ಸಂಘದ ವತಿಯಿಂದ ನ.30ರಂದು ಅಭಿನಂದನೆ, ಬೀಳ್ಕೊಡುಗೆ
ಉಪ್ಪಿನಂಗಡಿ: ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಉಪ್ಪಿನಂಗಡಿ ಇಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಕ್ಲೇರಿ ವೇಗಸ್ ಅವರು ನ.30ರಂದು ಸೇವಾ ನಿವೃತ್ತಿ ಹೊಂದಲಿದ್ದು, ಅಂದು ಸಂಘದ ವತಿಯಿಂದ ಅವರಿಗೆ ಅಭಿನಂದನೆ ಮತ್ತು ಬೀಳ್ಕೊಡುಗೆ ಸಮಾರಂಭ ನಡೆಯಲಿದೆ.
ಪೂರ್ವಾಹ್ನ 11:30ಕ್ಕೆ ಸಂಘದ ಕಚೇರಿಯಲ್ಲಿರುವ ಸಂಗಮ ಸಭಾ ಭವನದಲ್ಲಿ ಸಂಘದ ಅಧ್ಯಕ್ಷರಾದ ಕೆ.ವಿ. ಪ್ರಸಾದ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸನ್ಮಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಉಪವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ಶ್ರೀಮತಿ ತ್ರಿವೇಣಿ ರಾವ್ ಹಾಗೂ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಮಾಜಿ ಅಧ್ಯಕ್ಷರಾದ ಕೆ. ವೆಂಕಟ್ರಮಣ ಭಟ್ ಪೆಲಪ್ಪಾರು ಭಾಗವಹಿಸಲಿದ್ದಾರೆ.
ಕೃಷಿಕರಾದ ಜೋನ್ ವೇಗಸ್ ಹಾಗೂ ಶಿಕ್ಷಕಿಯಾದ ಎವ್ಲಿನ್ ಡಿಸೋಜ ಅವರ ಪುತ್ರಿಯಾಗಿರುವ ಶ್ರೀಮತಿ ಕ್ಲೇರಿ ವೇಗಸ್ ಅವರು ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದಿದ್ದು, 1987 ರಂದು ದಿನ ಕೂಲಿ ನೌಕರರಾಗಿ ಗುಮಾಸ್ತ ಹುದ್ದೆಗೆ ಉಪ್ಪಿನಂಗಡಿಯ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಸೇರಿದ್ದರು. 1990ರಲ್ಲಿ ಖಾಯಂ ನೌಕರೆಯಾಗಿ ನೇಮಕಗೊಂಡ ಇವರು ಬಳಿಕ ವಿವಿಧ ವಿಭಾಗಗಳಲ್ಲಿ ವಿವಿಧ ಹುದ್ದೆಗಳಿಗೆ ಪದೋನ್ನತಿ ಹೊಂದಿ ಕೆಲಸ ನಿರ್ವಹಿಸಿದ್ದರು. 2020 ಜುಲೈ 1ರಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ಪದೋನ್ನತಿ ಹೊಂದಿದ್ದರು.
ಎಂಜಿನಿಯರ್ ಆಗಿರುವ ಪುತ್ರ ರೋವಿನ್ ಪ್ರತಾಪ್ ಡೇಸಾ ಹಾಗೂ ಸೊಸೆ ಮರಿಯ ಪ್ರೀಮಲ್ ಡಿಕುನ್ನಾ ಮತ್ತು ಮೊಮ್ಮಗ ರೈಡನ್ ಮಿಕೆಲ್ ಡೇಸಾ ಬೆಂಗಳೂರಿನಲ್ಲಿದ್ದು, ಪುತ್ರಿ ರೀಮಾ ರೋಸ್ ಡೇಸಾ, ಅಳಿಯ ರೀವನ್ ಡಿಕುನ್ನಾ, ಮೊಮ್ಮಗಳು ರೀಝಲ್ ಎಮೆಲಿನ್ ಡಿಕುನ್ನಾ ಮಸ್ಕತ್‌ನಲ್ಲಿ ನೆಲೆಸಿದ್ದಾರೆ. ಶ್ರೀಮತಿ ಕ್ಲೇರಿ ವೇಗಸ್ ಅವರು ಕೆಎಸ್ಸಾರ್ಟಿಯ ನಿವೃತ್ತ ಚಾಲಕರಾಗಿರುವ ಪತಿ ಮೈಕಲ್ ರೊನಾಲ್ಡ್ ಡೇಸಾರವರೊಂದಿಗೆ ಪುತ್ತೂರಿನ ಪಡೀಲ್‌ನಲ್ಲಿರುವ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.