ಕಡಬ: ಶಿಕ್ಷಣ ಎನ್ನುವುದು ಕೇವಲ ಮಾಹಿತಿಯನ್ನು ಒದಗಿಸುವ ಮಾಧ್ಯಮವಲ್ಲ. ಅದು ಮಕ್ಕಳಿಗೆ ಜೀವನದ ಮೌಲ್ಯಗಳನ್ನು ತಿಳಿಹೇಳುವ ಮೂಲಕ ಬದುಕನ್ನು ರೂಪುಗೊಳಿಸುವ ಪ್ರಕ್ರಿಯೆ ಎಂದು ಮಂಗಳೂರಿನ ಫಾದರ್ ಮುಲ್ಲರ್ಸ್ ಚಾರಿಟೇಬಲ್ ಸಂಸ್ಥೆಯ ಆದ್ಮಾತ್ಮಿಕ ನಿರ್ದೇಶಕ ವಂ|ರೊನಾಲ್ಡ್ ಲೋಬೋ ಅವರು ಅಭಿಪ್ರಾಯಪಟ್ಟರು.
ಅವರು ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಮಹಾಮಾರಿ ಬದುಕಿನಲ್ಲಿ ಎದುರಾಗುವ ಸಂಕಷ್ಟ ಮತ್ತು ಸವಾಲುಗಳನ್ನು ಯಾವ ರೀತಿ ಸಮರ್ಥವಾಗಿ ಎದುರಿಸಬಹುದು ಎನ್ನುವುದನ್ನು ನಮಗೆ ಕಲಿಸಿಕೊಟ್ಟಿದೆ. ಅದೇ ರೀತಿ ಶಿಕ್ಷಣವು ಕೂಡ ನಮಗೆ ಬದುಕನ್ನು ಸಮತೋಲನ ಚಿತ್ತದಿಂದ ಎದುರಿಸುವ ಪಾಠವನ್ನು ಕಲಿಸುವಂತಿರಬೇಕು. ಸೌಹಾರ್ದತೆ ಮತ್ತು ಸಹೋದರತ್ವದ ಮೂಲಕ ವಿಶ್ವಶಾಂತಿಯನ್ನು ಸ್ಥಾಪಿಸಲು ಶಿಕ್ಷಣವು ನೆರವಾಗಬೇಕು ಎಂದರು. ಅ‘ಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕ ವಂ| ಪ್ರಕಾಶ್ ಪೌಲ್ ಡಿ’ ಸೋಜಾ ಅವರು ನಮ್ಮೆಲ್ಲರಿಗೂ ಸಮಾನ ಪ್ರತಿಭೆ ಇಲ್ಲ, ಆದರೆ ನಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲು ನಮಗೆಲ್ಲರಿಗೂ ಸಮಾನ ಅವಕಾಶವಿದೆ. ದೊಡ್ಡ ಗುರಿ, ಜ್ಞಾನದ ಸಂಪಾದನೆ, ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನ ಎಂಬ ವಿಷಯಗಳನ್ನು ಅನುಸರಿಸಿದರೆ ನಾವು ಏನು ಬೇಕಾದರೂ ಸಾಧಿಸಬಹುದು ಎಂದರು.
ಸೈಂಟ್ ಜೋಕಿಮ್ ಚರ್ಚ್ನ ಪಾಲನಾ ಮಂಡಳಿಯ ಕಾರ್ಯದರ್ಶಿ ಜೆಸಿಂತಾ ವೇಗಸ್, ಸೈಂಟ್ ಆನ್ಸ್ ಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಸತೀಶ್ ನಾಕ್ ಮೇಲಿನಮನೆ, ಸೈಂಟ್ ಜೋಕಿಮ್ ಪ.ಪೂ. ಕಾಲೇಜಿನ ಪ್ರಾಂಶುಪಾಲ ಕಿರಣ್ ಕುಮಾರ್, ಸೈಂಟ್ ಜೋಕಿಮ್ ಪ್ರೌಢಶಾಲಾ ವಿಭಾಗದ ಪ್ರಭಾರ ಮುಖ್ಯ ಶಿಕ್ಷಕಿ ಪೂರ್ಣಿಮಾ, ಸೈಂಟ್ ಜೋಕಿಮ್ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಸಿಸ್ಟರ್ ಹಿಲ್ದಾ ರೋಡ್ರಿಗಸ್, ಸೈಂಟ್ ಆನ್ಸ್ ಶಾಲಾ ಉಪ ನಾಯಕಿ ಶುತಿ ರೈ ಉಪಸ್ಥಿತರಿದ್ದರು. ಸಾಂಸ್ಕೃತಿಕ ,ಕ್ರೀಡೆ ಮತ್ತು ಕಲಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸೈಂಟ್ ಆನ್ಸ್ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ದಕ್ಷಾ ಪ್ರಸಾದ್ ಸ್ವಾಗತಿಸಿ, ಪ್ರಾಂಶುಪಾಲ ವಂ| ಅಮಿತ್ ಪ್ರಕಾಶ್ ರೋಡ್ರಿಗಸ್ ವರದಿ ವಾಚಿಸಿದರು. ಶಾಲ ನಾಯಕ ಅಖಿಲ್ ಅನಿಲ್ ವಂದಿಸಿದರು . ಸಹ ಶಿಕ್ಷಕಿಯರಾದ ಝೀನತ್ ಬಾನು ಹಾಗೂ ಸಂಗೀತಾ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.