ಆಲಂಕಾರು ಪೇಟೆಯಲ್ಲಿ ಅಳವಡಿಸಿದ್ದ ಅವಧಿ ಮೀರಿದ 6, ಪರವಾನಿಗೆ ಪಡೆಯದ 2 ಬ್ಯಾನರ್ ಗ್ರಾ.ಪಂ.ನಿಂದ ತೆರವು

0

ಪರವಾನಿಗೆ ಪಡೆದುಕೊಂಡಲ್ಲಿ ಮತ್ತೆ ಅಳವಡಿಕೆಗೆ ಅವಕಾಶ-ಗ್ರಾ.ಪಂ.ಸ್ಪಷ್ಟನೆ

ಪುತ್ತೂರು: ಆಲಂಕಾರು ಪೇಟೆಯಲ್ಲಿ ಅಳವಡಿಸಿದ್ದ ಅವಧಿ ಮೀರಿದ 6 ಹಾಗೂ ಪರವಾನಿಗೆ ಪಡೆಯದೇ ಅಳವಡಿಸಿದ್ದ 2 ಬ್ಯಾನರ್‌ಗಳನ್ನು ಗ್ರಾ.ಪಂ. ಡಿ.8ರಂದು ಸಂಜೆ ತೆರವುಗೊಳಿಸಿದೆ. ಈ ಮಧ್ಯೆ ಬ್ಯಾನರ್ ತೆರವಿಗೆ ಆಕ್ಷೇಪ ವ್ಯಕ್ತಗೊಂಡ ಘಟನೆಯೂ ನಡೆದಿದ್ದು ಪರವಾನಿಗೆ ಪಡೆದುಕೊಂಡಲ್ಲಿ ಮತ್ತೆ ಬ್ಯಾನರ್ ಅಳವಡಿಕೆಗೆ ಅವಕಾಶ ನೀಡುವುದಾಗಿ ಗ್ರಾ.ಪಂ.ಸ್ಪಷ್ಟಪಡಿಸಿದೆ.


ಆಲಂಕಾರು ಪೇಟೆಯಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಗ್ರಾ.ಪಂ.ನಿಂದ ಪರವಾನಿಗೆ ಪಡೆದುಕೊಂಡು ಹಾಗೂ ಪಡೆಯದೆಯೇ ಕೆಲವೊಂದು ಬ್ಯಾನರ್ ಅಳವಡಿಸಲಾಗಿತ್ತು. 1 ತಿಂಗಳ ಪರವಾನಿಗೆ ಪಡೆದುಕೊಂಡು ಬ್ಯಾನರ್ ಅಳವಡಿಸಿದ್ದವರು ಎರಡು ತಿಂಗಳು ಕಳೆದರೂ ಬ್ಯಾನರ್ ತೆರವುಗೊಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವಧಿ ಮೀರಿದ ಹಾಗೂ ಪರವಾನಿಗೆ ಪಡೆಯದೇ ಅಳವಡಿಸಿರುವ ಬ್ಯಾನರ್‌ಗಳ ತೆರವುಗೊಳಿಸಲು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಅದರಂತೆ ಡಿ.8ರಂದು ಸಂಜೆ ಕಾರ್ಯಾಚರಣೆ ನಡೆಸಿದ ಗ್ರಾ.ಪಂ. ಅಧಿಕಾರಿ ವರ್ಗ ಅವಧಿ ಮೀರಿದ 6 ಹಾಗೂ ಪರವಾನಿಗೆ ಪಡೆಯದೇ ಅಳವಡಿಸಿದ್ದ 2 ಬ್ಯಾನರ್‌ಗಳ ತೆರವು ಮಾಡಿದೆ ಎಂದು ವರದಿಯಾಗಿದೆ.


ತೆರವಿಗೆ ಆಕ್ಷೇಪ:
ಆಲಂಕಾರು ಪೇಟೆಯಲ್ಲಿ ಅಳವಡಿಸಿದ್ದ ಅವಧಿ ಮೀರಿದ ಹಾಗೂ ಪರವಾನಿಗೆ ಪಡೆಯದೆ ಅಳವಡಿಸಿರುವ ಬ್ಯಾನರ್‌ಗಳ ತೆರವಿಗೆ ಗ್ರಾ.ಪಂ.ಅಧಿಕಾರಿ ವರ್ಗ ಮುಂದಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಬ್ಯಾನರ್ ಅಳವಡಿಸಿರುವ ಸಂಘಟನೆಗಳ ಸದಸ್ಯರು ಸ್ಥಳಕ್ಕಾಗಮಿಸಿ ಆಕ್ಷೇಪಿಸಿದ ಘಟನೆಯೂ ನಡೆದಿದೆ. ಪರವಾನಿಗೆ ನೀಡಿ ಬ್ಯಾನರ್ ತೆರವುಗೊಳಿಸದಂತೆ ಬ್ಯಾನರ್ ಅಳವಡಿಸಿದವರು ಅಧಿಕಾರಿಗಳಲ್ಲಿ ಮನವಿ ಮಾಡಿದರು ಎಂದು ತಿಳಿದುಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತ ಅವರು, 1 ತಿಂಗಳ ಅವಧಿಗೆ ಬ್ಯಾನರ್ ಅಳವಡಿಕೆಗೆ ಪಂಚಾಯತ್‌ನಿಂದ ಅವಕಾಶ ನೀಡಲಾಗಿತ್ತು. ಬ್ಯಾನರ್ ಅಳವಡಿಸಿ ಎರಡು ತಿಂಗಳು ಕಳೆದರೂ ನವೀಕರಣ ಮಾಡಿಲ್ಲ. ಅಲ್ಲದೇ ಪರವಾನಿಗೆ ಪಡೆಯದೆಯೇ ಬ್ಯಾನರ್ ಹಾಕಲಾಗಿದೆ. ಇಂತಹ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದೇವೆ. ಪರವಾನಿಗೆ ಪಡೆದುಕೊಂಡಲ್ಲಿ ಮತ್ತೆ ಬ್ಯಾನರ್ ಅಳವಡಿಕೆಗೆ ಅವಕಾಶ ನೀಡುತ್ತೇವೆ. ಅಲ್ಲಿಯ ತನಕ ತೆರವುಗೊಳಿಸಿದ ಬ್ಯಾನರ್‌ಗಳು ಪಂಚಾಯತ್ ಕಚೇರಿಯಲ್ಲಿರುತ್ತವೆ ಎಂದಿದ್ದಾರೆ. ತೆರವು ಕಾರ್ಯಚರಣೆಯಲ್ಲಿ ಪಂಚಾಯತ್ ಕಾರ್ಯದರ್ಶಿ ವಸಂತ ಶೆಟ್ಟಿ, ಸಿಬ್ಬಂದಿಗಳಾದ ವಸಂತ, ಗಿರಿಯಪ್ಪ ಪಾಲ್ಗೊಂಡಿದ್ದರು.


ಗ್ರಾ.ಪಂ.ನಿರ್ಣಯದಂತೆ ತೆರವು:
ಆಲಂಕಾರು ಪೇಟೆಯಲ್ಲಿ ಪರವಾನಿಗೆ ಪಡೆಯದೆ ಅಳವಡಿಸಿರುವ ಹಾಗೂ ಪರವಾನಿಗೆ ಅವಧಿ ಮುಗಿದಿದ್ದರೂ ತೆರವುಗೊಳಿಸದೇ ಇರುವ ಬ್ಯಾನರ್‌ಗಳ ತೆರವುಗೊಳಿಸಲು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಅದರಂತೆ ತೆರವು ಕಾರ್ಯಾಚರಣೆ ನಡೆಸಿ ಪರವಾನಿಗೆ ಪಡೆಯದ 2 ಹಾಗೂ ಅವಧಿ ಮೀರಿದ 6 ಬ್ಯಾನರ್ ತೆರವುಗೊಳಿಸಲಾಗಿದೆ. ಪರವಾನಿಗೆ ಪಡೆದುಕೊಂಡಲ್ಲಿ ಮತ್ತೆ ಅಳವಡಿಕೆಗೆ ಅವಕಾಶ ನೀಡಲಾಗುವುದು.
ವಸಂತ ಶೆಟ್ಟಿ, ಕಾರ್ಯದರ್ಶಿ
ಗ್ರಾ.ಪಂ.ಆಲಂಕಾರು

LEAVE A REPLY

Please enter your comment!
Please enter your name here