ಕೆಯ್ಯೂರು: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬೊಳಿಕಲ ಇದರ ವಾರ್ಷಿಕೋತ್ಸವ ಕಾರ್ಯಕ್ರಮ ಡಿ.9ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಸಂಜೆ ನಡೆದ ಸಭಾ ಕಾರ್ಯಕ್ರಮವನ್ನು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ನಿವೃತ್ತ ಮುಖ್ಯಗುರು ಸುಧಾಕರ ರೈ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಾಲೆಯ ಪ್ರಗತಿಗೆ ಊರಿನ ಜನರ ಸಹಕಾರ ಅಗತ್ಯ. ಮಕ್ಕಳ ಜ್ಞಾನದ ಭಂಡಾರ ಹೆಚ್ಚಾದಂತೆ ಮಕ್ಕಳು ಪ್ರತಿಭಾವಂತರಾಗುತ್ತಾರೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಲಾವಣ್ಯ ಸಿ.ರೈ, ಶಿಕ್ಷಣ ಪದ್ದತಿಯ ಬದಲಾವಣೆಗೆ ಏಕರೂಪದ ಶಿಕ್ಷಣ ಅಗತ್ಯವಾಗಿದೆ. ಸರಕಾರಿ ಉದ್ಯೋಗಿಗಳ ಮಕ್ಕಳಿಗೆ ಸರಕಾರಿ ಶಾಲೆಯಲ್ಲಿಯೇ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೇರಲು ಸಾಧ್ಯ ಎಂದು ಹೇಳಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ರಾಂತ ಪ್ರಾಂಶುಪಾಲ ಝೇವಿಯರ್ ಡಿ.ಸೋಜ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಗುರಿ ಇರಬೇಕು. ಇದಕ್ಕೆ ಪೂರಕವಾಗಿ ಶ್ರಮ ಅಗತ್ಯ. ಆಗ ಇಡೀ ಸಮಾಜವೇ ನಿಮ್ಮನ್ನು ಗುರುತಿಸುತ್ತದೆ. ಮಕ್ಕಳ ಹೆತ್ತವರಿಂದ ಪ್ರೋತ್ಸಾಹ ಸಿಕ್ಕಾಗ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕ್ ಆಪ್ ಬರೋಡ ನಿವೃತ್ತ ಬ್ಯಾಂಕ್ ಉದ್ಯೋಗಿ ಕಲಾಯಿ ನಾರಾಯಣ ರೈ ಶಾಲಾ ಹಸ್ತ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಕುಮಾರ್ ರೈ, ಶಾಲಾ ವಾರ್ಷಿಕೋತ್ಸವ ಸಮಿತಿ ಗೌರವಾಧ್ಯಕ್ಷ ಶಶಿಧರ ರಾವ್ ಬೊಳಿಕಲ, ಅಧ್ಯಕ್ಷ ರಾಮಣ್ಣ ಗೌಡ ಮಾಡಾವು, ಉಪಾಧ್ಯಕ್ಷ ಸುರೇಶ್ ರೈ ಬಿ.ಕೆ, ಶ್ರೀ ದೇವಿ ಇಲೆಕ್ಟ್ರಿಕಲ್ ಮಾಡಾವು ಮಾಲಕ ಸುಬ್ರಾಯ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ಗೌಡ ಭಾಗವಹಿಸಿದ್ದರು.
ಈ ವೇಳೆ ಶಾಲಾ ದತ್ತಿನಿಧಿಯಿಂದ ಬಹುಮಾನ ವಿತರಣೆ ಮಾಡಲಾಯಿತು. ಶಾಲೆಗೆ ವಿಶೇಷ ಕೊಡುಗೆಗಳನ್ನು ಕೊಟ್ಟ ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಾರ್ಷಿಕೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ನಡೆಸಿದ ಸಾಂಸ್ಕೃತಿಕ ಮತ್ತು ಕ್ರೀಡಾ ಕೂಟದಲ್ಲಿ ಬಾಗವಹಿಸಿದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ನಂತರ ಬೊಳಿಕಲ ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳು ಸೇರಿದಂತೆ, ಹಿರಿಯ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಮುಖ್ಯಗುರು ಶಶಿಕಲಾ ವರದಿ ವಾಚಿಸಿ ಸ್ವಾಗತಿಸಿದರು. ಶಿಕ್ಷಕಿ ದಿವ್ಯಾ ರೈ ವಂದಿಸಿ, ಬಾಸ್ಕರ ರೈ ಮಠ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ ವೃಂದ, ಮಕ್ಕಳ ಪೋಷಕರ, ಸಂಘ ಸಂಸ್ಥೆಗಳ, ಗ್ರಾಮಸ್ಥರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.