ಮೃತ ಬಾಲಕಿ ಕುಟುಂಬಕ್ಕೆ ರೂ.25ಲಕ್ಷ ಪರಿಹಾರ, ಗಾಯಾಳುಗಳ ಚಿಕಿತ್ಸೆ ವೆಚ್ಚ ಸರಕಾರ ನೀಡಲು ಆಗ್ರಹ
ಪುತ್ತೂರು: ಬನ್ನೂರು ಗ್ರಾ.ಪಂ ವ್ಯಾಪ್ತಿಯ ಸೇಡಿಯಾಪು ಎಂಬಲ್ಲಿ ಹೆಜ್ಜೇನು ಕಡಿದು ಬಾಲಕಿ ಮೃತಪಟ್ಟ ಘಟನೆ ಸಂಬಂಧಿಸಿ ಬನ್ನೂರು ಗ್ರಾ.ಪಂನಲ್ಲಿ ತುರ್ತು ಸಭೆ ನಡೆಸಿ ಘಟನೆಗೆ ಸಂದರ್ಭದಲ್ಲಿ ತಾಲೂಕು ಆಡಳಿತದಿಂದ ದೊರೆಯದ ಸ್ಪಂಧನೆ, ಆಂಬ್ಯುಲೆನ್ಸ್ ಸಂಚಾರಕ್ಕೆ ಕಿಡಿಗೇಡಿಗಳಿಂದ ತಡೆ ಉಂಟು ಮಾಡಿದ ಘಟನೆಯನ್ನು ಖಂಡಿಸಿದ್ದಾರೆ. ಆಂಬ್ಯುಲೆನ್ಸ್ ತಡೆ ಉಂಟು ಮಾಡಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳಿಗೆ ದೂರು ನೀಡುವುದು, ಮೃತ ಬಾಲಕಿ ಕುಟುಂಬಕ್ಕೆ ರೂ.25ಲಕ್ಷ ಪರಿಹಾರ ಮತ್ತು ಗಾಯಾಳುಗಳ ಆಸ್ಪತ್ರೆ ವೆಚ್ಚವನ್ನು ಸರಕಾರ ಭರಿಸುವಂತೆ ಆಗ್ರಹಿಸಿದ್ದಾರೆ.
ಸಭೆಯು ಅ.13ರಂದು ಅಧ್ಯಕ್ಷೆ ಸ್ಮಿತಾರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಘಟನೆಯ ಬಗ್ಗೆ ಪ್ರಸ್ತಾಪಿಸಿದ ಸದಸ್ಯರು, ಮೃತ ಬಾಲಕಿಯ ಕುಟುಂಬಕ್ಕೆ ರೂ.25ಲಕ್ಷ ಪರಿಹಾರ ನೀಡುವುದು, ಘಟನೆಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ ಪ್ರತ್ಯೂಷ್ ಹಾಗೂ ರಕ್ಷಣೆಗೆ ಬಂದ ನಾರಾಯಣರವರ ಆಸ್ಪತ್ರೆಯ ವೆಚ್ಚವನ್ನು ಸರಕಾರಿ ಭರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡವುದಾಗಿ ನಿರ್ಣಯ ಕೈಗೊಳ್ಳಲಾಗಿದೆ.
ಘಟನೆಯ ಸಂದರ್ಭದಲ್ಲಿ ತಾಲೂಕು ಆಡಳಿತದಿಂದ ಯಾವುದೇ ರೀತಿಯ ಸ್ಪಂಧನೆ ನೀಡದಿರುವ ಬಗ್ಗೆ ಸಭೆಯಲ್ಲಿ ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಾಲಕಿಯ ಮೃತದೇಹವನ್ನು ರಾತ್ರಿ ತರುವ ವೇಳೆ ಪೆರ್ನೆಯಲ್ಲಿ ಕೆಲವು ಕಿಡಿಗೇಡಿಗಳು ಆಂಬ್ಯುಲೆನ್ಸ್‌ಗೆ ಅಡ್ಡ ಬಂದು ದಾಂದಲೆ ನಡೆಸಿದ್ದಾರೆ. ಇದನ್ನು ಸಭೆಯಲ್ಲಿ ಆಂಬ್ಯುಲೆನ್ಸ್ ತಡೆ ಉಂಟು ಮಾಡಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳಿಗೆ ದೂರು ನೀಡುವುದಾಗಿ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ ಘಟನೆಯ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿ ಮಕ್ಕಳ ರಕ್ಷಣೆಗೆ ನಿಂತ ನಾರಾಯಣರವರನ್ನು ಅಭಿನಂದಿಸಿ, ಗೌರವಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಉಪಾಧ್ಯಕ್ಷ ಶೀನಪ್ಪ ಕುಲಾಲ್, ಸದಸ್ಯರಾದ ರಮಣಿ ಡಿ ಗಾಣಿಗ, ವಿಮಲ, ಶ್ರೀನಿವಾಸ ಪೆರ‍್ವೋಡಿ, ತಿಮ್ಮಪ್ಪ ಪೂಜಾರಿ, ಗಿರಿಧರ ಪಂಜಿಗುಡ್ಡೆ ಹಾಗೂ ರಾಘವೇಂದ್ರ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಮನ್ಮಥ ಅಜಿರಂಗಳ ಸ್ವಾಗತಿಸಿ, ಲೆಕ್ಕಸಹಾಯಕಿ ಜಯಂತಿ ವಂದಿಸಿದರು.