ಬಜರಂಗದಳ ಮುಖಂಡ ಭರತ್ ಕುಮ್ಡೇಲುಗೆ ನ್ಯಾಯಾಂಗ ಬಂಧನ

0

ಪುತ್ತೂರು: ಎಸ್ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಮತ್ತು ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಂಟ್ವಾಳದ ಬಜರಂಗದಳ ಮುಖಂಡ ಭರತ್ ಕುಮ್ಡೇಲು ಮಂಗಳೂರು ಕೋರ್ಟಿಗೆ ಹಾಜರಾಗಿದ್ದಾನೆ ಎಂದು ತಿಳಿದುಬಂದಿದೆ.

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ನೇ ವರ್ಷದಲ್ಲಿ ಕಲಾಯಿ ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಅ.ಕ್ರ: 169/2017 500: 143, 147, 148, 447, 448, 302. 120(ಬಿ), 201 ಜೊತೆಗೆ 149 ಐಪಿಸಿ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಭರತ್ ಕುಮ್ಡೇಲ್‌ ಅ.10ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು ಇಲ್ಲಿಗೆ ಹಾಜರಾಗಿದ್ದು ನ್ಯಾಯಾಲಯವು ಆರೋಪಿಗೆ ಅ.25ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

2017ರಲ್ಲಿ ಕೊಲೆಯಾಗಿದ್ದ ಎಸ್ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಮತ್ತು ಇತ್ತೀಚೆಗೆ ನಡೆದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಲ್ಲಿ ಭರತ್ ಕುಮ್ಡೇಲು ಪ್ರಮುಖ ಆರೋಪಿಯಾಗಿದ್ದ. ಅಶ್ರಫ್ ಕಲಾಯಿ ಕೊಲೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಆಗಿ ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆರೋಪಿಗಳು ಪ್ರತಿ ತಿಂಗಳು ವಿಚಾರಣೆಗೆ ಹಾಜರಾಗಬೇಕಿದ್ದು ಈ ನಡುವೆ ಅಬ್ದುಲ್ ರಹಿಮಾನ್ ಕೊಲೆಯಾದ ಬಳಿಕ ಕೋರ್ಟಿಗೆ ಹಾಜರಾಗದೆ ಭರತ್ ತಪ್ಪಿಸಿಕೊಂಡಿದ್ದ. ಕಳೆದ 3-4 ತಿಂಗಳಲ್ಲಿ ವಿಚಾರಣೆಗೆ ಹಾಜರಾಗದ ಕಾರಣ ಕೋರ್ಟ್ ವಾರೆಂಟ್ ಹೊರಡಿಸಿತ್ತು.‌

ಅಬ್ದುಲ್ ರಹಿಮಾನ್ ಕೊಲೆ ಹಿನ್ನೆಲೆಯಲ್ಲಿ ಭರತ್ ತಲೆಮರೆಸಿಕೊಂಡಿದ್ದು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇತ್ತೀಚೆಗೆ ಎಸ್ಪಿ ಡಾ.ಅರುಣ್ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಎಲ್ಲ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಕೇಸು ದಾಖಲಿಸಿದ್ದರು. ಅಶ್ರಫ್ ಕಲಾಯಿ ಪ್ರಕರಣದಲ್ಲಿ ವಾರೆಂಟ್ ಮತ್ತು ಹೆಚ್ಚುವರಿ ಕೋಕಾ ಕೇಸು ಬಿದ್ದ ಹಿನ್ನೆಲೆಯಲ್ಲಿ ಭರತ್ ಕುಮ್ಡೇಲು ಈಗ ಮಂಗಳೂರಿನ ಜಿಲ್ಲಾ ಕೋರ್ಟಿಗೆ ಶರಣಾಗಿದ್ದಾರೆ.

LEAVE A REPLY

Please enter your comment!
Please enter your name here