ಪುತ್ತೂರು: ಪುತ್ತಿಲ ಪರಿವಾರ ಆರ್ಯಾಪು ಗ್ರಾಮ ಸಮಿತಿ ಇದರ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಲಕ್ಷ್ಮೀಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳು ಡಿ.3ರಂದು ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನೆರವೇರಿತು.
ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಹಿಂದೂ ಕಾರ್ಯಕ್ರಮ, ಆಚರಣೆ, ಸಂಪ್ರದಾಯಗಳಿಗೆ ವಿರೋಧ, ಸರಕಾರ ಪ್ರಾಯೋಜಿತ ಆದೇಶ, ಆಜ್ಞೆಗಳನ್ನು ಮಾಡಿಸುತ್ತಿದ್ದಾರೆ. ಹರಿದು ಹಂಚಿ ಹೋಗಿರುವ ಹಿಂದೂ ಸಮಾಜವನ್ನು ಒಂದು ಗೂಡಿಸಲು ಪ್ರಯತ್ನಿಸಿದರೆ ಕಾರ್ಯಕರ್ತರ ಗಡಿಪಾರು ಮಾಡುವ ಕೆಲಸ ಆಗುತ್ತಿದೆ. ಹಿಂದೂ ಸಮಾಜದ ಮೇಲೆ ನಿರಂತರ ಸವಾರಿ ಆಗುತ್ತದೆ. ಹೀಗಾಗಿ ಪ್ರತಿಯೊಬ್ಬ ಹಿಂದೂಗಳು ಯೋಚಿಸಬೇಕಾಗಿದೆ. ಮತಾಂದರ ಮೂಲಕ ಕಹಿ ಘಟನೆಗಳು ನಡೆಯುತ್ತಿದೆ. ಈ ಎಲ್ಲಾ ಸಂಘರ್ಷಗಳನ್ನು ಸಮಾಜಕ್ಕೆ ಸಮಾಜವೇ ಎದುರಿಸಿ ತಕ್ಕ ಉತ್ತರ ನೀಡಿದಾಗ ಭಯ ಮುಕ್ತ ವಾತಾವರಣ ನಿರ್ಮಾಣ ಸಾಧ್ಯ. ಕಟ್ಟೆಕಡೆಯ ವ್ಯಕ್ತಿಯೂ ಸಂತೋಷದಿಂದ ಜೀವನ ನಡೆಸಲು ಸಾಧ್ಯ. ಹಿಂದೂಗಳಾದ ನಾವೆಲ್ಲಾ ಒಂದಾಗಿ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಶಕ್ತಿ ಬಲಪಡಿಸಬೇಕು. ಧಾರ್ಮಿಕ ಕಾರ್ಯಕ್ರಮ, ಕ್ರೀಡಾಕೂಟಗಳ ಮೂಲಕ ಸಮಾಜ ಸಂಘಟಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಧಾರ್ಮಿಕ ಭಾಷಣ ಮಾಡಿದ ವಾರಿಣಿ ನಾಗರಾಜ್ ಮಾತನಾಡಿ, ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಿದ್ದ ಭಾರತ ವಿಶ್ಚ ಗುರುವಾಗುತ್ತಿದೆ. ಕಷ್ಟ-ನಷ್ಟಗಳಿಂದ ಸಾಗಿ ಬಂದ ಭಾರತ ಮತ್ತೆ ವಿಶ್ವ ಗುರುವಾಗುತ್ತಿದೆ. ಆಧುನಿಕತೆಯಲ್ಲಿ ಹಲವು ಬದಲಾವಣೆ ಕಂಡಿದ್ದೇವೆ. ಮಾತೆಯರು ಒಂದಾದಾಗ ದೇಶ ಬಲಿಷ್ಠವಾಗಲಿದೆ. ನಮ್ಮೆಲ್ಲರ ಭಾವನೆಗಳ ರಥ ಭಾರತವಾಗಲಿದೆ. ಮಹಿಳೆಯರು ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಕಾಲ ಕಳೆಯುವುದನ್ನು ಬಿಟ್ಟು ಮಕ್ಕಳಿಗೆ ಸಂಪ್ರದಾಯ ಆಚರಣೆಗಳ ಮಹತ್ವವನ್ನು ತಿಳಿಸಿ ಮುಂದಿನ ಪೀಲಿಗೆಗೆ ಕೊಂಡೊಯ್ಯವ ಕೆಲಸವಾಗಬೇಕು ಎಂದು ಹೇಳಿದ ಅವರು ಪುತ್ತಿಲ ಪರಿವಾರದ ಮೂಲಕ ಪುತ್ತೂರಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಶ್ರೀವಾಸ ಕಲ್ಯಾಣ ಕಾರ್ಯಕ್ರಮದಲ್ಲಿ ವೈಕುಂಠ ಸೃಷ್ಟಿಯಾಗಲಿದೆ ಎಂದರು.
ರಾಮಾಯಣದಲ್ಲಿ ರಾಮ, ಲಕ್ಷ್ಮಣರ ಜೊತೆ ಹನುಂತನಿದ್ದಂತೆ ಮೋದಿ, ಯೋಗಿಯವರಿಗೆ ಶಕ್ತಿಯಾಗಿ ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲರಿದ್ದಾರೆ. ಹನುಮಂತನ ಜೊತೆ ಕಪಿ ಸೇನೆಯಿದ್ದಂತೆ ಅರುಣ್ ಕುಮಾರ್ ಪುತ್ತಿಲರ ಹಿಂದೆ ಸಾವಿರಾರು ಸಂಖ್ಯೆಯಲ್ಲಿ ದೇವದುರ್ಲಬ ಕಾರ್ಯಕರ್ತೆರಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಅರುಣೋದಯವಾಗಬೇಕು ಎಂದು ವಾರಿಣಿ ನಾಗರಾಜ್ ಮಂಗಳಾದೇವಿ ಹೇಳಿದರು.
ಮುಖ್ಯ ಅತಿಥಿ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಮಾತನಾಡಿ, ಉತ್ತಮ ರೀತಿಯಲ್ಲಿ ಸಂಘಟನೆ. ಮಾದರಿಯಾಗಿ ನಡೆದಿದೆ. ಪರಿವಾರದ ಯುವಕರಿಂದ ಮಾತ್ರ ಯಶಸ್ಸು ಸಂಘಟನೆ. ಡಿ.9ರಂದು ವಿಟ್ಲದಲ್ಲಿ ಹಿಂದೂ ಚೈತನ್ಯ ಸಮಾವೇಶ ನಡೆಯಲಿದೆ. ಇದಕ್ಕೆ ಪೂರವಾಗಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ವಿಟ್ಲದ ತನಕ ಪಾದಾಯಾತ್ರೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರ ಮಂದಿ ಹಿಂದೂಗಳ ಸಮಾಗಮವಾಗಲಿದೆ. ಡಿ.24 ಹಾಗೂ 25ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಪ್ರಥಮ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದ್ದು ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು ಈ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸುವಂತೆ ಅವರು ವಿನಂತಿಸಿದರು.
ಪುತ್ತಿಲ ಪರಿವಾರ ಆರ್ಯಾಪು ಗ್ರಾಮ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ಸಂಟ್ಯಾರು ಅಧ್ಯಕ್ಷತೆ ವಹಿಸಿದ್ದರು. ಪುತ್ತಿಲ ಪರಿವಾರದ ಉಪಾಧ್ಯಕ್ಷ ಕೃಷ್ಣಪ್ರಸಾದ್ ಶೆಟ್ಟಿ, ಪ್ರಗತಿಪರ ಕೃಷಿಕ ಬಿ.ರಾಮ ಭಟ್ ಬಂಗಾರಡ್ಕ, ಪುತ್ತಿಲ ಪರಿವಾರದ ವಾಣಿ ಸುಬ್ರಹ್ಮಣ್ಯ ಬಲ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅರ್ಚಕ ಉದಯನಾರಾಯಣ ಕಲ್ಲೂರಾಯರವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿತು.
ಸನ್ಮಾನ:
ಕಾರ್ಯಕ್ರಮದಲ್ಲಿ ಅನ್ನದಾನ ಸೇವೆ ನೀಡಿದ್ದ ಕಾವ್ಯಶ್ರೀ ಲೋಕೇಶ್ ಬಲ್ಯಾಯರವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಸಮೀಕ್ಷಾ ವಳತ್ತಡ್ಕ ಪ್ರಾರ್ಥಿಸಿದರು. ಆರ್ಯಾಪು ಗ್ರಾ.ಪಂ ಸದಸ್ಯ ಸುಬ್ರಹ್ಮಣ್ಯ ಬಲ್ಯಾಯ ಸ್ವಾಗತಿಸಿದರು. ತಿಮ್ಮಪ್ಪ ನಾಯ್ಕ ಜಂಗಮುಗೇರು, ಪ್ರಶಾಂತ್ ಬಲ್ಯಾಯ ದೊಡ್ಡಡ್ಕ, ಕಾವ್ಯಶ್ರೀ ಲೋಕೇಶ್ ಬಲ್ಯಾಯ ದೊಡ್ಡಡ್ಕ, ಪ್ರಜ್ವಲ್ ಭಟ್ ಕುಂಜೂರುಪಂಜ, ಕುಶಾಲಪ್ಪ ಗೌಡ ಬಳಕ್ಕ, ಚಂದ್ರಿಕಾ ಸೇಸಪ್ಪ ಕುಲಾಲ್, ಸುದರ್ಶನ್ ಭಟ್ ಕಲ್ಲರ್ಪೆ ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ರಂಜಿತ್ ಶೆಟ್ಟಿ ವಂದಿಸಿ, ಶಶಿಕಾಂತ ಅಟ್ಲಾರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ಸಾವಿರಾರು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.