ಒಂದೇ ಸುತ್ತುಪೌಳಿಯೊಳಗೆ ಎರಡು ಗರ್ಭಗುಡಿ ಇರುವ ಪಾವನ ಕ್ಷೇತ್ರ- ಕಟೀಲ್
ಕಾಣಿಯೂರು: ಕ್ಷೇತ್ರದ ಹಿನ್ನಲೆಗಳು, ಇತಿಹಾಸ ಬಹಳ ಅದ್ಬುತವಾದುದು. ಹಲವಾರು ದೇವಾಲಯಗಳ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗವಹಿಸುವಂತಹ ಸೌಭಾಗ್ಯ ಸಿಕ್ಕಿದೆ. ಬರೆಪ್ಪಾಡಿಯ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪುಳೇಶ್ವರ ಕ್ಷೇತ್ರದಲ್ಲಿ ಒಂದೇ ಸುತ್ತುಪೌಳಿಯೊಳಗೆ ಎರಡು ಗರ್ಭಗುಡಿ ಇರುವುದು ಪಾವನ ಕ್ಷೇತ್ರವಾಗಿದೆ. ಹಾಗಾಗಿ ಇದೊಂದು ಕಾರಣಿಕ ಕ್ಷೇತ್ರವಾಗಿದೆ. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಪೂರ್ಣ ಸಹಕಾರವನ್ನು ನೀಡುತ್ತೇನೆ. ನನ್ನ ಇತೀ ಮಿತಿಯೊಳಗೆ ನಿಮ್ಮ ಜೊತೆ ಸೇರಿಕೊಳ್ಳುತ್ತೇನೆ. ಭಗವಂತನ ಇಚ್ಚೆಯಂತೆ ಕ್ಷೇತ್ರದ ಜೀರ್ಣೋದ್ದಾರ ಕಾರ್ಯ ಶೀಘ್ರದಲ್ಲಿ ನಡೆಯಲಿ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಡಿ ೧ರಂದು ಬರೆಪ್ಪಾಡಿ ಕ್ಷೇತ್ರದಲ್ಲಿ ನಡೆದ ಸುತ್ತುಪೌಳಿ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ನೆರವೇರಿಸಿ, ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ವಾಸ್ತು ಶಿಲ್ಪಿ ಪ್ರಸಾದ್ ಮುನಿಯಂಗಳ ಮಾತನಾಡಿ, ಗ್ರಾಮದ ಐಕ್ಯತೆಯಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಸುಂದರ ದೇವಸ್ಥಾನ ನಿರ್ಮಾಣವಾಗಬೇಕಾದರೆ ಸಾವಿರ ಮನಸ್ಸು ಬೇಕು. ದೇವರ ತೀರ್ಥದಲ್ಲಿ ವೈಜ್ಞಾನಿಕ ಶಕ್ತಿ ಇದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಬರೆಪ್ಪಾಡಿ ಕಾರಣಿಕ ಕ್ಷೇತ್ರವಾಗಿದೆ. ನಿಗದಿತ ಅವಽಯೊಳಗೆ ಈ ದೇವಾಲಯ ಪೂರ್ಣಗೊಳ್ಳಲಿ ಎಂದರು.
ಮಾಜಿ ಸಚಿವ, ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎಸ್. ಅಂಗಾರ ಮಾತನಾಡಿ, ಒಂದು ಕಾರ್ಯದ ಅನುಷ್ಠಾನಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಭಕ್ತಿಯ ಭಾವನೆ ಬರಬೇಕು. ಕ್ಷೇತ್ರದ ಅಭಿವೃದ್ಧಿ ದೃಷ್ಠಿಯಿಂದ ಪುತ್ತೂರು, ಕಡಬ, ಸುಳ್ಯ ತಾಲೂಕಿನ ಪ್ರತಿ ಮನೆಯಿಂದ ಒಂದು ಗೊನೆ ಅಡಿಕೆ ಸಂಗ್ರಹ ಮಾಡುವ ನಿಟ್ಟಿನಲ್ಲಿ ನಿಧಿ ಸಂಚಯನ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ನಿಗದಿತ ಸಮಯಕ್ಕೆ ಕ್ಷೇತ್ರವು ಜೀರ್ಣೋದ್ಧಾರಗೊಳ್ಳಲು ಊರಿನ ಎಲ್ಲ ಭಕ್ತರ ಸಹಕಾರ ಅಗತ್ಯ ಎಂದರು. ದೇವಸ್ಥಾನದ ಪ್ರಧಾನ ಅರ್ಚಕರು, ಅನುವಂಶೀಯ ಮೊಕ್ತೇಸರರಾದ ಜನೇಶ್ ಭಟ್ ಬರೆಪ್ಪಾಡಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ, ನಿಧಿ ಸಂಚಯನ ಕಾರ್ಯಕ್ರಮದ ಪುತ್ತೂರು ತಾಲೂಕು ಪ್ರಮುಖರಾದ ದಿನೇಶ್ ಮೆದು, ಸುಳ್ಯ ತಾಲೂಕು ಪ್ರಮುಖರಾದ ರಾಕೇಶ್ ರೈ ಕೆಡೆಂಜಿ, ಕಡಬ ತಾಲೂಕು ಪ್ರಮುಖರಾದ ಗಣೇಶ್ ಉದನಡ್ಕ, ಉದ್ಯಮಿ ಬಾಲಕೃಷ್ಣ ಕೊಯಕ್ಕುಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಪದಾಽಕಾರಿಗಳು, ಭಕ್ತರು ಉಪಸ್ಥಿತರಿದ್ದರು. ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಗಿರಿಶಂಕರ ಸುಲಾಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನಳಿನ್ ಕುಮಾರ್ ಮತ್ತೆ ಸಂಸದರಾಗಿ, ಸಚಿವರಾಗಿ ಬರಲಿ
ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಅವರು ಮುಂದಿನ ಬಾರಿಯೂ ಮತ್ತೆ ಸಂಸದರಾಗಿ, ಕೇಂದ್ರದಲ್ಲಿ ಸಚಿವರಾಗಲಿ.
ಪ್ರಸಾದ್ ಮುನಿಯಂಗಳ, ವಾಸ್ತು ಶಿಲ್ಪಿ