‘ ಕುಶಲಕರ್ಮಿ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆಯಬೇಕು’- ಎ.ಸಿ.ಗಿರೀಶ್‌ನಂದನ್
ಪುತ್ತೂರು:ಪಿಎಂ ವಿಶ್ವಕರ್ಮ ಯೋಜನೆ ಕೇಂದ್ರೀಯ ವಲಯದ ಯೋಜನೆಯಾಗಿದ್ದು, ಇದು ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳಿಗೆ ಮೇಲಾಧಾರ ಉಚಿತ ಸಾಲ, ಕೌಶಲ್ಯ ತರಬೇತಿ, ಆಧುನಿಕ ಉಪಕರಣಗಳು, ಡಿಜಿಟಲ್ ವಹಿವಾಟು ಮತ್ತು ಮಾರುಕಟ್ಟೆಗೆ ಪ್ರೋತ್ಸಾಹದ ಮೂಲಕ ಸಮಗ್ರ ಮತ್ತು ಅಂತ್ಯದ ಬೆಂಬಲವನ್ನು ಒದಗಿಸುವ ಈ ಯೋಜನೆಯನ್ನು ಕುಶಲಕರ್ಮಿ ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಹಾಯಕ ಕಮಿಷನರ್ ಗಿರೀಶ್‌ನಂದನ್ ಅವರು ಹೇಳಿದ್ದಾರೆ.
ವಿಶ್ವಕರ್ಮ ಯುವ ಮಿಲನ್ ಪುತ್ತೂರು ತಾಲೂಕು ಮತ್ತು ದ.ಕ.ಜಿಲ್ಲಾ ಕೈಗಾರಿಕಾ ಕೇಂದ್ರ ಮಂಗಳೂರು ಇದರ ಸಹಭಾಗಿತ್ವದಲ್ಲಿ ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಪಿ.ಎಂ.ವಿಶ್ವಕರ್ಮ ಯೋಜನೆಯ ಮಾಹಿತಿ ಮತ್ತು ಆನ್‌ಲೈನ್ ನೋಂದಾವಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಈ ಯೋಜನೆ ಕುಶಲಕರ್ಮಿಗಳ ಆರ್ಥಿಕ ಜೀವನ ಮಟ್ಟವನ್ನು ಸುಧಾರಿಸುತ್ತದೆ ಎಂದವರು ಹೇಳಿದರು.
ದಕ್ಷಿಣ ಕನ್ನಡದಲ್ಲಿ ನೋಂದಾವಣೆ ಬಹಳ ಕಡಿಮೆ:
ಪಿಎಂ ವಿಶ್ವಕರ್ಮ ಯೋಜನೆಯನ್ನು ಪಾರಂಪರಿಕವಾಗಿ ನಡೆಸಿಕೊಂಡು ಬರಲಾಗುತ್ತಿರುವ ಸುಮಾರು 18 ವೃತ್ತಿಗಳವರಿಗೆ ಕೌಶಲ ಮತ್ತು ಆರ್ಥಿಕ ಬಲ ನೀಡಿ ಜೀವನ ಮಟ್ಟ ಸುಧಾರಿಸುವ ಜತೆಗೆ ದೇಶದ ಆರ್ಥಿಕ ಪ್ರಗತಿಗೆ ಅನುಕೂಲವಾಗುವಂತೆ ಕೇಂದ್ರ ಸರಕಾರ ಈ ಯೋಜನೆ ರೂಪಿಸಿದೆ ಎಂದ ಅವರು ದಕ್ಷಿಣ ಕನ್ನಡದಲ್ಲಿ ಈ ಯೋಜನೆಗೆ ನೋಂದಾವಣೆ ಕಡಿಮೆ ಇದೆ.ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಈ ಯೋಜನೆ ಮಾಹಿತಿ ಮುಟ್ಟಿಸುವ ಕೆಲಸ ಆಗಬೇಕೆಂದರು.
ಸಮಾಜ ಬಾಂಧವರು ನೂರಕ್ಕೆ ನೂರರಷ್ಟು ನೋಂದಾವಣೆ ಮಾಡಬೇಕು:
ವಿಶ್ವಕರ್ಮ ಯುವ ಮಿಲನ್ ರಾಜ್ಯಾಧ್ಯಕ್ಷ ವಿಕ್ರಮ್ ಆಚಾರ್ಯ ಅವರು ಮಾತನಾಡಿ ಪಿಎಂ ವಿಶ್ವಕರ್ಮ ಯೋಜನೆಯನ್ನು ನಮ್ಮ ಸಮಾಜಕ್ಕಿಂತ ಇತರ ಸಮಾಜದವರು ಸದುಪಯೋಗ ಪಡೆದು ಕೊಂಡಿದ್ದಾರೆ.ನಮ್ಮ ಸಮಾಜದವರು ನೂರಕ್ಕೆ ನೂರರಷ್ಟು ಇದರ ಸದುಪಯೋಗ ಪಡೆಯಬೇಕು.ಈ ನಿಟ್ಟಿನಲ್ಲಿ ನೋಂದಾವಣೆ ಮಾಡಿಕೊಳ್ಳಿ ಎಂದರು.
ಗುಣಮಟ್ಟದ ಉತ್ಪಾದನೆ ಮೂಲಕ ತಾಂತ್ರಿಕ ವ್ಯವಸ್ಥೆಗೆ ಒಗ್ಗಿಕೊಳ್ಳಿ:
ದಕ್ಷಿಣ ಕನ್ನಡ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಮಂಜುನಾಥ ಹೆಗ್ಡೆ ಅವರು ಪಿಎಂ ವಿಶ್ವಕರ್ಮ ಯೋಜನೆಯ ಮಾಹಿತಿ ನೀಡಿದರು.5 ವರ್ಷಗಳ ತನಕ ಈ ಯೋಜನೆ ಜಾರಿಯಲ್ಲಿದ್ದು, 30 ಲಕ್ಷ ಕುಶಲಕರ್ಮಿಗಳಿಗೆ ಯಾಂತ್ರಿಕ ಕೆಲಸ ನೀಡುವ ಗುರಿಯಿದೆ.ಅವರ ಆರ್ಥಿಕ ಮಟ್ಟವನ್ನು ಹೆಚ್ಚಿಸುವ ಜೊತೆಗೆ ಗ್ರಾಮೀಣ ಮತ್ತು ನಗರ ಪ್ರದೇಶದ ಕುಶಲಕರ್ಮಿಗಳನ್ನು ಗುರುತಿಸಿ ಅವರಿಗೆ ಡಿಜಿಟಲ್ ಸಾಮರ್ಥ್ಯ ಹೆಚ್ಚಿಸುವ ಯೋಜನೆ ಇದಾಗಿದೆ.ಒಂದು ಮನೆಯ ಒಬ್ಬರಿಗೆ ಮಾತ್ರ ಈ ಯೋಜನೆಯಲ್ಲಿ ಅವಕಾಶವಿದ್ದು, ಸರಕಾರಿ ನೌಕರರಾಗಿದ್ದರೆ ಈ ಯೋಜನೆಯ ಸೌಲಭ್ಯ ಪಡೆಯುವಂತಿಲ್ಲ.ಯಾವುದೇ ಉತ್ಪನ್ನ ಮಾಡಿ ಗುಣಮಟ್ಟ ಕಾಪಾಡಿಕೊಳ್ಳಿ ತಾಂತ್ರಿಕ ವ್ಯವಸ್ಥೆಗೆ ಒಗ್ಗಿಕೊಳ್ಳಿ ಎಂದರು.ಯುವ ಮಿಲನ್ ತಾಲೂಕು ಅಧ್ಯಕ್ಷ ಹರೀಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.ಕೇಂದ್ರ ದಿಶಾ ಸದಸ್ಯ ರಾಮದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಉಪಾಧ್ಯಕ್ಷ ದಿವಾಕರ್ ಅಚಾರ್ಯ ಸ್ವಾಗತಿಸಿ, ವಂದಿಸಿದರು.ಮಾಹಿತಿ ಕಾರ್ಯಗಾರದ ಬಳಿಕ ಪಿಎಂ ವಿಶ್ವಕರ್ಮ ಯೋಜನೆಗೆ ಹೆಸರು ನೋಂದಾವಣೆ ಮಾಡಲು ಸ್ಥಳದಲ್ಲೇ ವ್ಯವಸ್ಥೆ ಕಲ್ಪಿಸಲಾಯಿತು.