ದಕ್ಷಿಣ ಕರಾವಳಿಯ ಪಾರಂಪರಿಕ ಕ್ರೀಡೆ ಇದೇ ಮೊದಲ ಬಾರಿಗೆ ರಾಜ್ಯದ ಶಕ್ತಿ ಕೇಂದ್ರವಾದ ಬೆಂಗಳೂರಿನಲ್ಲಿ ಸಂಪನ್ನಗೊಂಡಿದೆ. ಪರಿಣಾಮವಾಗಿ ಕಂಬಳಕ್ಕಿರುವ ಜನಪ್ರಿಯತೆ, ಅದರ ಹಿಂದಿರುವ ಪರಿಶ್ರಮ, ಪಾರಂಪರಿಕ ಕ್ರೀಡೆಯಾಗಿ ಅದು ಉಳಿದು, ಬೆಳೆದು ಬರುವಲ್ಲಿ ಕಾರಣಕರ್ತವಾದ ಸಂಗತಿಗಳು ಹಾಗೂ ಆ ಕ್ರೀಡೆಯ ಬಗೆಗಿನ ಜನರ ಭಾವನೆಗಳು ನೇರ ಮುಖ್ಯಮಂತ್ರಿಯಾದಿಯಾಗಿ ಆಳುವ ಸರ್ಕಾರದ ಅರಿವಿಗೆ ಬರುವಂತಾಗಿದೆ. ಎಲ್ಲೋ ಉಡುಪಿ-ಮಂಗಳೂರು ಭಾಗದಲ್ಲಿ ನಡೆಯುವ ಕಂಬಳವೊಂದಕ್ಕೆ ಆಗಮಿಸಿ ಸಚಿವರುಗಳೋ, ಆಡಳಿತಶಾಹಿಗಳೋ ಹತ್ತು ಹದಿನೈದು ನಿಮಿಷ ಉಪಸ್ಥಿತರುರುವುದಕ್ಕೂ, ತಮ್ಮ ಕಣ್ಣಮುಂದೆಯೇ ನಡೆಯುವ ಜಾನಪದ ಹಬ್ಬಕ್ಕೆ ಸಾಕ್ಷಿಯಾಗುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ.
ಈ ಬಾರಿಯ ಕಂಬಳ ಈಕ್ಷಿಸಿದ ಮುಖ್ಯಮಂತ್ರಿಗಳು ಇನ್ನು ಪ್ರತಿವರ್ಷವೂ ಬೆಂಗಳೂರಿನಲ್ಲಿ ಕಂಬಳ ನಡೆಯಲಿ ಎನ್ನುವುದರ ಮೂಲಕ ಕೋಣಗಳ ಓಟಕ್ಕೆ ಬೆಂಬಲ ಸೂಚಿಸಿದ್ದಾರೆ. ದಿನ ಬೆಳಗಾದರೆ ಅವರಿವರನ್ನು ಟೀಕಿಸುತ್ತಾ, ಪರಸ್ಪರ ಬೈದಾಡುತ್ತಾ ತಮ್ಮ ದಿನವನ್ನು ಸಂಪನ್ನಗೊಳಿಸುವ ರಾಜಕೀಯ ನೇತಾರರನ್ನು ಕಂಬಳ ಒಂದಾಗಿಸಿವೆ. ಒಂದೇ ವೇದಿಕೆಯನ್ನೇರಿದರೂ ಕನಿಷ್ಟ ಒಂದೆರಡಾದರೂ ಟಾಂಗ್ ಕೊಡದೆ ಆತ್ಮತೃಪ್ತಿಯನ್ನು ಕಾಣದ ಮಂದಿ ಕಂಬಳದ ವಿಷಯದಲ್ಲಿ ಸಹಮತ ತೋರಿದ್ದಾರೆ. ಕಾಂಗ್ರೆಸ್, ಭಾಜಪ, ಜನತಾ ಪಕ್ಷಗಳೆಂಬ ಬೇಧವಿಲ್ಲದೆ ಎಲ್ಲರೂ ಕಂಬಳಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕಂಬಳದಲ್ಲಿ ಕೋಣಗಳು ಎಷ್ಟು ಜನಪ್ರಿಯತೆ ಪಡೆದವೋ, ಕಂಬಳವೆಂಬ ಕ್ರೀಡೆಯೂ ಅಷ್ಟೇ ಮನ್ನಣೆಗೆ ಪಾತ್ರವಾಗಿದೆ.
ತನ್ನೂರನ್ನು ಮೆರೆಸುವ ಹಂಬಲವುಳ್ಳ ನಾಯಕನಿದ್ದಾಗ ಬೆಂಗಳೂರು ಕಂಬಳದಂತಹ ಕಾರ್ಯಗಳು ಸಾಕಾರಗೊಳ್ಳುತ್ತವೆ. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಕಂಬಳದ ಆಯೋಜನೆಯ ಪ್ರಮುಖ ರೂವಾರಿ. ಎಷ್ಟೇ ಕಷ್ಟವಾದರೂ ಬೆಂಗಳೂರು ಕಂಬಳ ಮಾಡಿಯೇ ತೀರುತ್ತೇನೆಂದು ಹಠ ತೊಟ್ಟು ಸಾಧಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ಹಿಂದೆ ಸದನದಲ್ಲಿ ತುಳುವಿನಲ್ಲಿಯೇ ಮಾತನಾಡಿ ಶಾಸಕ ರೈ ರಾಜ್ಯದ ಗಮನ ಸೆಳೆದಿದ್ದರು. ತುಳುವಿಗೆ ಸ್ಥಾನಮಾನ ಕೊಡಿಸುವ ನೆಲೆಯಲ್ಲಿ ಅವರ ಪ್ರಯತ್ನ ಸಾಗುತ್ತಲೇ ಇದೆ. ಅದರ ಮುಂದುವರಿದ ಭಾಗವಾಗಿ ಈಗ ಕಂಬಳ ನಡೆದಿದೆ. ಹಾಗಾಗಿ ಕಂಬಳದೊಂದಿಗೆ ತುಳು ಭಾಷೆಯೂ ಈಗ ರಾಜಧಾನಿಯಲ್ಲಿ ಉನ್ನತ ಸ್ಥಾನಕ್ಕಾಗಿ ಲಂಗರು ಹಾಕಿ ಕುಳಿತಿದೆ.
ಕಾರ್ಯಕ್ರಮ ಆಯೋಜನೆಯಲ್ಲೂ ಅತ್ಯಂತ ಜಾಣ ನಡೆಯನ್ನು ಅಶೋಕ್ ಕುಮಾರ್ ರೈ ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ನೇತಾರರನ್ನೆಲ್ಲ ಒಂದು ಕಾರ್ಯಕ್ರಮದಲ್ಲಿ, ಭಾಜಪದವರನ್ನೆಲ್ಲ ಮತ್ತೊಂದು ಕಾರ್ಯಕ್ರಮದಲ್ಲಿ ಜೋಡಿಸಿ ತಾನು ಕಾಂಗ್ರೆಸ್ ಶಾಸಕನಾದರೂ, ಇಬ್ಬರನ್ನೂ ಸಮಾನವಾಗಿ ಸ್ವೀಕರಿಸುವ ಭಾವವನ್ನು ತೋರಿದ್ದಾರೆ. ಆ ವೇದಿಕೆಯಲ್ಲಿ ಇವರನ್ನು, ಈ ವೇದಿಕೆಯಲ್ಲಿ ಅವರನ್ನು ಬೈದಾಡದ ಸನ್ನಿವೇಶವನ್ನು ಸೃಷ್ಟಿಸಿ ಯಶಸ್ವಿಯಾಗಿದ್ದಾರೆ. ಹಾಗಾಗಿಯೇ ಎರಡೂ ವೇದಿಕೆಗಳಲ್ಲಿ ಕಂಬಳವಷ್ಟೇ ವಿಜ್ರಂಭಿಸಿದೆ.
ಜತೆಗೆ, ಬೆಂಗಳೂರಿನಲ್ಲಿ 40 ಎಕರೆ ಜಾಗವನ್ನು ಕಂಬಳಕ್ಕಾಗಿ ಮೀಸಲಿರಿಸುವುದಕ್ಕೆ ಪ್ರಯತ್ನ ಮಾಡುವುದಾಗಿ ಅಶೋಕ್ ಕುಮಾರ್ ರೈ ಎಲ್ಲರ ಮುಂದೆಯೇ ಘೋಷಿಸಿದ್ದಾರೆ. ಸಹಜವಾಗಿಯೇ ಅಲ್ಲಿದ್ದವರೆಲ್ಲರೂ ಬೆಂಬಲ ಸೂಚಿಸಿದ್ದಾರೆ. ಬಹುತೇಕ ಅದು ಕಾರ್ಯರೂಪಕ್ಕೆ ಬರುವ ದಿನಗಳು ದೂರದಲ್ಲಿಲ್ಲ. ಪಟ್ಟು ಹಿಡಿದು, ಸ್ಪಷ್ಟ ಯೋಚನೆಯೊಂದಿಗೆ ಕಾರ್ಯತತ್ಪರರಾಗುವುದು ಹೇಗೆ ಎಂಬುದನ್ನು ಅವರು ಕಾಣಿಸಿದ್ದಾರೆ.
ಕರ್ನಾಟಕದಲ್ಲಿ ಹತ್ತು ಹಲವು ಸಂಸ್ಕೃತಿಗಳಿವೆ. ಭಾಷಾ ವೈವಿಧ್ಯಗಳಿವೆ. ಆಚಾರ ವಿಚಾರಗಳಿವೆ. ಆದರೆ ಆಯಾ ಊರಿನ ನೇತಾರರು ತಮ್ಮ ತಮ್ಮ ಉನ್ನತಿಕೆಯನ್ನು ರಾಜ್ಯದ ಎದುರು ಪ್ರಸ್ತುತಪಡಿಸುವ ಪ್ರಯತ್ನ ನಡೆಸಬೇಕು. ಊರು, ಕಲೆ, ಕ್ರೀಡೆ ಇವುಗಳೆಲ್ಲವೂ, ಸ್ವಲ್ಪ ಬುದ್ಧಿವಂತಿಕೆ ಕಾಣಿಸಿದರೆ ಪಕ್ಷಾತೀತವಾಗಿ ಜನಮನ್ನಣೆಗೆ, ಆಡಳಿತ ವ್ಯವಸ್ಥೆಯ ಪ್ರೀತಿಗೆ ಕಾರಣವಾಗುತ್ತವೆ. ಮೈಸೂರು ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಕಂಸಾಳೆ, ಡೊಳ್ಳು ಕುಣಿತ, ಸೋಮನ ಕುಣಿತ, ಸುಗ್ಗಿ ಕುಣಿತ, ಉತ್ತರ ಕರ್ನಾಟಕದ ಲಾವಣಿ, ಕೃಷ್ಣ ಪಾರಿಜಾತ, ಕರಡಿ ಮಜಲು, ಜಗ್ಗಹಲಿಗೆ ಕುಣಿತ, ದಕ್ಷಿಣ ಕನ್ನಡದ ಭೂತಾರಾಧನೆ, ಕೊಡಗಿನ ಬೋಲಕ್ ಆಟ್, ಉಮ್ಮಟ್ ಆಟ್ ಅಲ್ಲದೆ ವೀರಗಾಸೆ, ತೊಗಲು ಬೊಂಬೆಯಾಟ, ನಾಗಮಂಡಲ, ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ ಹೀಗೆ ನಾನಾ ಬಗೆಯ ಕಲೆ – ಸಂಸ್ಕೃತಿ, ಕ್ರೀಡೆಗಳನ್ನು ರಾಜಧಾನಿಗೆ ಒಯ್ಯುವ ಕಾರ್ಯ ಆಗಬೇಕಿದೆ. ಅದಾದಾಗ ಮಾತ್ರ ಅವುಗಳ ಬೆಳವಣಿಗೆಗೆ ರಾಜಾಶ್ರಯ ದೊರಕುವುದಕ್ಕೆ ಸಾಧ್ಯ. ಅದಲ್ಲವಾದರೆ ಅಂತಹ ನೃತ್ಯ ಕಲೆಗಳು, ಪಾರಂಪರಿಕ ಸಂಗತಿಗಳು ಶಾಲಾ ಕಾಲೇಜು ವಾರ್ಷಿಕೋತ್ಸವಕ್ಕಷ್ಟೇ ಸೀಮಿತಗೊಳ್ಳುತ್ತವೆ. ಹಾಗೆ ನೋಡಿದರೆ ಕರಾವಳಿಯ ಯಕ್ಷಗಾನ ತಕ್ಕಮಟ್ಟಿಗೆ ರಾಜ್ಯ, ರಾಷ್ಟ್ರವನ್ನೂ ಮೀರಿ ಬೆಳೆಯುತ್ತಿರುವುದು ಸಂತಸದ ವಿಚಾರ.
ಇಂತಹ ಕ್ರೀಡೆ, ಸಂಸ್ಕೃತಿಗಳೆಲ್ಲ ಗಮನ ಸೆಳೆಯಬೇಕಾದರೆ ಅದನ್ನು ಭರ್ಜರಿಯಾಗಿಯೇ ಆಯೋಜನೆ ಮಾಡಬೇಕಾದದ್ದು ಮುಖ್ಯ. ಹೇಗೆ ಕಂಬಳಕ್ಕೆ ಭರಪೂರ ಸಿದ್ಧತೆಗಳಾಗಿದ್ದವೋ, ಕರಾವಳಿಯ ಆಹಾರ ಮೇಳದಂತಹ ಆಕರ್ಷಣೆಗಳೂ ಜತೆಗೂಡಿದ್ದವೋ ಅದೇ ತೆರನಾಗಿ, ಆಯೋಜಿಸುವ ಪ್ರತಿಯೊಂದು ಕಾರ್ಯಕ್ರಮವೂ ಗಮನ ಸೆಳೆಯುವಂತಾಗಬೇಕು. ಕೇವಲ ಮಾಡಿದ್ದೇವೆ ಅನ್ನುವುದಕ್ಕಷ್ಟೇ ಮೀಸಲಾದರೆ ಅದರಿಂದ ಯಾವ ಪ್ರಯೋಜನವೂ ಆಗಲಾರದು.
ಇವೆಲ್ಲ ಆಗುವುದಕ್ಕೆ ಇಚ್ಚಾಶಕ್ತಿ, ನಿಜ ಪ್ರೀತಿಯನ್ನು ನಾಯಕರು ಬೆಳೆಸಿಕೊಳ್ಳಬೇಕಿದೆ. ಕೇವಲ ಕೆಸರೆರಚಾಟವಷ್ಟೇ ರಾಜಕೀಯ ಅಂದುಕೊಳ್ಳುತ್ತಾ ಕುಳಿತರೆ ಮುಂದಿನ ದಿನಗಳಲ್ಲಿ ಯುವಸಮೂಹದ ವಿಶ್ವಾಸಗಳನ್ನು ಕಳೆದುಕೊಳ್ಳಬೇಕಾದೀತು. ಪ್ರತಿಯೊಬ್ಬ ಶಾಸಕನೂ, ಪ್ರತಿಯೊಬ್ಬ ಸಂಸದನೂ ತನ್ನ ಕ್ಷೇತ್ರದಲ್ಲಿ ’ಹೀರೋ’ ಆಗಿ ಮಿಂಚಿದರೆ ಮಾತ್ರ ಮುಂದಿನ ದಿನಗಳ ರಾಜಕೀಯದಲ್ಲಿ ಉಳಿದುಕೊಳ್ಳಬಹುದು. ಅದಲ್ಲವಾದರೆ ಹೈಕಮಾಂಡಿಗೂ ಬೇಡವಾಗಿ ಯಾವ ಪಕ್ಷದವರು ತನ್ನನ್ನು ಸೇರಿಸಿಕೊಳ್ಳುತ್ತಾರೆ ಅಂತ ರಸ್ತೆ ಬದಿಯಲ್ಲಿ ಬಾಡಿಗೆ ವಾಹನಗಳಿಗೆ ಕೈಹಿಡಿಯುತ್ತಾ ನಿಂತಂತೆ ಕಾಯುವ ಸ್ಥಿತಿ ಅನೇಕ ರಾಜಕಾರಣಿಗಳಿಗೆ ಒದಗಿಬಂದೀತು!
ಇಂದು ರಾಜಕೀಯದಲ್ಲಿ ಜನಮನ ಸೆಳೆಯುತ್ತಿರುವ ಒಂದಷ್ಟು ಜನ ಶಾಸಕರು, ಸಂಸದರು ನಮ್ಮ ನಡುವಿನಲ್ಲಿದ್ದಾರೆ. ಹೊಸಬರಾದರೂ, ಮಾತು ತುಸು ಅತಿ ಅನಿಸುವಂತಿದ್ದರೂ, ಚಿಕ್ಕಬಳ್ಳಾಪುರದ ಪ್ರದೀಪ್ ಈಶ್ವರ್ ಈ ನೆಲೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಸಂಸದನಾಗಿ ಪ್ರತಾಪ್ ಸಿಂಹ ಅಭಿವೃದ್ಧಿಯ ಕಾರಣದಿಂದಲೇ ಮೈಸೂರನ್ನು ಆವರಿಸಿಕೊಳ್ಳುತ್ತಿದ್ದಾರೆ. ಇದೀಗ ಅಶೋಕ್ ಕುಮಾರ್ ರೈ ನಾನಾ ಬಗೆಯ ಕೆಲಸ ಕಾರ್ಯಗಳಿಂದ, ಜನರಿಗೆ ಬೇಕಾದ ಕೆಲಸಗಳನ್ನು ಮಾಡಿಸಿಕೊಡುವ ಕಾರಣದಿಂದ ಪುತ್ತೂರಿನಲ್ಲಿ ಹೆಸರುವಾಸಿಯಾಗಲಾರಂಭಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದೀಜಿಯವರೂ ಅಭಿವೃದ್ಧಿ ಮಂತ್ರದಿಂದಲೇ ಗುಜರಾತ್ ಮಾತ್ರವಲ್ಲದೆ ರಾಷ್ಟ್ರವನ್ನೂ ಸಮ್ಮೋಹನಗೊಳಿಸಿರುವುದು ಕಣ್ಣ ಮುಂದಿರುವ ಉತ್ಕೃಷ್ಟ ನಿದರ್ಶನವೆನಿಸಿದೆ. ರಾಜಕೀಯಕ್ಕೆ ಅಡಿಯಿಡುವವರು ಇಂತಹವರನ್ನು ಗಮನಿಸಬೇಕು. ಇನ್ನೂ ಓಬಿರಾಯನ ಕಾಲದ ಕಾರ್ಟೂನಿನಂತೆ ರಾಜಕೀಯ ನೇತಾರರಿದ್ದರೆ ಜನ ಒಪ್ಪುವುದು ಕಷ್ಟ. ಅಧಿಕಾರಕ್ಕೆ ಬಂದ ತಕ್ಷಣ ಹಣ ಬಾಚುವುದಕ್ಕೇ ಕುಳಿತರೆ ಈಗಿನ ಯುವಕರು ಸುಲಭಕ್ಕೆ ಗುರುತಿಸಿಬಿಡುತ್ತಾರೆ!
ಒಬ್ಬ ಶಾಸಕನೋ, ಮಂತ್ರಿಯೋ ಆಗುವ ವ್ಯಕ್ತಿ ಜನ ಮನ ಗೆಲ್ಲುವುದಕ್ಕೆ ಆದ್ಯತೆ ಕೊಡಬೇಕು. ಊರಿಗೆ ಉಪಕಾರವಾಗುವ ಸಂಗತಿಗಳಲ್ಲಿ ತೊಡಗಿಸಿಕೊಳ್ಳಬೇಕು. ಜನರಿಗೆ ಸ್ಪಂದಿಸುವಲ್ಲಿ ಮುಂಚೂಣಿಯಲ್ಲಿರಬೇಕು. ಭ್ರಷ್ಟಾಚಾರದಿಂದ ಗಾವುದ ದೂರವಿರಬೇಕು. ಸದಾ ಹೊಚ್ಚ ಹೊಸ ಆಲೋಚನೆಗಳೊಂದಿಗೆ ಜನರ ಮುಂದೆ ಕಾಣಿಸುತ್ತಿರಬೇಕು. ಕ್ರಿಯಾಶೀಲತೆ, ಸೃಜನಶೀಲತೆಗಳನ್ನು ನಿರಂತರವಾಗಿ ಕಾಪಾಡಿಕೊಂಡು ಬರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ’ಇದಾಗುತ್ತದೆ, ಮಾಡಬಹುದು’ ಅಂತಲೇ ಸದಾ ಹೇಳುವ ಮಂದಿಯನ್ನು ಜತೆಯಲ್ಲಿಟ್ಟುಕೊಂಡಿರಬೇಕು. ವಿನೂತನ ಕಲ್ಪನೆಗಳನ್ನು ತೋರಿಕೊಡುವ ಮನಸ್ಸುಗಳು ನಿತ್ಯ ತನ್ನ ಆಜುಬಾಜಿನಲ್ಲಿರುವಂತೆ ಎಚ್ಚರವಹಿಸಬೇಕು. ಏನು ಹೇಳಿದರೂ ’ಅದು ಭಾರೀ ಕಷ್ಟ’, ’ಆದಾಗ್ಲಿಕ್ಕಿಲ್ಲ’ ಅನ್ನುವವರನ್ನು ಮೊದಲು ಅಂತರ್ ರಾಜ್ಯ ಬಸ್ ಹತ್ತಿಸಿ, ಮತ್ತೆ ತನ್ನ ಬಳಿ ಸುಳಿಯದಂತೆ ನೋಡಿಕೊಳ್ಳಬೇಕು. ಹಾಗಾದಾಗ ಪಕ್ಕದ ಕ್ಷೇತ್ರದ ಮತದಾರರೂ ’ಇಂತಹ ನಾಯಕ ನಮಗೆ ಸಿಗಬಾರದಿತ್ತೇ?’ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಿಟ್ಟುಕೊಳ್ಳುತ್ತಾರೆ. ಅದು ಒಬ್ಬ ನಾಯಕನ ನಿಜವಾದ ಸಾಧನೆ ಎನಿಸುತ್ತದೆ. ಆಗ ಓಡುವುದು ಕೋಣಗಳಾದರೂ ಗೆಲುವು ಆಯೋಜಿಸಿದವನಿಗೇ ದಕ್ಕುತ್ತದೆ!
ಬರಹ: ರಾಕೇಶ ಕುಮಾರ್ ಕಮ್ಮಜೆ
ಪ್ರಾಂಶುಪಾಲರು
ಅಂಬಿಕಾ ಮಹಾವಿದ್ಯಾಲಯ
ಪುತ್ತೂರು, ದಕ್ಷಿಣ ಕನ್ನಡ – 574201
9449102082