಾಟದ ರೂಪುರೇಶೆಯನ್ನು ತಿಳಿಸಿದರು. ಆಶಾ ಕಾರ್ಯಕರ್ತೆಯರ ಪುತ್ತೂರು ಸಂಘದ ಕಾರ್ಯದರ್ಶಿ ಚಿತ್ರ ಮನವಿ ಪತ್ರ ಮಂಡಿಸಿದರು. ಸಂಘದ ಉಪಾಧ್ಯಕ್ಷೆ ನಳಿನಾಕ್ಷಿ, ಪುಷ್ಪ ಕೊಯಿಲ ಸಹಿತ ಹಲವಾರು ಮಂದಿ ಪ್ರತಿಭಟನೆಯಲ್ಲಿ ಉಪಸ್ಥಿರಿದ್ದರು. ಪ್ರತಿಭಟನೆ ಕೊನೆಗೆ ತಾಲೂಕು ಆರೋಗ್ಯಾಧಿಕಾರಿ ಕಚೇರಿಗೆ ತೆರಳಿ ತಮ್ಮ ಬೇಡಿಕೆಯ ಮನವಿಯನ್ನು ಸಲ್ಲಿಸಿದರು.


ಕಳೆದ 14 ವರ್ಷಗಳಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಾಯಿ ಮಗುವಿನ ಆರೈಕೆ, ಆರೋಗ್ಯದ ಬಗ್ಗೆ ಜನಸಾಮಾನ್ಯರಿಗೆ ಅರಿವು ನೀಡುವುದು, ಗ್ರಾಮ ನೈರ್ಮಲ್ಯ, ವಿವಿಧ ಸರ್ವೆಗಳನ್ನು ಕಾಲಕಾಲಕ್ಕೆ ಮಾಡುವುದು ಸೇರಿದಂತೆ ಸೇವೆ ಕಲ್ಪಿಸುವುದಕ್ಕೆ ಇಲಾಖೆ ಮತ್ತು ಜನತೆಯ ಕೊಂಡಿಯಾಗಿ ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೆ ತಮ್ಮ ಸೇವೆಗಳಿಗೆ ನಿಗದಿಯಾಗಿರುವ ಕೇಂದ್ರದ ಪ್ರೋತ್ಸಾಹ ಧನ ಸಂಪೂರ್ಣವಾಗಿ ಸಿಗುತ್ತಿಲ್ಲ. ಆರ್.ಸಿ.ಎಚ್ ಪೋರ್ಟಲ್‌ಗೆ ಆಶಾ ಪ್ರೋತ್ಸಾಹಧನ ಲಿಂಕ್ ಮಾಡಿರುವುದರಿಂದ ಆಶಾಗಳಿಗೆ ದುಡಿದಷ್ಟುಪ್ರೋತ್ಸಾಹಧನ ಬರುವುದಿಲ್ಲ. ಈ ಕುರಿತು ರಾಜ್ಯಾದಾದ್ಯಂತ ಕಳೆದ ಐದಾರು ವರ್ಷಗಳಿಂದ ಹಲವಾರು ಬಾರಿ ಗಮನ ಸೆಳೆಯಲಾಗಿದೆ. ಆದರೆ ಸಮಸ್ಯೆ ಬಗೆ ಹರಿಯಲಿಲ್ಲ. ಈ ಕುರಿತು ಕಳೆದ 8 ತಿಂಗಳಿನಿಂದ ಪದಾಧಿಕಾರಿಗಳೊಂದಿಗೆ ಆರೋಗ್ಯ ಸಚಿವರು, ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಹಲವಾರು ಸಭೆ ನಡೆದರೂ ಯಾವುದೇ ಸಮಸ್ಯೆ ಬಗೆಹರಿಯಲಿಲ್ಲ. ಸಮಸ್ಯೆ ನಿವಾರಣೆಗೆ ರಾಜ್ಯ ಸರಕಾರ ಕೂಡಲೇ ರೂ.15 ಸಾವಿರ ಮಾಸಿಕ ಗೌರವಧನ ನಿಗದಿ ಪಡಿಸಬೇಕೆಂದು ಆಶಾ ಕಾರ್ಯಕರ್ತೆಯರು ತಮ್ಮ ಪ್ರತಿಭಟನೆಯಲ್ಲಿ ಒತ್ತಾಯಿಸಿದರು.

LEAVE A REPLY

Please enter your comment!
Please enter your name here