ವಿಟ್ಲ: ಪುತ್ತಿಲ ಪರಿವಾರ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ವಿಟ್ಲ ಇದರ ವತಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಹಾಗೂ ಬೃಹತ್ ಹಿಂದೂ ಚೈತನ್ಯ ಸಮಾವೇಶ, ಪುತ್ತೂರು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರನ ಸನ್ನಿಧಿಗೆ ಬೃಹತ್ ಪಾದಾಯಾತ್ರೆಯು ಡಿ.9ರಂದು ನಡೆಯಲಿದೆ ಎಂದು ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಮರುವಾಳರವರು ಹೇಳಿದರು.
ಅವರು ವಿಟ್ಲದಲ್ಲಿ ಡಿ.7ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಹಿಂದೂ ಸಮಾಜದ ಐಕ್ಯತೆಗೆ ಹಾಗೂ ಲೋಕಕಲ್ಯಾಣಾರ್ಥವಾಗಿ ಡಿ.9 ರಂದು ಮಧ್ಯಾಹ್ನ 2ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಗೆ ಪಾದಾಯಾತ್ರೆ ಹೊರಡಲಿದೆ. ಪಾದಾಯಾತ್ರೆಯು ಪುತ್ತೂರಿನಿಂದ ಕಬಕ ಮಾರ್ಗವಾಗಿ ವಿಟ್ಲ ತಲುಪಲಿದೆ. ವಿಟ್ಲ ಜೈನ ಬಸದಿಯ ಬಳಿಯಿಂದ ಸ್ವಾಮೀಜಿಗಳು ಹಾಗೂ ಗಣ್ಯರ ಕೂಡುವಿಕೆಯ ಮೂಲಕ ಪಾದಯಾತ್ರೆ ಮುಂದುವರೆಯಲಿದ್ದು, ನಾಲ್ಕು ಮಾರ್ಗದ ಮೂಲಕ ಕ್ಷೇತ್ರ ತಲುಪಲಿದೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಮಧ್ಯಾಹ್ನ 3ಗಂಟೆಯಿಂದ ಭಜನೆ ಆರಂಭಗೊಳ್ಳಲಿದೆ. ಸಾಯಂಕಾಲ 4ಗಂಟೆಯಿಂದ ವೇ|ಮೂ| ಉದಯೇಶ ಕೆದಿಲಾಯ ವಿಟ್ಲ ಇವರ ಪೌರೋಹಿತ್ಯದಲ್ಲಿ ಶ್ರೀ ಶನೈಶ್ಚರ ಪೂಜೆ ಪ್ರಾರಂಭಗೊಳ್ಳಲಿದೆ. ರಾತ್ರಿ ಪೂಜೆಯ ಪೂರ್ಣಾಹುತಿ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ‘ಭಕ್ತಿಭಾವ ಸಂಗಮ’ ನಡೆಯಲಿದೆ.
ಹಿಂದೂ ಚೈತನ್ಯ ಸಮಾವೇಶ:
ಸಾಯಂಕಾಲ ನಡೆಯುವ ಹಿಂದೂ ಚೈತನ್ಯ ಸಮಾವೇಶವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ವಿಟ್ಲ ಇದರ ಅಧ್ಯಕ್ಷರಾಗಿರುವ ನ್ಯಾಯವಾದಿ ಶ್ರೀಕೃಷ್ಣ ಕೇಪುರವರು ವಹಿಸಲಿದ್ದಾರೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಮಹಾಬಲೇಶ್ವರ ಸ್ವಾಮೀಜಿ, ವಿಟ್ಲ ಯೋಗೀಶ್ವರ ಮಠದ ಶ್ರೀ ರಾಜ್ ಗುರು ಯೋಗು ಶ್ರದ್ಧಾನಾಥಜೀ, ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ ಮೊದಲಾದವರು ಆಶೀರ್ವಚನ ನೀಡಲಿದ್ದಾರೆ. ಉಳಿದಂತೆ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ವಿಟ್ಲ ಇದರ ಅಧ್ಯಕ್ಷರಾದ ನ್ಯಾಯವಾದಿ ಶ್ರೀಕೃಷ್ಣ ಕೇಪು, ಸಂಚಾಲಕರಾದ ಸದಾಶಿವ ಅಳಿಕೆ, ಗೌರವಾಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಸೇರಾಜೆ, ಕೋಶಾಧಿಕಾರಿ ಮೋಹನ್ ಸೇರಾಜೆ ಉಪಸ್ಥಿತರಿದ್ದರು.