ಕುಂಬ್ರ: ಟಿಪ್ಪರ್ ಡ್ರೈವರ್ ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…!

0

ಪುತ್ತೂರು: ಕುಂಬ್ರದ ಮಾತೃಶ್ರೀ ಅರ್ಥ್ ಮೂವರ‍್ಸ್ ಸಂಸ್ಥೆಯಲ್ಲಿ ಟಿಪ್ಪರ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ ಬಾಗಲಕೋಟೆ ಬಾದಾಮಿ ಡಾಣಕಶಿರೂರು ಮೂಲದ ಹನುಮಂತ ಮಾದರ (22ವ) ಎಂಬವರನ್ನು ಕುಂಬ್ರದಲ್ಲಿ ಅವರು ವಾಸವಾಗಿದ್ದ ರೂಮ್‌ನಿಂದ ಕಿಡ್ನಾಪ್ ಮಾಡಲಾಗಿತ್ತು .ಈ ಕಿಡ್ನಾಪ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಕಿಡ್ನಾಪ್ ಆಗಿದ್ದ ಹನುಮಂತ ಮಾದರ ಎಂಬವರು ಆಗುಂಬೆ ಘಾಟ್‌ನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಎಸ್.ಐ ರವಿ ಬಿ.ಎಸ್‌ರವರ ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನು ಈಗಾಗಲೇ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.


ಕಿಡ್ನಾಪ್ ಪ್ರಕರಣದ ಸಾರಾಂಶ
ಬಾಗಲಕೋಟೆಯ ಡಾಣಕಶಿರೂರು ರೇಣವ್ವ ಮಾದರ ಮತ್ತು ಸುರೇಶರವರ ಮಗನಾಗಿರುವ ಹನುಮಂತ ಮಾದರ ಎಂಬವರ ಬಗ್ಗೆ ಶಿವಪ್ಪ ಮಾದರ ಎಂಬವರು ಹನುಮಂತನ ಮಾವ ಮಂಜುನಾಥ ಎಂಬವರಲ್ಲಿ ನಿನ್ನ ಅಕ್ಕನ ಮಗ ಹನುಮಂತ ನನ್ನ ಹೆಂಡತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದು ಅವನನ್ನು ಎಲ್ಲಿಗಾದರೂ ಕಳಿಸು ಎಂದು ಹೇಳಿದ್ದು ಅದರಂತೆ ಹನುಮಂತನು ದಕ್ಷಿಣ ಕನ್ನಡ ಜಿಲ್ಲೆಯ ಕುಂಬ್ರದಲ್ಲಿ ಜೆಸಿಬಿ ಕೆಲಸ ಮಾಡಿಕೊಂಡಿದ್ದ ಗೆಳೆಯ ಸಂತೋಷ್ ಗದ್ದಿಗೌಡ ಎಂಬವರ ಹತ್ತಿರ ಬಂದಿದ್ದರು. ನ.11 ರಂದು ಮಧ್ಯಾಹ್ನ ಶಿವಪ್ಪ ಎಂಬವರು ಮಂಜುನಾಥರಿಗೆ ಕರೆ ಮಾಡಿ ನಿನ್ನ ಅಕ್ಕನ ಮಗ ಸಿಕ್ಕಿದರೆ ಖಂಡಿತ ಬಿಡುವುದಿಲ್ಲ ಎಂದು ಹೇಳಿದ್ದು ಅಲ್ಲದೆ ಅದೇ ದಿನ ಸಂಜೆ 6.30 ಗಂಟೆಗೆ ಕುಂಬ್ರದ ಸಂತೋಷ್ ಎಂಬವರಿಗೆ ಕರೆ ಮಾಡಿ ಶಿವಪ್ಪ, ಮಂಜುನಾಥ, ದುರ್ಗಪ್ಪ ಮಾದರ ಎಂಬವರು ಕೆ.ಎ 26 ಬಿ 3833 ನಂಬ್ರದ ಮಹೇಂದ್ರ ಮ್ಯಾಕ್ಸಿಂ ವಾಹನದಲ್ಲಿ ಕುಂಬ್ರದ ಮಸೀದಿ ಬಳಿ ಇರುವ ರೂಮ್‌ನಿಂದ ಹನುಮಂತ ಮಾದರರವರನ್ನು ಪುತ್ತೂರು ಕಡೆಗೆ ಕರೆದುಕೊಂಡು ಹೋಗಿದ್ದರು ಎಂದು ಸಂತೋಷ್ ತಿಳಿಸಿದ್ದು ಆ ಬಳಿಕ ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ನ.19 ರಂದು ಬಾದಾವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹನುಮಂತ ಮಾದರರ ತಾಯಿ ರೇಣವ್ವ ಮಾದರ ಹಾಗೂ ಹನುಮಂತನ ಮಾವ ಮಂಜುನಾಥರವರು,ಹನುಮಂತ ಮನೆಗೆ ಬಾರದೆ ನಾಪತ್ತೆಯಾಗಿದ್ದು ಈ ಬಗ್ಗೆ ಹನುಮಂತನನ್ನು ಪತ್ತೆ ಮಾಡಿ ಶಿವಪ್ಪ, ದುರ್ಗಪ್ಪ, ಮಂಜುನಾಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರು.

ಚಿತ್ರ: ಹನುಮಂತ ಮಾದರ ಹನುಮಂತನನ್ನು ವಾಹನದಲ್ಲಿ ಕರೆದುಕೊಂಡು ಹೋಗಲು ಬಂದ ಮಂಜುನಾಥ, ಶಿವಪ್ಪ ಮತ್ತು ದುರ್ಗಪ್ಪ


ಆಗುಂಬೆ ಘಾಟ್‌ನಲ್ಲಿ ಕೊಲೆ ಮಾಡಿ ಬಿಸಾಡಿರುವ ಶಂಕೆ..?
ಹನುಮಂತ ನಾಪತ್ತೆಯಾಗಿರುವ ಬಗ್ಗೆ ಹನುಮಂತನ ತಾಯಿ ರೇಣವ್ವ ಹಾಗೂ ಮಾವ ಮಂಜುನಾಥರವರು ಪುತ್ತೂರು ಗ್ರಾಮಾಂತರ ಠಾಣೆಗೂ ನ.19 ರಂದು ದೂರು ನೀಡಿದ್ದರು. ಆ ಕ್ಷಣದಿಂದಲೇ ತನಿಖೆ ಮುಂದುವರಿಸಿದ ಪ್ರಭಾರ ಎಸ್.ಐ ರವಿ ಬಿ.ಎಸ್ ತಂಡವು ಪ್ರಕರಣವನ್ನು ಬೇಧಿಸುವಲ್ಲಿ ಸಫಲವಾಗಿತ್ತು. ಹನುಮಂತ ಮಾದರರವರನ್ನು ಆರೋಪಿಗಳು ಆಗುಂಬೆ ಘಾಟ್‌ನಲ್ಲಿ ಕೊಲೆ ಮಾಡಿ ಬಿಸಾಕಿರುವ ಶಂಕೆ ವ್ಯಕ್ತವಾಗಿದ್ದು ಈ ಬಗ್ಗೆ ಇಬ್ಬರು ಆರೋಪಿಗಳಾದ ಮಂಜುನಾಥ ಮತ್ತು ಶಿವಪ್ಪರವರನ್ನು ವಶಕ್ಕೆ ಪಡೆದುಕೊಂಡಿದ್ದು, ದುರ್ಗಪ್ಪ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.


ಕೆಲಸಕ್ಕೆ ಸೇರಿ ಐದು ದಿನಗಳಾಗಿತ್ತು
ಹನುಮಂತ ಮಾದರರವರು ಕುಂಬ್ರದ ಉದ್ಯಮಿ ಮೋಹನ್‌ದಾಸ್ ರೈ ಮಾಲಕತ್ವದ ಮಾತೃಶ್ರೀ ಅರ್ಥ್‌ಮೂವರ‍್ಸ್‌ನಲ್ಲಿ ಟಿಪ್ಪರ್ ಡ್ರೈವರ್ ಆಗಿ ಕೆಲಸಕ್ಕೆ ಸೇರಿ ಕೇವಲ 5 ದಿನಗಳಾಗಿತ್ತು. ಕಳೆದ 2 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಸಂತೋಷ್ ಎಂಬವರ ಪರಿಚಯದ ಮೇರೆಗೆ ಹನುಮಂತ ಮಾದರ ಕೆಲಸಕ್ಕೆ ಸೇರಿದ್ದರು ಎಂದು ಉದ್ಯಮಿ ಕುಂಬ್ರ ಮೋಹನ್‌ದಾಸ್ ರೈಯವರು ಸುದ್ದಿಗೆ ತಿಳಿಸಿದ್ದಾರೆ.


ಅನೈತಿಕ ಸಂಬಂಧವೇ ಕೊಲೆಗೆ ಕಾರಣವಾಯಿತಾ..?!
ಹನುಮಂತ ಮಾದರ ಎಂಬವರು ಶಿವಪ್ಪ ಮಾದರ ಎಂಬವರ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಸ್ವತಃ ಶಿವಪ್ಪ ಮಾದರರವರೇ ಆರೋಪಿಸಿದ್ದು ಈ ಬಗ್ಗೆ ಹನುಮಂತನ ಮಾವ ಮಂಜುನಾಥರಿಗೆ ಕರೆ ಮಾಡಿಯೂ ತಿಳಿಸಿದ್ದ ಎನ್ನಲಾಗಿದೆ. ಹನುಮಂತನನ್ನು ಎಲ್ಲಿಗಾದರೂ ಕಳಿಸು ಎಂದು ಹೇಳಿದ್ದ ಅಲ್ಲದೆ ಹನುಮಂತ ಕುಂಬ್ರಕ್ಕೆ ಬಂದ ಬಳಿಕವೂ ಮಂಜುನಾಥರಿಗೆ ಕರೆ ಮಾಡಿ ನಿನ್ನ ಅಕ್ಕನ ಮಗ ಸಿಕ್ಕಿದರೆ ಬಿಡುವುದಿಲ್ಲ ಎಂದು ತಿಳಿಸಿದ್ದ ಎನ್ನಲಾಗಿದೆ. ಅನೈತಿಕ ಸಂಬಂಧವೇ ಕೊಲೆಗೆ ಕಾರಣವಾಯಿತಾ ಎಂಬುದು ತನಿಖೆಯಿಂದ ಇನ್ನಷ್ಟೇ ಗೊತ್ತಾಗಬೇಕಾಗಿದೆ.


ಫೋಟೋ ತೆಗೆದು ಇಟ್ಟುಕೊಂಡಿದ್ದರು
ಹನುಮಂತನನ್ನು ಊರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಮಹೇಂದ್ರ ಮ್ಯಾಕ್ಸಿಂ ವಾಹನದಲ್ಲಿ ಬಂದ ಮಂಜುನಾಥ, ಶಿವಪ್ಪ ಮತ್ತು ದುರ್ಗಪ್ಪರವರ ಫೋಟೋವನ್ನು ಮೋಹನ್‌ದಾಸ ರೈಯವರು ತನ್ನ ಕೆಲಸದವರಲ್ಲಿ ಹೇಳಿ ಮೊಬೈಲ್‌ನಲ್ಲಿ ತೆಗೆಸಿ ಇಟ್ಟುಕೊಂಡಿದ್ದರು. ಈ ಫೋಟೋವೇ ಆರೋಪಿಗಳನ್ನು ಹಿಡಿಯಲು ಪೊಲೀಸರಿಗೆ ನೆರವಾಗಿತ್ತು ಎನ್ನಲಾಗಿದೆ. ತನ್ನ ಸಂಸ್ಥೆಯಲ್ಲಿ ಯಾರೇ ಕೆಲಸಕ್ಕೆ ಸೇರ್ಪಡೆಗೊಂಡರು ಅವರ ಫೋಟೋ ಮತ್ತು ದಾಖಲೆಗಳನ್ನು ತೆಗೆದಿಟ್ಟುಕೊಳ್ಳುತ್ತೇವೆ ಎಂದು ಮೋಹನ್‌ದಾಸ್ ರೈ ತಿಳಿಸಿದ್ದಾರೆ.


ಇಬ್ಬರು ಆರೋಪಿಗಳು ಅಂದರ್…!
ಹನುಮಂತ ಮಾದರರವರನ್ನು ಕುಂಬ್ರದಿಂದ ಮಹೇಂದ್ರ ಮ್ಯಾಕ್ಸಿಂ ವಾಹನದಲ್ಲಿ ಕರೆದುಕೊಂಡು ಹೋಗಿದ್ದ ಮಂಜುನಾಥ, ಶಿವಪ್ಪ ಹಾಗೂ ದುರ್ಗಪ್ಪರವರಲ್ಲಿ ಪೊಲೀಸರು ಈಗಾಗಲೇ ಮಂಜುನಾಥ ಮತ್ತು ಶಿವಪ್ಪರವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದುರ್ಗಪ್ಪನಿಗೆ ಪೊಲೀಸರು ಬಲೆ ಬೀಸಿದ್ದಾರೆ.


ಸ್ಥಳಕ್ಕೆ ಭೇಟಿ ನೀಡಿದ ಉದ್ಯಮಿ ಮೋಹನ್‌ದಾಸ ರೈ ಕುಂಬ್ರ
ಹನುಮಂತ ಮಾದರರವರನ್ನು ಕೊಲೆ ಮಾಡಿ ಬಿಸಾಕಲಾಗಿರುವ ಆಗುಂಬೆ ಘಾಟ್‌ನ ಪ್ರದೇಶಕ್ಕೆ ಕುಂಬ್ರ ಮಾತೃಶ್ರೀ ಅರ್ಥ್ ಮೂವರ‍್ಸ್ ಮಾಲಕ ಉದ್ಯಮಿ ಕುಂಬ್ರ ಮೋಹನ್‌ದಾಸ್ ರೈ ಹಾಗೂ ವಿನೋದ್ ಶೆಟ್ಟಿ ಮುಡಾಲ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here