ಪುತ್ತೂರು: ಮಾಯಿದೆ ದೇವುಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಡಿ.13ರಂದು ನಡೆಯಿತು. ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಅಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ಸಂಸ್ಥಾಪಕರು ಮತ್ತು ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ ಡಾ|ಶ್ರೀಶ ಭಟ್ ಮಾತನಾಡಿ ಮಕ್ಕಳಿಗೆ ಆತ್ಮ ವಿಶ್ವಾಸ ತುಂಬಿ ಅವರ ಕನಸು ನನಸು ಮಾಡುವ ಗುರಿಯನ್ನು ಪೋಷಕರು ಮಕ್ಕಳಲ್ಲಿ ಬೆಳೆಸಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್ರವರು ಮಾತನಾಡಿ ಕನ್ನಡ ಮಾಧ್ಯಮದ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಶಿಕ್ಷಕರು ಉತ್ತಮ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದು ಹೇಳಿದರು. ವೇದಿಕೆಯಲ್ಲಿ ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಅಕ್ಷತಾ ಭಟ್, ಶಾಲಾ ಮುಖ್ಯ ಶಿಕ್ಷಕಿ ಜಾನೆಟ್ ಡಿ’ಸೋಜ, ಶಾಲಾ ನಾಯಕಿ ರೆನಿಶಾ ಡಿ’ಸೋಜ ಉಪಸ್ಥಿತರಿದ್ದರು. ನಿರಂತರ ಯೋಗ ಸಾಧನೆಯಲ್ಲಿ 1 ಗಂಟೆ 8 ನಿಮಿಷ ಪರಿವೃತ್ತ ಪದ್ಮಾಸನದಲ್ಲಿ ಕುಳಿತು ಕರ್ನಾಟಕ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ 4ನೇ ತರಗತಿ ವಿದ್ಯಾರ್ಥಿನಿ ಮೇಘನಾ ರೈಯವರನ್ನು ಮತ್ತು ಮುಖ್ಯ ಅತಿಥಿಯಾಗಿದ್ದ ಹಿರಿಯ ವಿದ್ಯಾರ್ಥಿ ಡಾ| ಶ್ರೀಶ ಭಟ್ರವರನ್ನೂ ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.