ರಾಮಕುಂಜ: ಜಮ್ಮು ಕಾಶ್ಮೀರದಲ್ಲಿ ನ.23ರಂದು ಉಗ್ರರ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ದಕ್ಷಿಣ ಕನ್ನಡ ಜಿಲ್ಲೆಯ ವೀರ ಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್‌ಗೆ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿಶ್ವೇಶ ದಳದ ವತಿಯಿಂದ ಗೌರವ ನಮನ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಡಿ.2ರಂದು ನಡೆಯಿತು.
ಹುತಾತ್ಮ ವೀರ ಯೋಧ ಕ್ಯಾ.ಪ್ರಾಂಜಲ್‌ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದ ಸಂಸ್ಥೆಯ ಕಾರ್ಯದರ್ಶಿ ಕೆ. ಸೇಸಪ್ಪರೈಯವರು ಮಾತನಾಡಿ, ರಾಷ್ಟಪತಿ ಸೇವಾ ಪುರಸ್ಕಾರ ಪಡೆದಿರುವ ಪ್ರಾಂಜಲ್‌ರವರ ದೇಶಪ್ರೇಮ, ತ್ಯಾಗ, ಎಲ್ಲಾ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ. ಪ್ರಾಂಜಲ್ ಈ ಮಣ್ಣಲ್ಲಿ ಮತ್ತೆ ಹುಟ್ಟಿ ಬರಲಿ ಎಂದು ಪ್ರಾರ್ಥಿಸಿದರು. ಸೇವಾ ಮಾಸ್ಟರ್ ಕಿಶೋರ್ ಕುಮಾರ್‌ರವರು ಹುತಾತ್ಮ ಸೈನಿಕ ಕ್ಯಾ. ಪ್ರಾಂಜಲ್‌ರವರ ಶೌರ್ಯದ ಬಾಲ್ಯಜೀವನ, ಸಮಾಜ ಸೇವಾ ಕಾರ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಾಲಾ ಮುಖ್ಯಗುರು ಗಾಯತ್ರಿ ಯು.ಎನ್, ಆಡಳಿತಾಧಿಕಾರಿ ಆನಂದ ಎಸ್.ಟಿ, ಗೈಡ್ ನಾಯಕಿಯರಾದ ಪ್ರೇಮ ಬಿ, ಮಲ್ಲಿಕಾ, ಸೇವಾ ಮಾಸ್ಟರ್ ರಾಘವ, ಬುಲ್ ಬುಲ್ ನಾಯಕಿಯರಾದ ಕವಿತಾ, ಸುನಂದ, ಸಂಧ್ಯಾ ಹಾಗೂ ಕಾವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವೀರ ಯೋಧ ಪ್ರಾಂಜಲ್‌ಗೆ ಗೌರವ ನಮನವನ್ನು ಸಲ್ಲಿಸಿದರು. ವಿದ್ಯಾರ್ಥಿ ಆದಿತ್ಯ ಎ.ಆರ್. ಭಟ್‌ರವರು ದೇಶ ಪ್ರೇಮವನ್ನು ಬಿಂಬಿಸುವ ದೇಶಭಕ್ತಿಗೀತೆಯನ್ನು ಹಾಡಿದರು.