ಅಳಿಕೆ ಜೆಡ್ಡು ಆಯುರ್ವೇದ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಗವ್ಯ-ಆಯುರ್ವೇದ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ಉದ್ಘಾಟನೆ

0

ವೈದ್ಯಕೀಯ ಹಾಗೂ ಶಿಕ್ಷಣ ವೃತ್ತಿಯಾಗಬಾರದು, ಸೇವೆಯಾಗಬೇಕು: ಒಡಿಯೂರು‌ ಶ್ರೀ

ಗೋವು ಹಾಗೂ ಆಯುರ್ವೇದ ಜೊತೆಜೊತೆಯಾಗಿ ಸಾಗುತ್ತಿದೆ: ಡಾ| ಪ್ರಭಾಕರ ಭಟ್ ಕಲ್ಲಡ್ಕ

ಆರೋಗ್ಯಯುತ ಜೀವನಕ್ಕೆ ಜೆಡ್ಡು ಮನೆಯವರ ಕೊಡುಗೆ ಅಪಾರ: ಪದ್ಮನಾಭ ಪೂಜಾರಿ ಸಣ್ಣಗುತ್ತು

ಪಂಚಗವ್ಯ ಚಿಕಿತ್ಸೆಯಿಂದ ಕ್ಯಾನ್ಸರ್ ಉಪಶಮನ ಸಾಧ್ಯ: ಡಾ| ಡಿ. ಪಿ. ರಮೇಶ್

ವಿಟ್ಲ: ಆಹಾರವೇ ಔಷಧಿಯಾಗಬೇಕು. ಮನುಷ್ಯನ ಸ್ವಾರ್ಥಕ್ಕಾಗಿ ಎಲ್ಲವೂ ಕಲಬೆರಕೆಯಾಗಿ‌ ಹೋಗಿದೆ. ವೈದ್ಯಕೀಯ ಹಾಗೂ ಶಿಕ್ಷಣ ವೃತ್ತಿಯಾಗಬಾರದು, ಸೇವೆಯಾಗಬೇಕು. ನಮ್ಮ ಪೀಳಿಗೆಗೆ ನಮ್ಮ ತನವನ್ನು ತಿಳಿಸುವ ಕೆಲಸವಾಗಬೇಕು ಇಲ್ಲವಾದರೆ ನಾವು ಸೋಲುತ್ತೇವೆ. ಗೋವು ಹಾಗೂ ನಮ್ಮೊಳಗಿನ ಸಂಬಂಧ ಉತ್ತಮವಾಗಿರಬೇಕು ಗೋವುಗಳು ನಡೆದಾಡುವ ಔಷಧಾಲಯ. ದೇಶಿತಳಿಗಳನ್ನು ಬೆಳೆಸುವ ಕೆಲಸವಾಗಬೇಕು. ಅದರ ಆರಂಭ ಜೆಡ್ಡುವಿನಿಂದಲೇ ಆಗಲಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಡಿ.11ರಂದು ಜೆಡ್ಡು ಆಯುರ್ವೇದ ಸೇವಾ ಟ್ರಸ್ಟ್, ಅಳಿಕೆ ಹಾಗೂ ಗೋಸೇವಾ ಗತಿವಿಧಿ, ಕರ್ನಾಟಕ ದಕ್ಷಿಣ ಪ್ರಾಂತ ಇದರ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದಲ್ಲಿರುವ ಜೆಡ್ಡು ಆಯುರ್ವೇದ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಗವ್ಯ-ಆಯುರ್ವೇದ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಜೀವನದ ಗತಿಗೆ ಮತಿಕೊಡುವ ತಾಕತ್ತು ಗೋವಿಗಿದೆ‌. ಗೋವು ಎಂದರೆ ಸಂಪತ್ತು. ವೃದ್ಧಾಶ್ರಮವನ್ನು ಹುಟ್ಟುಹಾಕುವುದು ನಮ್ಮ ಸಂಸ್ಕೃತಿ ಅಲ್ಲ. ಪ್ರೀತಿ ಕ್ಷೀಣವಾಗಿದೆ. ಮನುಷ್ಯ ಮನುಷ್ಯ ಮದ್ಯೆ ಇರುವ ಅಂತರ ಹೆಚ್ಚಾಗಿದೆ. ನಮ್ಮನ್ನು ನಾವು ಅರಿತುಕೊಳ್ಳುವ ಕೆಲಸವಾಗಬೇಕು. ಅವರ ಈ ಒಂದು ಕೆಲಸಕ್ಕೆ ನಾವೆಲ್ಲರೂ ಸಹಕರಿಸೋಣ. ಅಡೆ-ತಡೆಯನ್ನು ಬದಿಗಿಟ್ಟು ಮುನ್ನಡೆಯುವ ಪ್ರಯತ್ನ‌ ನಮ್ಮದಾಗಲಿ. ಇತಿ-ಮಿತಿಯ ಬದುಕು ನಮ್ಮದಾಗಬೇಕು ಎಂದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ‌ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್, ಕಲ್ಲಡ್ಕರವರು ಗವ್ಯ-ಆಯುರ್ವೇದ ಕ್ಯಾನ್ಸರ್ ಚಿಕಿತ್ಸಾ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ ಕಾಲಚಕ್ರ ತಿರುಗುತ್ತಿರುವಂತದ್ದು, ನಾವು ಒಂದು ಹಂತದಲ್ಲಿ ಬಹಳ ಕೆಳಗೆ‌ ಹೋಗಿದ್ದೆವು. ಇದೀಗ ಕಾಲಚಕ್ರ ಎತ್ತರಕ್ಕೆ ಏರುವ ಕಾಲಘಟ್ಟವಿದು. ನಾವು ಮಾನಸಿಕವಾಗಿ‌ ಸೋತಿದ್ದೇವೆ. ಆರೋಗ್ಯಯುತ ಜೀವನ ನಮ್ಮದಾಗಬೇಕು. ಆಯುರ್ವೇದ ಚಿಕಿತ್ಸಾ ಪದ್ದತಿ ಬಹಳಷ್ಟು ಮುಂದುವರೆದಿದೆ.
ಆಂಗ್ಲಭಾಷಿಗರ ಅನಸರಣೀಯ ನಮ್ಮ ಚಿಂತನೆಗಳು ಬದಲಾಗಬೇಕು. ನಮ್ಮ ಬಗೆಗಿನ ಕೀಳರಿಮೆ ದೂರವಾಗಬೇಕು. ಹಸುವಿನಿಂದ ಸಿಗುವಂತಹದ್ದು ಎಲ್ಲವೂ ನಮ್ಮ ಜೀವನಕ್ಕೆ ಪೂರಕ. ಭೂಮಿಗೆ ಶಕ್ತಿ ತುಂಬಿಸುವ ಕೆಲಸ ಗೋವಿನಿಂದ ಆಗುತ್ತಿದೆ. ಗೋವು ಹಾಗೂ ಆಯುರ್ವೇದ ಜೊತೆ ಜೊತೆಯಾಗಿ ಸಾಗುತ್ತಿದೆ. ಜನಾಭಿಪ್ರಾಯ ಮೂಡಿಸುವ ಕಾರ್ಯ ನಮ್ಮಿಂದ ಆಗಬೇಕು. ಗೋವಿನಿಂದ ನಮ್ಮ ಬದುಕಾಗಬೇಕು. ಮಾತೃತ್ವದ ಶಕ್ತಿ ಮಹಿಳೆಯರಲ್ಲಿದೆ. ನಮ್ಮ ಹಾಗೂ ಅಮ್ಮನ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಬೇಕು.
ನಮ್ಮ‌ ತನವನ್ನು ಉಳಿಸುವ ಕೆಲಸವಾಗಬೇಕು. ನಮ್ಮ ಆಹಾರ ಪದ್ದತಿಯ ಬಗ್ಗೆ ನಮಗೆ ಅರಿವಿರಬೇಕು. ಕ್ಯಾನ್ಸರ್ ರೋಗದಿಂದ ಎದ್ದು ಬಂದಿರುವವರು ಹಲವರಿದ್ದಾರೆ ಎಂದರು.

ಅಳಿಕೆ ಗ್ರಾ.ಪಂ. ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹೊಸತನವನ್ನು‌ ಹುಡುಕುತ್ತಿರುವವರು ಜೆಡ್ಡು ಗಣಪತಿ ಭಟ್ ರವರು. ದೇವಾಲಯ,‌ವಿದ್ಯಾಲಯ, ವೈದ್ಯಾಲಯ ಅಳಿಕೆಯಲ್ಲಿದೆ. ಅವೆಲ್ಲವೂ ಯಶಸ್ವಿಯಾಗಿ ನಡೆಯುತ್ತಿವೆ. ಆರೋಗ್ಯಯುತ ಜೀವನಕ್ಕೆ ಜೆಡ್ಡು ಮನೆಯವರ ಕೊಡುಗೆ ಅಪಾರವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಬೆಂಗಳೂರಿನ ಖ್ಯಾತ ಗವ್ಯ ಆಯುರ್ವೇದ ಕ್ಯಾನ್ಸರ್ ಚಿಕಿತ್ಸಾ ತಜ್ಞರಾಗಿರುವ ಡಾ| ಡಿ. ಪಿ. ರಮೇಶ್ ರವರು ಮಾತನಾಡಿ ಕ್ಯಾನ್ಸರ್ ಮಾರಣಾಂತಿಕ‌ ದೀರ್ಘ ಕಾಯಿಲೆಯಾಗಿದೆ. ವಿದೇಶದಲ್ಲಿ ಆವಿಷ್ಕಾರ ಮಾಡಿರುವ ಔಷಧಿಯನ್ನು‌ ನಾವು ಸೇವನೆ ಮಾಡುತ್ತಿದ್ದೇವೆ. ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡುವ ವ್ಯವಸ್ಥೆ ನಡೆಯುತ್ತಿದೆ. ವಿಜ್ಞಾನ – ತಂತ್ರಜ್ಞಾನದ ಹೆಸರಲ್ಲಿ ಹೊಸಹೊಸ ರೋಗಗಳ ಹುಟ್ಟಾಗುತ್ತಿದೆ. ಪಂಚಗವ್ಯ ಚಿಕಿತ್ಸೆಯಿಂದ ಕ್ಯಾನ್ಸರ್ ರೋಗಿಗಳು ಬದುಕುತ್ತಿರುವ ಹಲವಾರು ಉದಾಹರಣೆಗಳಿವೆ. ನಮ್ಮ ದೇಶದ ಜನ ಆಯುರ್ವೇದವನ್ನು ಒಪ್ಪುವ ಪರಿಸ್ಥಿತಿಯಲ್ಲಿಲ್ಲ. ಆಯುರ್ವೇದ ನಿಂತಿರುವುದು ಪಂಚಗವ್ಯದಿಂದ. ಗೋಮೂತ್ರ, ಗೋಮಯದಲ್ಲಿ ಆಯುರ್ವೇದ ಔಷಧಿಗಳ ಸಂಶೋಧನೆ ಆಗುತ್ತದೆ. ನಮ್ಮ ಜಾಗೃತಿ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಿ ಎಂದರು.

ಗವ್ಯ ಆಯುರ್ವೇದ ಚಿಕಿತ್ಸೆಯಿಂದ ಗುಣಮುಖರಾದ ಸುಂದರ ಪೂಜಾರಿ ‌ಮತ್ತು ಜ್ಯೋತಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾಸರಗೋಡು ಗೋವಂಶ ಸಂರಕ್ಷಣಾ ಸಂಸ್ಥೆಯ ಟ್ರಸ್ಟಿ ಪ್ರೊ.ಪಿ.ಯನ್ ಮೂಡಿತ್ತಾಯ, ಕಾಸರಗೋಡು ಜಗದಂಬಾ ಗೋವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಸುಬ್ರಹ್ಮಣ್ಯ ಪ್ರಸಾದ ನೆಕ್ಕರೆಕಳ, ಅಳಿಕೆ ಜೆಡ್ಡು ಆಯುರ್ವೇದ ಸೇವಾ ಟ್ರಸ್ಟ್ ನ ಅಧ್ಯಕ್ಷ ಜೆಡ್ಡು ನಾರಾಯಣ ಭಟ್,
ಜೆಡ್ಡು ಆಯುರ್ವೇದ ಸೇವಾ ಟ್ರಸ್ಟ್‌ ಅಧ್ಯಕ್ಷ ಜೆಡ್ಡು ನರಸಿಂಹ ಭಟ್, ಶಿವರಾಮ ರಾವ್, ನರಸಿಂಹ ಬಲ್ಲಾಳ್ ಡಾ.ಸುರೇಶ್ ಕೂಡೂರು, ಡಾ ಕಮಲಾ ಪ್ರಭಾಕರ ಭಟ್, ಮೈತ್ರಿ ಗುರುಕುಲದ ರಮೇಶ, ಶ್ಯಾಮ ಭಟ್,, ಉರಿಮಜಲು ರಮೇಶ್‌ ಮೊದಲಾದವರು ಉಪಸ್ಥಿತರಿದ್ದರು.

ಅಳಿಕೆ ಜೆಡ್ಡು ಆಯುರ್ವೇದ ಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯರಾದ ಡಾ. ಜೆಡ್ಡು ಗಣಪತಿ ಭಟ್ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮನೋರಮಾ ಜಿ. ಭಟ್ ಪ್ರಾರ್ಥಿಸಿದರು. ಕರ್ನಾಟಕ ದಕ್ಷಿಣ ಪ್ರಾಂತ ಗೋಸೇವಾ ಗತಿವಿಧಿ ಸಂಯೋಜಕ ಪ್ರವೀಣ ಸರಳಾಯ ವಂದಿಸಿದರು.
ಅಳಿಕೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕಾನ ಈಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here