ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವೃತ್ತಿ ಮಾರ್ಗದರ್ಶನ

0

ಪಿಯುಸಿ ಎಂಬುದು ವಿದ್ಯಾರ್ಜನೆಯ ಪ್ರಮುಖ ಕಾಲಘಟ್ಟ : ಸತ್ಯಜಿತ್ ಉಪಾಧ್ಯಾಯ


ಪುತ್ತೂರು: ಪದವಿಪೂರ್ವ ಶಿಕ್ಷಣ ಎಂಬುದು ವಿದ್ಯಾರ್ಜನೆಯ ಪ್ರಮುಖ ಕಾಲಘಟ್ಟ. ಈ ವಿದ್ಯಾಭ್ಯಾಸವನ್ನು ಸಫಲತಾಪೂರ್ವಕವಾಗಿ ಪೂರೈಸಿದಾಗ ಭವಿಷ್ಯದ ಜೀವನ ಸುಗಮ. ಪಿ.ಯು ನಂತರ ಯಾವ ಕ್ಷೇತ್ರ ಆಯ್ಕೆ ಮಾಡಬೇಕು ಎನ್ನುವುದನ್ನು ಪೋಷಕರು, ಮಕ್ಕಳು, ಉಪನ್ಯಾಸಕರು ಜೊತೆಯಾಗಿ ನಿರ್ಧರಿಸಿದರೆ ಉತ್ತಮ ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಹೇಳಿದರು.


ಅವರು ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪಿ.ಯು.ಸಿಯ ನಂತರ ಮುಂದೇನು? ಎಂಬ ವಿಷಯವಾಗಿ ಸೋಮವಾರ ವೃತ್ತಿ ಮಾರ್ಗದರ್ಶನ ನೀಡಿದರು.
ಸ್ಪಷ್ಟವಾದ ಗುರಿ ಹಾಕಿಕೊಂಡಾಗ ಕಾರ್ಯಕ್ಷಮತೆ ಚೆನ್ನಾಗಿರುತ್ತದೆ. ಗುರಿಯ ಕಡೆಗೆ ಲಕ್ಷ್ಯ ಇರುತ್ತದೆ. ಆದುದರಿಂದ ಮುಂದಿನ ಐದು ವರ್ಷದ ಯೋಜನೆಯನ್ನು ಇಂದೇ ರೂಪಿಸಿಕೊಳ್ಳಬೇಕು ಎಂದರಲ್ಲದೆ ಜೆಇಇ, ಕೆ ಸೆಟ್, ಎನ್‌ಡಿಎ, ನಾಟಾ ಮೊದಲಾದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿವರಣೆ ನೀಡಿದರು. ವಿವಿಧ ಉದ್ಯೋಗಾವಕಾಶಗಳ ಬಗ್ಗೆ, ಅಂತಹ ಉದ್ಯೋಗಗಳಿಗೆ ವಿದ್ಯಾರ್ಥಿಗಳು ತಯಾರಾಗುವ ಬಗೆಗೆ ವಿವರವಾಗಿ ತಿಳಿಸಿದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ. ಮಾತನಾಡಿ ಯಾವುದೇ ಕೋರ್ಸುಗಳನ್ನು ಸರಿಯಾಗಿ ಮಾಹಿತಿ ಇಲ್ಲದೆ ಆಯ್ಕೆ ಮಾಡಬಾರದು. ಒಮ್ಮೆ ಒಂದು ಕೋರ್ಸ್‌ಗೆ ಏರಿ ನಂತರ ಮಧ್ಯದಲ್ಲಿ ಅದನ್ನು ಬಿಟ್ಟು ಬರುವುದು, ಮುಂದುವರೆಸಲಾಗದೆ ಕಷ್ಟಪಡುವುದು ಆಗಬಾರದು. ಇಂದು ಸರ್ಕಾರಿ ಕ್ಷೇತ್ರಗಳಲ್ಲೂ ಅಪಾರ ಅವಕಾಶಗಳಿವೆ. ಎಸ್.ಡಿ.ಎ, ಎಫ್.ಡಿ.ಎ, ಕೆ.ಎ.ಎಸ್, ಐ.ಎ.ಎಸ್ ಅಲ್ಲದೆ ಬ್ಯಾಂಕಿಂಗ್‌ಗೆ ಸಂಬಂದಿಸಿ ಐಬಿಪಿಎಸ್ ಪರೀಕ್ಷೆಗಳಿವೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಗನುಗುಣವಾಗಿ ಯಾವುದೇ ರಂಗವನ್ನು ಆಯ್ದುಕೊಳ್ಳಬಹುದು ಎಂದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಿದ್ಯಾರ್ಥಿಗಳ ಸವಾಂಗೀಣ ಭವಿಷ್ಯ ಪೋಷಕರ, ವಿದ್ಯಾರ್ಥಿಗಳ, ಉಪನ್ಯಾಸಕರ ಜವಾಬ್ದಾರಿ. ಹಾಗಾಗಿ ಎಲ್ಲರೂ ಒಟ್ಟಾಗಿ ಮುನ್ನಡೆಯುವ ಅವಶ್ಯಕತೆ ಇದೆ. ಇದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. ಪೋಷಕರು ವಿದ್ಯಾರ್ಥಿಗಳಿಗೆ ಆಸರೆಯಾಗಬೇಕು. ಆದರೆ ಯಾವ ಕಾರಣಕ್ಕೂ ಮಕ್ಕಳಿಗೆ ಮೊಬೈಲ್ ಕೊಡಬಾರದು. ಓದುವ ಮಕ್ಕಳಿಗಾಗಿ ಹೆತ್ತವರು ತಮ್ಮ ಸಮಯವನ್ನು ಮೀಸಲಾಗಿಡಬೇಕು. ನಕ್ಷತ್ರಿಕನಂತೆ ಮಕ್ಕಳ ಹಿಂದೆಯೇ ಇದ್ದು ಗಮನಿಸುತ್ತಿರಬೇಕು ಎಂದರು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರು ಸಭೆಯಲ್ಲಿ ಹಾಜರಿದ್ದರು. ಪ್ರಯೋಗಾಲಯ ಸಹಾಯಕ ಮುರಳಿ ಮೋಹನ ಸಹಕರಿಸಿದರು.

LEAVE A REPLY

Please enter your comment!
Please enter your name here