ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠೆ- ಪುತ್ತೂರಿನ ಮನೆ ಮನೆಗೆ ಅಕ್ಷತೆ ಅಭಿಯಾನ

0

ಪುತ್ತೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಜ.22 ರಂದು ನಡೆಯಲಿರುವ ಶ್ರೀ ರಾಮನ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ದೇಶಾದ್ಯಂತ ನಡೆಯುವ ಅಕ್ಷತೆ ವಿತರಣಾ ಕಾರ್ಯಕ್ರಮದ ಕುರಿತು ಮನೆ ಮನೆ ಸಂಪರ್ಕ ಅಭಿಯಾನ ಜ.1 ರಿಂದ 15 ರ ತನಕ ನಡೆಯಲಿದೆ. ನ.27ರಂದು ಅಯೋಧ್ಯೆಯಿಂದ ಬರಲಿರುವ ಅಕ್ಷತೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಸ್ವಾಗತಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಿಲ್ಲಾ ಸಮಿತಿ ಸಂಚಾಲಕ ಡಾ.ಕೃಷ್ಣ ಪ್ರಸನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಅಭಿಯಾನದ ಯಶಸ್ಸಿಗೆ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುವುದು. ಅಯೋಧ್ಯೆಯಿಂದ ಅಕ್ಷತೆ ನ.27 ರಂದು ಜಿಲ್ಲೆಗೆ ಆಗಮಿಸುವ ಅಕ್ಷತೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ 12 ಗಂಟೆಗೆ ಸ್ವಾಗತಿಸಿ ಬಳಿಕ ದೇವಸ್ಥಾನಕ್ಕೆ ಕೊಂಡೊಯ್ಯುವ ಕಾರ್ಯಕ್ರಮ ನಡೆಯಲಿದೆ. ಬಳಿಕ ಅಕ್ಷತೆಯನ್ನು ಶ್ರೀ ರಾಮನ ಪ್ರತಿಷ್ಠಾ ಪತ್ರಕದ ಜೊತೆಗೆ ಜಿಲ್ಲೆಯ ಪ್ರತೀ ಹಿಂದೂ ಮನೆಗೂ ವಿತರಿಸುವ ಯೋಜನೆ ಮಾಡಲಾಗುವುದು. ಜ.1 ರಿಂದ 15 ರ ತನಕ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಜ.7 ರಂದು ಮಹಾಸಂಪರ್ಕ ಅಭಿಯಾನ ನಡೆಯಲಿದೆ ಎಂದು ತಿಳಿಸಿದ ಅವರು ಶ್ರೀರಾಮನ ಪ್ರಾಣಪ್ರತಿಷ್ಠೆ ಸಂದರ್ಭ ಪ್ರತೀ ಹಿಂದೂ ಮನೆಯಲ್ಲಿ ಐದು ದೀಪಗಳನ್ನು ಹಚ್ಚುವ ಜತೆಗೆ ಪ್ರತೀ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಶ್ರೀ ರಾಮ ತಾರಕ ಮಂತ್ರ ಜಪದೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮೋಹನ್‌ದಾಸ್ ಕಾಣಿಯೂರು, ಬೆಟ್ಟ ಜನಾರ್ದನ, ಯುವರಾಜ್ ಪೆರಿಯತ್ತೋಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here